ಸರ್ಕಾರ ಮಾಡದ ಕೆಲಸ ಮಾಡುತ್ತಿರುವ ಕೆಎಲ್‌ಇ ಸಂಸ್ಥೆ: ವಿ. ಸೋಮಣ್ಣ

KannadaprabhaNewsNetwork |  
Published : Nov 15, 2024, 12:33 AM IST
ಕೆಎಲ್‌ಇ ಸಂಸ್ಥೆಯ 109ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಸಚಿವ ವಿ.ಸೋಮಣ್ಣ ಉದ್ಘಾಟಿಸಿದರು | Kannada Prabha

ಸಾರಾಂಶ

ಹೃದಯ ಶ್ರೀಮಂತಿಕೆಯಿಂದ ಎಲ್ಲ ಕಾರ್ಯಗಳನ್ನು ಮಾಡಬಹುದು ಎಂಬುದನ್ನು ಕೆಎಲ್ಇ ಸಂಸ್ಥೆಯ ಸಪ್ತರ್ಷಿಗಳು ಹಾಗೂ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರು ನಾಡಿಗೆ ತೋರಿಸಿಕೊಟ್ಟಿದ್ದಾರೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಹೃದಯ ಶ್ರೀಮಂತಿಕೆಯಿಂದ ಎಲ್ಲ ಕಾರ್ಯಗಳನ್ನು ಮಾಡಬಹುದು ಎಂಬುದನ್ನು ಕೆಎಲ್ಇ ಸಂಸ್ಥೆಯ ಸಪ್ತರ್ಷಿಗಳು ಹಾಗೂ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರು ನಾಡಿಗೆ ತೋರಿಸಿಕೊಟ್ಟಿದ್ದಾರೆ. ಶಿಕ್ಷಣದ ಕ್ರಾಂತಿ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ಬಸವಣ್ಣನವರ ಕಾಯಕ ದಾಸೋಹ ಹಾಗೂ ಇವನ್ಯಾರವ ಇವನ್ಯಾರವ ಎನ್ನದೇ ಕೋಟ್ಯಂತರ ಮಕ್ಕಳಿಗೆ ವಿದ್ಯಾದಾನ ಮಾಡುತ್ತಿರುವ ಸಂಸ್ಥೆ ಸರ್ಕಾರ ಮಾಡದ ಒಳ್ಳೆಯ ಕಾರ್ಯದಲ್ಲಿ ನಿರತರಾಗಿರುವುದು ಶ್ಲಾಘನೀಯ ಎಂದ ಅವರು, ರಾಜ್ಯದ ಪ್ರತಿಯೊಂದು ಮೂಲೆಯಲ್ಲೂ ಕೆಎಲ್ಇ ಶಿಕ್ಷಣ ಸಂಸ್ಥೆಗಳು ನಿರ್ಮಾಣವಾಗಲಿ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ನಗರದಲ್ಲಿ ಗುರುವಾರ ಕೆಎಲ್ಇ ಸಂಸ್ಥೆಯ 109ನೇ ಸಂಸ್ಥಾಪನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಂಸ್ಥೆಯ ಆಡಳಿತದ ಕಾರ್ಯವೈಖರಿ ಹಾಗೂ ಅಭಿವೃದ್ಧಿಗೆ ಸಪ್ತರ್ಷಿಗಳ ಆಶೀರ್ವಾದ ಸದಾ ಇದೆ. ಈಗಾಗಲೇ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳಿದ್ದು, ದಕ್ಷಿಣ ಕರ್ನಾಟಕದಲ್ಲೂ ಉತ್ತಮ ಶಿಕ್ಷಣ ನೀಡಲು ಆ ಭಾಗದಲ್ಲೂ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಬೇಕು. ದೇಶ-ವಿದೇಶದಲ್ಲಿ ಸಾಧನೆ ಮಾಡುವಲ್ಲಿ ಕೆಎಲ್ಇ ವಿದ್ಯಾರ್ಥಿಗಳು ಒಂದು ಹೆಜ್ಜೆ ಮುಂದಿದ್ದಾರೆ. ಯಾವುದೇ ಭಾಗಕ್ಕೆ ಹೋದರೂ ಇಲ್ಲಿನ ವಿದ್ಯಾರ್ಥಿಗಳು ಸಿಗುತ್ತಾರೆ. ಸಂಸ್ಥೆಗಳನ್ನು ಕಟ್ಟಿ ಬೆಳೆಸುವುದು ಅತ್ಯಂತ ಕಠಿಣ ಕೆಲಸ, ಒಳ್ಳೆಯ ಶಿಕ್ಷಣ ನೀಡಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಲ್ಲಿ ಕೆಎಲ್ಇ ಸಂಸ್ಥೆ ರಾಷ್ಟ್ರಕ್ಕೆ ಮಾದರಿಯಾಗಿದೆ ಎಂದವರು ಹೇಳಿದರು.

ಡಾ.ಪ್ರಭಾಕರ ಕೋರೆ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರೆ, ರಾಜ್ಯ ಸಂಪೂರ್ಣ ಸುಶಿಕ್ಷಿತ ಹಾಗೂ ಇನ್ನಷ್ಟು ಅಭಿವೃದ್ಧಿ ಪಥದಲ್ಲಿ ಸಾಗುತ್ತಿತ್ತು ಎಂದ ಅವರು, ಕೆಎಲ್‌ಇ ಶಿಕ್ಷಣ ಹಾಗೂ ಸಂಸ್ಕಾರ ನೀಡುವ ಸಂಸ್ಥೆಯಾಗಿದ್ದು, ದೇಶದಲ್ಲಿ ಅತ್ಯುತ್ತಮ ಸಂಸ್ಥೆಯಾಗಿ ಬೆಳೆಯಲಿ, ಶಿಕ್ಷಣ, ಆರೋಗ್ಯ, ಕೃಷಿ ಸಂಶೋಧನಾ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಗೈಯಲಿ ಎಂದು ಶುಭ ಹಾರೈಸಿದರು.

ನಾನೂ ಈ ಮಟ್ಟಕ್ಕೆ ಬೆಳೆಯಲು ಡಾ.ಕೋರೆ ಅವರ ಪಾತ್ರ ಬಹಳಷ್ಟಿದೆ. ಆದ್ದರಿಂದಲೇ ಸದಾ ಪ್ರಾರ್ಥಿಸುತ್ತ ಅವರನ್ನು ನೆನೆಯುತ್ತೇನೆ. ಅವರೊಬ್ಬ ಅಜಾತ ಶತ್ರು ಎಂದ ಸಚಿವ ಸೋಮಣ್ಣ, ಬೆಳಗಾವಿ ನಗರದಲ್ಲಿರುವ ಎಲ್ಲ ರೈಲ್ವೆ ಗೇಟ್‌ಗಳಿಗೆ ಮೇಲ್ಸುತುವೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿನ ಯೋಜನೆಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಬೆಳಗಾವಿ- ಧಾರವಾಡ ರೈಲ್ವೆ ಮಾರ್ಗ ನಿರ್ಮಾಣಕ್ಕಿರುವ ಅಡೆತಡೆಗಳನ್ನು ನಿವಾರಿಸಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು. ಕೆಎಲ್ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮಾತನಾಡಿ, ಸಪ್ತ ಋಷಿಗಳು ಅತ್ಯಂತ ಕಷ್ಟದಲ್ಲಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದರು. ಅನೇಕ ದಾನಿಗಳ ಸಹಾಯ, ಸಹಕಾರದಿಂದ ಸಂಸ್ಥೆ ಬೆಳೆದಿದೆ. ಅಂದು ಅವರು ತಮ್ಮ ಎಲ್ಲಾ ಕಷ್ಟಗಳನ್ನು ಬದಿಗಿರಿಸಿ ಜನಕಲ್ಯಾಣಕ್ಕಾಗಿ ಶೈಕ್ಷಣಿಕ ದಾಸೋಹಗೈದರು. ಆದ್ದರಿಂದಲೇ ಇಂದು ಸಂಸ್ಥೆ ಜಾಗತಿಕವಾಗಿ ವಿಸ್ತರಿಸಲು ಸಾಧ್ಯವಾಗಿದೆ. ಎಲ್ಲ ರೀತಿಯ ಗುಣಾತ್ಮಕ ಶಿಕ್ಷಣ ನೀಡುತ್ತಿದೆ. ಎಲ್ಲರ ಸಹಕಾರದಿಂದ ಹೆಮ್ಮರವಾಗಿ ಬೆಳೆದು ನಿಂತಿದೆ ಎಂದು ಹೇಳಿದರು.

ಬೆಳಗಾವಿ-ಪುಣೆ ಹಾಗೂ ಬೆಳಗಾವಿ-ಬೆಂಗಳೂರು ವಂದೇ ಭಾರತ್ ರೈಲು ಪ್ರಾರಂಭಿಸಿ. ಬೆಳಗಾವಿ-ಕಿತ್ತೂರು-ಧಾರವಾಡ ರೈಲು ಮಾರ್ಗ ಕಾಮಗಾರಿ ಮುಗಿಸಿ ರೈಲು ಸಂಚಾರ ಆರಂಭಿಸುವಂತೆ ಸಚಿವ ಸೋಮಣ್ಣ ಅವರನ್ನು ಒತ್ತಾಯಿಸಿದರು. ಡಿಸೆಂಬರ್‌ ತಿಂಗಳಲ್ಲಿ 300 ಹಾಸಿಗೆಗಳ ಕ್ಯಾನ್ಸರ್‌ ಆಸ್ಪತ್ರೆಯನ್ನು ರಾಷ್ಟ್ರಪತಿಗಳು ಜನಸೇವೆಗೆ ಅರ್ಪಿಸಲಿದ್ದಾರೆ ಎಂದು ತಿಳಿಸಿದರು.

ಪುಣೆಯ ರುಬಿ ಹಾಲ್ ಕ್ಲಿನಿಕ್‌ ನ ಮ್ಯಾನೆಜಿಂಗ್‌ ಟ್ರಸ್ಟಿ ಹಾಗೂ ಮುಖ್ಯ ಹೃದ್ರೋಗ ತಜ್ಞವೈದ್ಯ ಡಾ. ಫರ್ವೇಜ್ ಕೆ. ಗ್ರಾಂಟ ಮಾತನಾಡಿ, 50 ವರ್ಷಗಳ ಹಿಂದೆ ಜೆಎನ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕಳೆದ ವಿದ್ಯಾರ್ಥಿ ಜೀವನವನ್ನು ಮೆಲಕು ಹಾಕಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕೌಜಲಗಿ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಬಿ.ಜಿ. ದೇಸಾಯಿ ವೇದಿಕೆ ಮೇಲೆ ಇದ್ದರು.

ಡಾ ಮಹೇಶ ಗುರನಗೌಡರ, ಡಾ.ನೇಹಾ ದಡೇದ, ಡಾ.ಆದಿತ್ಯ ಆಚಾರ್ಯ ನಿರೂಪಿಸಿದರು. ಕೆಎಲ್ಇ ಆಜೀವ ಸದಸ್ಯ ಮಂಡಳಿಯ ಕಾರ್ಯಾಧ್ಯಕ್ಷೆ ಡಾ.ದೀಪಾ ಮೆಟಗುಡ್ಡ ವಂದಿಸಿದರು. 150ಕ್ಕೂ ಹೆಚ್ಚು ರಾಷ್ಟ್ರೀಯ ಅಂತಾರಾಷ್ಟ್ರೀಯ, ರಾಜ್ಯಮಟ್ಟದಲ್ಲಿ ಸಾಧನೆಗೈ ದ ವಿದ್ಯಾರ್ಥಿಗಳಿಗೆ ಪದಕ ನೀಡಿ ಹತ್ತು ಜನ ಶಿಕ್ಷಕ ಹಾಗೂ ಸಿಬ್ಬಂದಿಗೆ ಕೂಡ ಸತ್ಕರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಂ ಜಿ ವಿರೋಧಕ್ಕೆ ರೈತರಿಗೆ ಸಿಎಂ ಕರೆ
ನೀವೂ ಸಿಎಂ ಆಗಬೇಕು : ಡಿಕೆಗೆ ಪೂಜಾರಿ ಹಾರೈಕೆ