ಕನ್ನಡಪ್ರಭ ವಾರ್ತೆ ಬೆಳಗಾವಿಕೆಎಲ್ಇ ಸಂಸ್ಥೆಯೇ ನನಗೆ ಸರ್ವಸ್ವ. ನಾನೊಬ್ಬನೇ ಕೆಎಲ್‌ಇ ಸಾಧನೆಗಳಿಗೆ ಕಾರಣನಾದೆ ಎಂಬ ಅಹಂ ನನಗಿಲ್ಲ. ಒಬ್ಬನಿಂದ ಏನೂ ಆಗಲಾರದು. ನನಗೆ 40 ವರ್ಷಗಳ ಕಾಲ ತೆರೆದ ಮನಸಿನ ಸಹಕಾರ ನೀಡಿದ ನನ್ನ ಆಡಳಿತ ಮಂಡಳಿ ಸದಸ್ಯರ ಸಕಾರಾತ್ಮಕ ನಿಲುವುಗಳಿಂದ ನಾನು ಯಶಸ್ವಿಯಾದೆ ಎಂದು ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.
ಕೆಎಲ್ಇ ಸಂಸ್ಥೆ ನನಗೆ ಏನೆಲ್ಲ ನೀಡಿದೆ, ಬೆಳೆಸಿದೆ. ಆದ್ದರಿಂದ ಸಮಾಜಕ್ಕಾಗಿ ನಾನು ಸಾಧ್ಯವಾದಷ್ಟು ಸೇವೆ ನೀಡಲು ಪ್ರಯತ್ನಿಸಿದ್ದೇನೆ. ಸಪ್ತರ್ಷಿಗಳ ನೆನಹೆ ನನಗೆ ಉದಯ. ಅವರ ಮರೆವೇ ನನಗೆ ಅಸ್ತಮಾನ. ಅಂತಹ ಕೆಎಲ್ಇ ಕಟ್ಟಿ ಬೆಳೆಸಿದ ಸಂಸ್ಥಾಪಕರನ್ನು ಶಿಕ್ಷಣ ಪರಿವಾರದವರನ್ನು ಮನಸಾರೆ ಸ್ಮರಿಸುತ್ತೇನೆ. ಕೆಎಲ್ಇ ಸಂಸ್ಥೆಯನ್ನು ಸ್ಥಾಪಿಸಿದವರು 7 ಜನ ಶಿಕ್ಷಕರು. ಅವರ ತ್ಯಾಗ ಬಹುದೊಡ್ಡದು. ಅಂತಹ ಅಸಂಖ್ಯ ಶಿಕ್ಷಕರು ಇಲ್ಲಿ ತನು-ಮನ-ಧನದಿಂದ ದುಡಿದಿದ್ದಾರೆ. ಅವರು ಗುಣಾತ್ಮಕ ಶಿಕ್ಷಣ ನೀಡಿದರ ಫಲವೇ ಕೆಎಲ್ಇ ಸಂಸ್ಥೆಯು ಇಂದು ಅಗಾಧವಾಗಿ ಬೆಳೆಯಲು ಸಾಧ್ಯವಾಯಿತು ಎಂದು ಮುಕ್ತಕಂಠದಿಂದ ಶ್ಲಾಘಿಸಿದರು.
ಒಂದು ಮಹಾಸಂಸ್ಥೆಯ ಕಾರ್ಯಾಧ್ಯಕ್ಷನಾಗಿ 40 ವರ್ಷಗಳ ಕಾಲ ಸಂಸ್ಥೆಯನ್ನು ಮುನ್ನಡೆಸಿ ವಿಶ್ವಮಾನ್ಯ ಮಾಡಿದ್ದು ಪವಾಡವೇ ಸರಿ. ಜಗತ್ತಿನಲ್ಲಿರುವ ಅತ್ಯುತ್ತಮವಾಗಿರುವುದನ್ನು ನೋಡಿದಾಗ ಅದನ್ನು ನಮ್ಮ ಕೆಎಲ್ಇ ಸಂಸ್ಥೆಯಲ್ಲಿಯೂ ಅಳವಡಿಸಿಕೊಳ್ಳುತ್ತಾ ಹೋದೆ ಎಂದ ಅವರು, ದಾನಿಗಳ ಉದಾರ ಕೊಡುಗೆಯಿಂದಲೇ ನಮ್ಮ ಸಂಸ್ಥೆಯನ್ನು 38 ರಿಂದ 310ಕ್ಕೆ ವಿಸ್ತರಿಸಿಲಾಗಿದೆ. ಇದು ಇತಿಹಾಸ. ಕರ್ನಾಟಕ ಹಾಗೂ ಮಹಾರಾಷ್ಟ್ರ ಮೊದಲ್ಗೊಂಡು 16 ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತ ಅಂತಾರಾಷ್ಟ್ರೀಯ ಮಾನ್ಯತೆ ಸಂಪಾದಿಸಿರುವುದು ನನಗೆ ಖುಷಿ ಕೊಟ್ಟಿದೆ. ಅಲೋಪಥಿಕ್-ಆಯುರ್ವೇದ-ಹೋಮಿಯೋಪಥಿಕ್ ಈ ಮೂರನ್ನು ಜನಸೇವೆಗೆ ಅರ್ಪಿಸಿದ್ದೇನೆ ಎಂದು ಹೇಳಿದರು.ಸಂಸ್ಥೆ ವಿಸ್ತಾರಕ್ಕೆ ಎಲ್ಲರೂ ಸಹಾಯ ಸಹಕಾರ ಪಡೆದಿದ್ದೇನೆ. ನಮ್ಮ ಇಡೀ ಕೋರೆ ಕುಟುಂಬದ ತ್ಯಾಗ ಕೂಡ ಇದರಲ್ಲಿದೆ. ನನ್ನ ಶ್ರೀಮತಿಯವರು ಮನೆ ಜವಾಬ್ದಾರಿ ಹೊತ್ತು ನಡೆದರು. ಈ ಮೂಲಕ ನನಗೆ ಸಾಮಾಜಿಕ ಸೇವೆ ಮಾಡಲು ಸಾಧ್ಯವಾಯಿತು ಎಂದು ಕೋರೆ ಹೇಳಿದರು.
ಬೆಳಗಾವಿಯಲ್ಲಿ ಎರಡು ತಿಂಗಳಲ್ಲಿ 300 ಹಾಸಿಗೆ ಸೌಲಭ್ಯವುಳ್ಳ ಕ್ಯಾನ್ಸರ್ ಆಸ್ಪತ್ರೆ ಆರಂಭಿಸಲಾಗುವುದು. ಅಲ್ಲದೆ, ಹುಬ್ಬಳ್ಳಿಯಲ್ಲಿ 6 ತಿಂಗಳಲ್ಲಿ ಹೊಸ ಮೆಡಿಕಲ್ ಕಾಲೇಜು ಕಟ್ಟಡ ಪೂರ್ಣಗೊಳ್ಳಲಿದ್ದು, 1000 ಹಾಸಿಗೆ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಆರಂಭವಾಗಲಿದೆ. ಸಂಸ್ಥೆಯು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿದೆ ಎಂದು ಹೇಳಿದರು.
ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಶಶೀಲ್ ನಮೋಶಿ ಮಾತನಾಡಿ, ಒಂದೇ ಬಾರಿಗೆ ಹೈದರಾಬಾದ ಶಿಕ್ಷಣ ಸಂಸ್ಥೆ, ಕೆಎಲ್‌ಇ ಮತ್ತು ಶಾಮನೂರ ಶಿವಶಂಕರಪ್ಪ ಅವರ ವೈದ್ಯಕೀಯ ಮಹಾವಿದ್ಯಾಲಯಗಳನ್ನು ಸ್ಥಾಪಿಸಲು ಎಸ್.ನಿಜಲಿಂಗಪ್ಪ ಅವರು ಅನುಮತಿ ನೀಡಿದರು. ಕೆಎಲ್‌ಇ ಸಂಸ್ಥೆ ಸಾಕಷ್ಟು ಬೆಳೆದಿದೆ. ನಾವು ಹಿಂದೆ ಉಳಿದಿದ್ದೇವೆ. ನಾವು ಕೂಡ ಇದೇ ರೀತಿ ಬೆಳೆಸಲು ಸಹಾಯ ಸಹಕಾರ ನೀಡಬೇಕು ಎಂದು ಕೋರಿದರು.
ಇದೇ ಸಂದರ್ಭದಲ್ಲಿ ಕೆಎಲ್ಇ ಆಡಳಿತ ಮಂಡಳಿಯ ಸದಸ್ಯರು ಡಾ.ಪ್ರಭಾಕರ ಕೋರೆ ಹಾಗೂ ಆಶಾ ಕೋರೆಯವರನ್ನು ಸತ್ಕರಿಸಿದರು. ಡಾ.ಪ್ರಭಾಕರ ಕೋರೆಯವರ 40 ವರ್ಷಗಳ ಪಯಣವನ್ನು ಹೊತ್ತ ‘ರತ್ನರಾಜ’ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಯಿತು.
ಕೋಟ್‌ಗಳು....
- ಡಾ.ಪ್ರಭಾಕರ ಕೋರೆ, ಕೆಎಲ್‌ಇ ಕಾರ್ಯಾಧ್ಯಕ್ಷಡಾ.ಪ್ರಭಾಕರ ಕೋರೆಯವರು ಉತ್ತರ ಕರ್ನಾಟಕದ ವೀರಶೈವ-ಲಿಂಗಾಯತ ಶಿಕ್ಷಣ ಸಂಸ್ಥೆಗಳು ಮಾಡಿದ ಶೈಕ್ಷಣಿಕ ಸೇವೆಗೆ ಒಂದು ಗೌರವ ಘನತೆ ತಂದುಕೊಟ್ಟಿದ್ದಾರೆ. ಕೋರೆಯವರ ದೂರದೃಷ್ಟಿ, ಕ್ರಿಯಾಶೀಲತೆ ಮತ್ತು ಸಾಮಾಜಿಕ ಕಳಕಳಿ ಅವರನ್ನು ಇಲ್ಲಿಯವರೆಗೆ ಕರೆದುತಂದಿದೆ.- ಡಾ.ವೀರಣ್ಣ ಚರಂತಿಮಠ, ಮಾಜಿ ಶಾಸಕ, ಬಿವಿವಿ ಸಂಘದ ಅಧ್ಯಕ್ಷನಮಗೆಲ್ಲ ಡಾ.ಪ್ರಭಾಕರ ಕೋರೆ ಅವರು ಮಾದರಿ. ಲಿಂಗಾಯತ ಸಂಸ್ಥೆಗಳನ್ನು ಹೇಗೆ ಬೆಳೆಸಬೇಕೆಂಬುದನ್ನು ತೋರಿಸಿಕೊಟ್ಟಿದ್ದಾರೆ.