ಕನ್ನಡಪ್ರಭ ವಾರ್ತೆ ಟಿ.ನರಸೀಪುರ
ಹಾಲು ಮಾರಾಟದಲ್ಲಿ ಕೆಎಂಎಫ್ ದೇಶದಲ್ಲೇ ಎರಡನೇ ಸ್ಥಾನದಲ್ಲಿದ್ದು, ರಾಜ್ಯದ ಹಾಲು ಉತ್ಪಾದಕರ ಹೆಚ್ಚು ಹೆಚ್ಚು ಹಾಲು ಉತ್ಪಾದಿಸದರೆ ಮೊದಲ ಸ್ಥಾನಕ್ಕೆ ಏರಲು ಸಹಕಾರಿಯಾಗಲಿದೆ ಎಂದು ಮೈಮುಲ್ ಅಧ್ಯಕ್ಷ ಆರ್. ಚಲುವರಾಜ ಹೇಳಿದರು.ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಮೈಮುಲ್ ಪ್ರಾದೇಶಿಕ ಕಚೇರಿಯಲ್ಲಿ ಹಮ್ಮಿಕೊಂಡಿದ್ದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ -2024 ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ದೇಶದಲ್ಲಿ ಹೈನುಗಾರಿಕೆ ಹೆಮ್ಮರವಾಗಿ ಬೆಳೆಯಲು ಡಾ.ವರ್ಗಿಸ್ ಕುರಿಯನ್ ಅವರು ಕಾರಣ, ದೇಶದ ತುಂಬಾ ಕ್ಷೀರ ಕಾಂತ್ರಿ ನಡೆದಿದೆ. ಮೈಮುಲ್ ನಲ್ಲಿ ಪ್ರಾರಂಭಿಕ ಹಂತದಲ್ಲಿ ಕಡಿಮೆ ಹಾಲು ಸಂಗ್ರಹಣ ಮಾಡಲಾಗುತ್ತಿತ್ತು. ಪ್ರಸ್ತುತ ದಿನಕ್ಕೆ 9 ಲಕ್ಷ ಲೀಟರ್ ಹಾಲನ್ನು ಸಂಗ್ರಹಿಸಲಾಗುತ್ತಿದೆ. ಇಂದಿನ ದಿನಗಳಲ್ಲಿ ನಂದಿನಿ ಉತ್ಪನ್ನಗಳು ದುಬೈ ಸೇರಿದಂತೆ ಹಲವು ದೇಶಗಳಲ್ಲಿ ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದರು.ದೇಶದಲ್ಲಿ ಆಹಾರ ಸ್ವಾವಲಂಬನೆ, ಕ್ಷೀರ ಕ್ರಾಂತಿ ಎಲ್ಲದಕ್ಕೂ ಸಹಕಾರಿ ಕ್ಷೇತ್ರದ ಸಹಕಾರದಿಂದ ಮಾತ್ರ ಎಂದು ಕ್ಷೇತ್ರ ಸಾಧಿಸಿ ತೋರಿಸಿದೆ. ಹಾಲು ಉತ್ಪಾದಕರ ಸಂಘ ಹಾಲಿನ ಜತೆ 250 ಸಹ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಇಂದು ಸಹಕಾರ ಕ್ಷೇತ್ರ ಮಾರ್ಗದರ್ಶನ ಕೊರತೆ ಮತ್ತು ಉತ್ತೇಜನದ ಕೊರತೆ ಅಲ್ಪಮಟ್ಟದ ಹಿನ್ನಡೆ ಅನುಭವಿಸಿದೆ ಎಂದರು.
ನಂದಿನಿ ಮಾರಾಟ ದರ ಕಡಿಮೆ:ದೇಶದಲ್ಲಿ ಬೇರೆಲ್ಲ ಹಾಲಿನ ಮಾರಾಟಕ್ಕಿಂತ ನಂದಿನಿ ಹಾಲಿನ ಬೆಲೆ ಕಡಿಮೆ ಇದೆ. ಹಾಗಾಗಿ ಸರ್ಕಾರ ಹಾಲು ಮಾರಾಟ ದರವನ್ನು ಹೆಚ್ಚಳ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಪ್ರಸಕ್ತ ದಿನಗಳಲ್ಲಿ ಹಾಲು ಉತ್ಪಾದಕರ ನಿರ್ವಹಣೆ ವೆಚ್ಚ, ಪಶು ಆಹಾರ ಸೇರಿದಂತೆ ವಿವಿಧ ಖರ್ಚು ಹೆಚ್ಚು ಇರುವುದರಿಂದ ಹಾಲು ಮಾರಾಟ ದರವನ್ನು ಹೆಚ್ಚಿಸಬೇಕು ಎಂದು ಉತ್ಪಾದಕರ ಬೇಡಿಕೆ ಇದೆ ಎಂದರು.
ಹಿರಿಯ ಸಹಕಾರಿ ವೈ.ಎನ್. ಶಂಕರೇಗೌಡ ಮಾತನಾಡಿ, ಸರ್ಕಾರ ಪ್ರತಿ ಗ್ರಾಪಂಗಳಿಗೂ ಒಂದೊಂದು ಸಹಕಾರ ಸಂಘದ ಸ್ಥಾಪನೆಗೆ ಅವಕಾಶ ನೀಡಿರುವುದು ಶ್ಲಾಘನಿಯ. ಸಹಕಾರ ಕ್ಷೇತ್ರದಲ್ಲಿ ಶಿಸ್ತು ಬಹಳ ಮುಖ್ಯ, ವಹಿ ನಿರ್ವಹಣೆ, ಹಣಕಾಸಿನ ವ್ಯವಹಾರ ಸೇರಿದಂತೆ ಸಂಘದ ವಿವಿಧ ಕಾರ್ಯಗಳಲ್ಲಿ ಪಾರದರ್ಶಕತೆ ಇರಬೇಕು ಎಂದು ಸಲಹೆ ನೀಡಿದರು.ಮೈಸೂರು ಒಕ್ಕೂಟದ ನಿರ್ದೇಶಕಿ, ಮಾಜಿ ಶಾಸಕ ಜೆ. ಸುನೀತಾ ವೀರಪ್ಪಗೌಡ, ನಿರ್ದೇಶಕರಾದ ಹನುಮನಹಾಳು ಸಿದ್ದೇಗೌಡ, ಟಿ.ಪಿ. ಬೋರೇಗೌಡ, ಸಿ. ಓಂ ಪ್ರಕಾಶ್, ಸದಾನಂದಾ, ಟಿಎಪಿಎಂಎಸ್ ಅಧ್ಯಕ್ಷ ಟಿ.ಪಿ. ಸುಬ್ರಮಣ್ಯ, ಮೈಮುಲ್ ಅಭಿವೃದ್ದಿ ಅಧಿಕಾರಿ ಹಸೀನಾ, ಕರಿಬಸವರಾಜು, ವಿಸ್ತರಣಾಧಿಕಾರಿ ಪ್ರಮೋದ್, ತಾಲೂಕಿನ ಎಲ್ಲ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಇದ್ದರು.