ಕನ್ನಡಪ್ರಭ ವಾರ್ತೆ ಚಿಂತಾಮಣಿ
ತಾಲೂಕಿನ ಶ್ರೀಕ್ಷೇತ್ರ ಕೈವಾರದ ಗವಿಯ ಬಳಿಯ ಪ್ರಕೃತಿಯ ಮಡಿಲಲ್ಲಿ ನೆಲೆಸಿರುವ ಯೋಗಾನರಸಿಂಹಸ್ವಾಮಿ ವೈಕುಂಠ ಯಾಗಶಾಲೆಯಲ್ಲಿ ಶ್ರೀರಾಮಭವ ತಾರಕ ಮಂತ್ರದ ಶ್ರೀರಾಮಕೋಟಿ ಜಪ ಯಜ್ಞವನ್ನು ಉದ್ಘಾಟಿಸಿ ಮಾತನಾಡಿದರು.
ಸದ್ಗುರು ಕೈವಾರ ತಾತಯ್ಯನವರು ಯೋಗಿವರ್ಯರಾಗಿ ಶ್ರೀರಾಮ ಭವತಾರಕ ಮಂತ್ರವನ್ನು ಮಾನವರ ಉದ್ಧಾರಕ್ಕಾಗಿ ನೀಡಿದ್ದಾರೆ. ಮಾನಸಿಕ ಶಾಂತಿ, ನೆಮ್ಮದಿಯನ್ನು ಪಡೆಯಲು ಈ ಮಂತ್ರವನ್ನು ಭಕ್ತಿಯಿಂದ ಪಠಿಸಬೇಕು. ಪರಸ್ಪರ ಪ್ರೀತಿ, ಸೌಹಾರ್ದತೆ ಬೆಳೆಯುತ್ತದೆ. ಮಾನವರಲ್ಲಿ ಆತ್ಮಸಾಮರಸ್ಯ ಮತ್ತು ಸಮಭಾವನೆ ಬಹಳ ಮುಖ್ಯವಾದುದೆಂದರು.ಶ್ರೀಯೋಗಿನಾರೇಯಣ ಸಂಕೀರ್ತನಾ ಯೋಜನೆ ಸಂಚಾಲಕ ವಿದ್ವಾನ್ ವಾನರಾಶಿ ಬಾಲಕೃಷ್ಣ ಭಾಗವತರ್ ಮಾತನಾಡಿ, ಕಣ್ಣಿನ ಗುಡ್ಡೆಗಳನ್ನು ಕಣ್ಣರೆಪ್ಪೆಯು ಹೇಗೆ ರಕ್ಷಿಸುತ್ತದೋ, ಆ ರೀತಿಯಲ್ಲಿ ಪರಮಾತ್ಮನ ನಾಮಸ್ಮರಣೆಯು ನಮ್ಮನ್ನು ಸಂರಕ್ಷಿಸುತ್ತದೆ. ಕೈವಾರ ತಾತಯ್ಯನವರು ರಾಮ ನಾಮಪಠಣೆಗೆ ಒತ್ತನ್ನು ನೀಡಿದ್ದಾರೆ. ಮಾನವರ ಪೂರ್ವಕರ್ಮಗಳ ನಾಶಕ್ಕಾಗಿ ರಾಮನಾಮವನ್ನು ಪಠಿಸಬೇಕೆಂದು ಸದ್ಗುರುಗಳಾದ ಕೈವಾರ ತಾತಯ್ಯನವರು ಹೇಳಿದ್ದಾರೆ. ಇದನ್ನು ಮನಗಂಡು ಧರ್ಮಾಧಿಕಾರಿಗಳು ಶ್ರೀರಾಮಕೋಟಿ ಜಪಯಜ್ಞವನ್ನು ಆಯೋಜಿಸಿದ್ದಾರೆ. ಪ್ರತಿ ಮಾಸದಲ್ಲಿಯೂ ಈ ಕಾರ್ಯಕ್ರಮ ಆಯೋಜಿಸುವ ಚಿಂತನೆಯಿದೆ ಎಂದರು.
ರಾಮಕೋಟಿ ಜಪವನ್ನು ಅಖಂಡ ೨೪ ಗಂಟೆಗಳ ಕಾಲ ನಿರಂತರವಾಗಿ ಮಾಡಲಾಯಿತು. ಶ್ರೀಯೋಗಾನರಸಿಂಹಸ್ವಾಮಿ ತಂಡ, ಶ್ರೀಅಮರನಾರೇಯಣಸ್ವಾಮಿ ತಂಡ, ಶ್ರೀಮಹಾಲಕ್ಷ್ಮೀ ತಂಡಗಳೆಂದು ಮೂರು ತಂಡಗಳನ್ನು ಮಾಡಲಾಗಿತ್ತು. ಒಂದು ಗಂಟೆಗೆ ಒಂದು ತಂಡವು “ರಾಮ ರಾಮ ಮುಕುಂದ ಮಾಧವ ರಾಮ ಸದ್ಗುರು ಕೇಶವಾ, ರಾಮ ದಶರಥ ತನಯ ದೇವಾ ರಾಮಶ್ರೀ ನಾರೇಯಣ” ಎಂಬ ಶ್ರೀರಾಮ ಭವತಾರಕ ಮಂತ್ರವನ್ನು ಪಠಿಸುತ್ತಾ, ತಾಳ ಹಾಕುತ್ತಾ, ಶ್ರೀರಾಮರ ವೇದಿಕೆಯ ಸುತ್ತಲೂ ಹೆಜ್ಜೆ ಹಾಕುತ್ತಾ ಭಕ್ತಿಯಿಂದ ಪಠಿಸುತ್ತಿದ್ದರು.