ಭಟ್ಕಳದಲ್ಲಿ ಹೆಲ್ಮೆಟ್ ಧರಿಸಿ ಜೀವ ಉಳಿಸಿ ಅಭಿಯಾನಕ್ಕೆ ತಹಸೀಲ್ದಾರ ಚಾಲನೆ
ಕನ್ನಡಪ್ರಭ ವಾರ್ತೆ ಭಟ್ಕಳಇಲ್ಲಿಯ ನಗರ ಮತ್ತು ಗ್ರಾಮೀಣ ಪೊಲೀಸ್ ಠಾಣೆಯಿಂದ ಬೈಕ್ ರ್ಯಾಲಿ ನಡೆಸಿ ಹೆಲ್ಮೆಟ್ ಧರಿಸಿ ಜೀವ ಉಳಿಸಿ ಎನ್ನುವ ಅಭಿಯಾನ ನಡೆಯಿತು.
ತಾಲೂಕಿನ ವಿವಿಧಕಡೆಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ತಾಲೂಕಾ ದಂಡಾಧಿಕಾರಿ ನಾಗೇಂದ್ರ ಕೋಳಶೆಟ್ಟಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಪ್ರತಿವರ್ಷ ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಲೇ ಇರುವ ಹಿನ್ನೆಲೆ ಪ್ರತಿಯೊಬ್ಬರೂ ತಮ್ಮ ಜೀವದ ಮೌಲ್ಯ ತಿಳಿದುಕೊಂಡು ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಚಲಾಯಿಸಬೇಕು. ಪೊಲೀಸರು ದಂಡ ವಿಧಿಸುತ್ತಾರೆ ಎನ್ನುವುದನ್ನು ತಪ್ಪಿಸುವುದಕ್ಕೆ ಅಲ್ಲದೇ ಸ್ವಯಂ ಇಚ್ಚೆಯಿಂದ ಹೆಲ್ಮೆಟ್ ಧರಿಸಿ ಎಂದರು.ಡಿವೈಎಸ್ಪಿ ಮಹೇಶ್ ಎಂ.ಕೆ. ಮಾತನಾಡಿ, ಹೆಲ್ಮೆಟ್ ಧರಿಸದವರಿಗೆ ದಂಡ ಹಾಕುವುದು ಪೊಲೀಸರ ಉದ್ದೇಶವಲ್ಲ. ಜನರ ಅಮೂಲ್ಯ ಜೀವ ಉಳಿಯಲಿ, ಹೆಲ್ಮೆಟ್ ಧರಿಸುವುದರ ಅರಿವು ಮೂಡಲಿ ಎನ್ನುವುದೇ ನಮ್ಮ ಉದ್ದೇಶ ಎಂದು ಸ್ಪಷ್ಟಪಡಿಸಿದರು.
ನಗರ ಠಾಣೆಯ ಇನ್‌ಸ್ಪೆಕ್ಟರ್ ದಿವಾಕರ ಪಿ.ಎಂ. ಮಾತನಾಡಿ, ಅಪಘಾತವಾದಾಗ ಕೈ ಕಾಲುಗಳಿಗೆ ಗಾಯವಾದರೂ ಉಳಿಯುವ ಸಾಧ್ಯತೆ ಇದೆ, ಆದರೆ ತಲೆಗೆ ಪೆಟ್ಟು ಬಿದ್ದರೆ ಜೀವ ಉಳಿಯುವುದು ಕಷ್ಟ. ಆದ್ದರಿಂದ ಹೆಲ್ಮೆಟ್ ಜೀವದ ಕವಚವಾಗಿದ್ದು ಪ್ರತಿಯೋರ್ವರೂ ಹೆಲ್ಮೆಟ್ ಧರಿಸುವಂತೆ ಕರೆ ನೀಡಿದರು.ಗ್ರಾಮೀಣ ಠಾಣೆಯ ಇನ್‌ಸ್ಪೆಕ್ಟರ್ ಮಂಜುನಾಥ ಲಿಂಗಾರೆಡ್ಡಿ ಮಾತನಾಡಿ, ದ್ವಿಚಕ್ರ ವಾಹನಗಳ ಅಪಘಾತಗಳಲ್ಲಿ ಹೆಚ್ಚಿನವರು ಹೆಲ್ಮೆಟ್ ಇಲ್ಲದೆ ಸಾವನ್ನಪ್ಪಿರುವುದು ಇಲ್ಲಿನ ತನಕದ ವರದಿಯೇ ಹೇಳುತ್ತಿದೆ. ಕುಟುಂಬದವರಿಗಾದರೂ ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ ಎಂದರು.
ಅಧಿಕಾರಿಗಳು ಪಟ್ಟಣದ ವಿವಿಧ ಬೀದಿಗಳಲ್ಲಿ ಬೈಕ್ ರ್ಯಾಲಿ ನಡೆಸಿ ಪ್ರಯಾಣಿಕರಿಗೆ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಪಿಎಸ್‌ಐಗಳಾದ ನವೀನ್ ನಾಯ್ಕ, ತಿಮ್ಮಪ್ಪ ಮೊಗೇರ, ರನ್ನಗೌಡ ಪಾಟೀಲ, ಭರಮಪ್ಪ ಬೆಳಗಲಿ ಮುಂತಾದವರಿದ್ದರು.