ಶಿಕ್ಷಣದಿಂದ ಸಿಗುವ ಜ್ಞಾನಾರ್ಜನೆ ಮಾನವನ ಆಸ್ತಿ: ಆರ್.ನಾಗರಾಜ್

KannadaprabhaNewsNetwork | Published : Dec 17, 2024 12:45 AM

ಸಾರಾಂಶ

Knowledge acquired through education is a human asset: R. Nagaraj

-ಬಿ.ಎಚ್.ಕೈಮರದ ಸಿದ್ದಿವಿನಾಯಕ ಜ್ಞಾನ ವಿಕಾಸ ಕೇಂದ್ರದಲ್ಲಿ ಶಿಕ್ಷಣದ ಬಗ್ಗೆ ಮಾಹಿತಿ ಕಾರ್ಯಕ್ರಮ

-----

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಶಿಕ್ಷಣದಿಂದ ಸಿಗುವ ಜ್ಞಾನಾರ್ಜನೆಯು ಪ್ರತಿಯೊಬ್ಬ ಮಾನವನ ಆಸ್ತಿಯಾಗಲಿದೆ ಎಂದು ಸಂಸ್ಥೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಆರ್. ನಾಗರಾಜ್ ತಿಳಿಸಿದರು.

ಬಿ.ಎಚ್.ಕೈಮರದ ಸ್ತ್ರೀ ಶಕ್ತಿ ಭವನದಲ್ಲಿ ಧ.ಗ್ರಾ.ಯೋಜನೆಯ ಬಿ.ಎಚ್.ಕೈಮರ ವಲಯದ ಬಿ.ಎಚ್.ಕೈಮರದ ಸಿದ್ದಿವಿನಾಯಕ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಆಶ್ರಯದಲ್ಲಿ ನಡೆದ ಶಿಕ್ಷಣದ ಬಗ್ಗೆ ಮಾಹಿತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಮಕ್ಕಳಿಗೆ ಪ್ರಥಮವಾಗಿ ಶಿಕ್ಷಣ ಪ್ರಾರಂಭವಾಗುವುದು ಮನೆಯಲ್ಲೇ. ತಂದೆ, ತಾಯಿಗಳು ತಮಗೆ ಅರಿವಿಲ್ಲದಂತೆ ಬೋಧಿಸಿ, ಮಕ್ಕಳನ್ನು ತಿದ್ದುತ್ತಾರೆ, ತಾಯಿಯೇ ಮಕ್ಕಳಿಗೆ ಮೊದಲ ಗುರುವಾಗುತ್ತಾರೆ. ನಂತರ ಮಕ್ಕಳು ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಾರೆ ಎಂದರು.

ಶಾಲಾ, ಕಾಲೇಜುಗಳಲ್ಲಿ ಪಡೆದ ಶಿಕ್ಷಣದಿಂದ ಮುಂದೆ ಸಮಾಜದಲ್ಲಿ ಜ್ಞಾನಿಯಾಗಿ, ಸುಸಂಸ್ಕೃತರಾಗಿ ಬಾಳಲು ಸಹಕಾರಿಯಾಗುತ್ತದೆ. ಆದರೆ, ನಿಜವಾದ ಶಿಕ್ಷಣವು ಸುತ್ತಮುತ್ತಲಿನ ಪರಿಸರ, ಬಂಧುಗಳು, ಮಿತ್ರರು, ಸಮಾಜದಿಂದಲೇ ಪಡೆಯುತ್ತೇವೆ. ಪ್ರತಿಯೊಬ್ಬರೂ ಶಾಲಾ ಶಿಕ್ಷಣ ಪಡೆಯುವುದರ ಜೊತೆಗೆ ಸಂಸ್ಕಾರವಂತರಾಗಿ ಬದುಕಿ ಸಮಾಜಕ್ಕೆ ಆದರ್ಶ ವ್ಯಕ್ತಿಗಳಾಗಿ ಬದುಕಬೇಕು ಎಂದು ಸಲಹೆ ನೀಡಿದರು.

ಈಗಿರುವ ಶಿಕ್ಷಣ ವ್ಯವಸ್ಥೆಯ ಪ್ರಕಾರ ಪ್ರಥಮವಾಗಿ ಅಂಗನವಾಡಿ, ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢ ಶಿಕ್ಷಣ, ಪದವಿ ಪೂರ್ವ, ಸ್ನಾತಕೋತ್ತರ, ಜಾಬ್ ಓರಿಯಂಟಲ್ ಕೋರ್ಸುಗಳು, ವೃತ್ತಿ ಕೋರ್ಸ್‌ಗಳು ಲಭ್ಯವಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಸಿದ್ದಿ ವಿನಾಯಕ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಅಧ್ಯಕ್ಷೆ ಗುಲಾಬಿ ವಹಿಸಿದ್ದರು. ಸಭೆಯಲ್ಲಿ ಜ್ಞಾನ ವಿಕಾಸ ಕೇಂದ್ರದ ಸಂಯೋಜಕಿ ಎಮಿಲಿಯ, ಸೇವಾ ನಿರತೆ ಅನ್ನಪೂರ್ಣ ಇದ್ದರು. ಸವಿತ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸಿದ್ದಿವಿನಾಯಕ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಸದಸ್ಯೆಯರು ಭಾಗವಹಿಸಿದ್ದರು.

Share this article