ಮುಂಡರಗಿ: ಈ ದೇಶದ ಮೊದಲ ಗುರು ಆದಿ ಯೋಗಿ ಶಿವ. ಆತನಿಂದಲೇ ಯೋಗ ಜ್ಞಾನ ಸೂತ್ರ ಎಲ್ಲವೂ ಪ್ರಾರಂಭವಾದವು. ಅವನಿಂದಲೇ ಈ ಜಗತ್ತಿನಲ್ಲಿ ಜ್ಞಾನ ಪ್ರಾರಂಭವಾಗಿದ್ದು ಎಂದು ಮುಂಡರಗಿ ತೋಂಟದಾರ್ಯ ಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.
ಇಡೀ ಜಗತ್ತಿನಲ್ಲಿ ಭಾರತ ದೇಶ ವಿಶಿಷ್ಟವಾದುದು. ಬೇರೆ ದೇಶಗಳಲ್ಲಿ ಒಂದೊಂದು ದೇಶದಲ್ಲಿ ಒಬ್ಬೊಬ್ಬರೇ ಜಿಜ್ಞಾಸುಗಳು ಸಿಗುತ್ತಾರೆ. ಆದರೆ ಭಾರತ ದೇಶದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಕೋಳಿ ಕೂಗುವ ಪ್ರತಿ ಗ್ರಾಮದಲ್ಲಿಯೂ ಒಬ್ಬೊಬ್ಬ ಮಹಾತ್ಮರು ಸಿಗುತ್ತಾರೆ. ಭಾರತದಲ್ಲಿನ ಧಾರ್ಮಿಕ ವಿಷಯಕ್ಕೆ ಹಾಗೂ ಧರ್ಮದ ವಿಷಯಕ್ಕೆ ಕೈ ಹಾಕುವುದೆಂದರೆ ಜೇನುಗೂಡಿಗೆ ಕೈ ಹಾಕಿದಂತೆ. ಈ ದೇಶದ ಒಳಗಡೆ ಕೃಷಿ ಸಂಶೋಧನೆ ಉಳಿಸಿ ಅನ್ನ, ಆಹಾರ ಕೊಟ್ಟವನು ಶಿವನ ಜತೆಯಲ್ಲಿದ್ದ ನಂದಿ. ಈ ದೇಶದ ಕೃಷಿ ಕಾಯಕದ ಮೂಲ ನಂದಿಯೇ.
ಬಸವಣ್ಣನವರು ಹಡಪದ ಅಪ್ಪಣ್ಣ ಅವರನ್ನು ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿ ಮಾಡಿಕೊಳ್ಳುವ ಮೂಲಕ ತಮ್ಮನ್ನು ಭೇಟಿಯಾಗಲು ಬರುವವರು ಮೊದಲು ಅಪ್ಪಣ್ಣನವರನ್ನು ಭೇಟಿ ಮಾಡುವಂತೆ ಮಾಡಿದ್ದರು. ಅಪ್ಪಣ್ಣನವರಿಗೆ ನಿಜಸುಖಿ ಎಂದು ಬಸವಣ್ಣನವರು ಕರೆಯುತ್ತಿದ್ದರು ಎಂದರು.ಪ್ರವಚನಕಾರರಾದ ಬಸವೇಶ್ವರಿ ಮಾತಾಜಿ ಮಾತನಾಡಿ, ಬಸವಣ್ಣನವರು 12ನೇ ಶತಮಾನದಲ್ಲಿಯೇ ಅನುಭವ ಮಂಟಪದ ಮೂಲಕ ಜಾತಿ ವ್ಯವಸ್ಥೆಯನ್ನು ದೂರ ಮಾಡಿದ್ದರು. ಮಡಿವಾಳ ಮಾಚಿದೇವ, ಅಂಬಿಗರ ಚೌಡಯ್ಯ, ಆಯ್ದಕ್ಕಿ ಮಾರಯ್ಯ, ಸೂಳೆ ಸಂಕವ್ಯ, ಡೋಹಾರ ಕಕ್ಕಯ್ಯ, ನೂಲಿಯ ಚಂದಯ್ಯ ಸೇರಿದಂತೆ ಅನೇಕರಿಗೆ ಲಿಂಗಧಾರಣೆ ಮಾಡುವ ಮೂಲಕ ಅವರನ್ನು ಸಮಾನತೆಯ ದೖಷ್ಟಿಯಿಂದ ನೋಡಿಕೊಂಡಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಹೂ ಹಾಕಿ ಪೂಜೆ ಸಲ್ಲಿಸಲಾಯಿತು. ವ್ಯಾಸಪೂರ್ಣಿಮೆಯ ಅಂಗವಾಗಿ ಭಕ್ತರು ಶ್ರೀಗಳಿಗೆ ಗುರುಕಾಣಿಕೆ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಪ್ರವಚನ ಕಮಿಟಿ ಅಧ್ಯಕ್ಷ ಬಸಯ್ಯ ಗಿಂಡಿಮಠ, ಕಾಶೀನಾಥ ಅಳವಂಡಿ, ಕೊಟ್ರೇಶ ಅಂಗಡಿ, ಎಸ್.ಎಸ್.ಗಡ್ಡದ, ಎಚ್.ವಿರುಪಾಕ್ಷಗೌಡ, ಗಿರೀಶಗೌಡ ಪಾಟೀಲ, ಈಶಣ್ಣ ಬೆಟಗೇರಿ, ಪಾಲಾಕ್ಷಿ ಗಣದಿಣ್ಣಿ, ಅಶೋಕ ಹುಬ್ಬಳ್ಳಿ, ಶರಣಪ್ಪ ಕುಬಸದ, ಪವನ್ ಚೋಪ್ರಾ, ವೀರಣ್ಣ ಮಡಿವಾಳರ, ಕಸ್ತೂರಮ್ಮ ನಾವಿ, ಮಹಾಂತೇಶ ನಾವಿ, ವಿರೇಶ ಹಡಪದ, ಬಸವರಾಜ ಹಡಪದ, ಶಿವಯೋಗಿ ನಾವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ನಾವಿ ಸಹೋದರರು ಪ್ರವಚನದ ಭಕ್ತಿಸೇವೆ ವಹಿಸಿಕೊಂಡಿದ್ದರು.