ಕನ್ನಡಪ್ರಭ ವಾರ್ತೆ ಮೂಲ್ಕಿ ಶಾಲಾ ಪಠ್ಯಗಳಲ್ಲಿ ಪುರಾಣದ ವಿಷಯಗಳು ಕಡಿಮೆಯಾಗುತ್ತಿದ್ದು, ಯಕ್ಷಗಾನದ ಬಗ್ಗೆ ಆಸಕ್ತಿ ಮೂಡಿಸುವ ಅಗತ್ಯವಿದೆ. ಚೌಕಿಗೆ ಮಕ್ಕಳು ಅಸಕ್ತಿಯಿಂದ ಬಂದು ವೇಷ ಹಾಕುವುದನ್ನು ಕುತೂಹಲದಿಂದ ನೋಡುತ್ತಿದ್ದ ದಿನಗಳು ಬದಲಾಗಿವೆ. ಮಕ್ಕಳಲ್ಲಿ ಕಲೆಗಳ ಬಗ್ಗೆ ಆಸಕ್ತಿ ಮೂಡಿಸಿದಾಗ ಅವರಲ್ಲಿ ಶಿಸ್ತು ಸಂಸ್ಕಾರ ಜ್ಞಾನಾಭಿವೃದ್ಧಿ ಸಾಧ್ಯ. ಯಕ್ಷಗಾನಕ್ಕೆ ಪ್ರಸಿದ್ಧವಾದ ಕಟೀಲಿನಲ್ಲಿ ಮಕ್ಕಳ ಮೇಳದ ಮೂಲಕ ಯಕ್ಷಗಾನ ಕಲಿಸುವ ಅಭಿನಂದನೀಯ ಕೆಲಸ ಆಗುತ್ತಿದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ ಹೇಳಿದರು. ಕಟೀಲು ಸರಸ್ವತೀ ಸದನದಲ್ಲಿ ಶನಿವಾರ ಜರುಗಿದ ಕಟೀಲಿನ ಶ್ರೀದುರ್ಗಾ ಮಕ್ಕಳ ಮೇಳದ 16ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.ಖ್ಯಾತ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ ಅವರಿಗೆ ದುರ್ಗಾ ಮಕ್ಕಳ ಮೇಳ ಪ್ರಶಸ್ತಿ, ಹಿಮ್ಮೇಳ ಕಲಾವಿದ ಪ್ರಕಾಶ ಕಲ್ಲೂರಾಯರಿಗೆ ಶ್ರೀನಿಧಿ ಅಸ್ರಣ್ಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಕ್ಕಳ ಮೇಳದ ವಿದ್ಯಾರ್ಥಿ ಸಿಎ ಕೆ.ಎಸ್ ಗಣೇಶ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಬೊಂಡಾಲ ಸಚ್ಚಿದಾನಂದ ಶೆಟ್ಟಿ, ರಾಘವೇಂದ್ರ ಆಚಾರ್ಯ ಬಜಪೆ, ಶ್ರೀ ಕ್ಷೇತ್ರ ಕಟೀಲಿನ ಅರ್ಚಕರಾದ ಅನಂತ ಪದ್ಮನಾಭ ಆಸ್ರಣ್ಣ, ಕಮಲಾದೇವಿಪ್ರಸಾದ ಆಸ್ರಣ್ಣ, ಉದ್ಯಮಿ ಗಿರೀಶ್ ಶೆಟ್ಟಿ ಕಟೀಲು, ಜಯರಾಮ ಶೆಟ್ಟಿ, ಲೀಲಾಕ್ಷ ಕರ್ಕೇರ, ಕಟೀಲು ಶಾಲೆಗಳ ಮುಖ್ಯಸ್ಥರಾದ ಗಿರೀಶ್ ತಂತ್ರಿ, ಚಂದ್ರಶೇಖರ ಭಟ್ ಉಪಸ್ಥಿತರಿದ್ದರು.
ಮಕ್ಕಳ ಮೇಳದ ಅಧ್ಯಕ್ಷ ಶ್ರೀಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು. ಪಶುಪತಿ ಶಾಸ್ತ್ರಿ ವಂದಿಸಿದರು. ವಾಸುದೇವ ಶಣೈ ನಿರೂಪಿಸಿದರು. ಮಕ್ಕಳ ಮೇಳದ ಕಲಾವಿದರಿಂದ ಯಕ್ಷಗಾನ ಪ್ರಸಂಗಗಳು, ವಿವಿಧ ಒಡ್ಡೋಲಗಗಳು, ಪೂರ್ವರಂಗದ ವಿವಿಧ ಕುಣಿತಗಳು ಪ್ರದರ್ಶನಗೊಂಡವರು.ಉದ್ಘಾಟನಾ ಸಮಾರಂಭ: ಕಲಾ ಪರ್ವದ ಉದ್ಘಾಟನೆಯನ್ನು ಕಿನ್ನಿಗೋಳಿ ಯಕ್ಷಲಹರಿ ಅಧ್ಯಕ್ಷ ರಘುನಾಥ ಕಾಮತ್ ನೆರವೇರಿಸಿದರು. ಎಸ್. ಕಮಲಾಕ್ಷ ಕಾಮತ್, ದೊಡ್ಡಯ್ಯ ಮೂಲ್ಯ, ಎಕ್ಕಾರು ರತ್ನಾಕರ ಶೆಟ್ಟಿ, ಶೇಖರ ಶೆಟ್ಟಿ ಪೆರ್ಮುದೆ, ಸುಮಂತ ಶೆಟ್ಟಿ, ಕಟೀಲಿನ ಅರ್ಚಕರಾದ ಅನಂತ ಆಸ್ರಣ್ಣ , ಶ್ರೀಹರಿ ನಾರಾಯಣ ಆಸ್ರಣ್ಣ, ವಾಸುದೇವ ಶೆಣೈ, ದಯಾನಂದ ಮಾಡ ಮತ್ತಿತರರಿದ್ದರು. ವಾದಿರಾಜ ಕಲ್ಲೂರಾಯ ನಿರೂಪಿಸಿದರು.