ಕನ್ನಡಪ್ರಭ ವಾರ್ತೆ ಧಾರವಾಡ
ಕೋವಿಡ್ ಸಂದರ್ಭದಲ್ಲಿ ಆನ್‌ಲೈನ್ ತರಗತಿಗಳಿಗೆ ಬಳಕೆಯಾಗುತ್ತಿದ್ದ ಮೊಬೈಲ್ ತಂತ್ರಜ್ಞಾನ ಪ್ರಸ್ತುತ ಗ್ರಾಮೀಣ ವಿದ್ಯಾರ್ಥಿಗಳಿಗೆ ಸದ್ಭಳಕೆಯಾಗುತ್ತಿದೆ ಎಂದು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಪ್ರಾದೇಶಿಕ ಮುಖ್ಯಸ್ಥ ಜಯಂತ ಕೆ.ಎಸ್. ಹೇಳಿದರು.ಶಾಲಾ ಶಿಕ್ಷಣ ಕಾರ್ಯಕ್ರಮದ ಭಾಗವಾಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳಿಗೆ ಪಠ್ಯೇತರ ವಿಷಯವಾಗಿ ಪ್ರತಿ ಬುಧವಾರ ಜ್ಞಾನ ದೀಪ, ಮಕ್ಕಳಿಗೊಂದು ಜೀವನ ಪಾಠ ಶೀರ್ಷಿಕೆಯಡಿ ಹಮ್ಮಿಕೊಂಡಿದ್ದ ವೆಬಿನಾರ್ ಸಮಾರೋಪದಲ್ಲಿ ಮಾತನಾಡಿದ ಅವರು, ವಿಶೇಷವಾಗಿ ಸರ್ಕಾರಿ ಶಾಲೆಯ ಮಕ್ಕಳಿಗೆ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಭಿನ್ನ ಸಂಪನ್ಮೂಲ ವ್ಯಕ್ತಿಗಳಿಂದ ವಿಭಿನ್ನ ವಿಷಯಗಳ ಜ್ಞಾನ ಉಣಬಡಿಸಲು ಇದರಿಂದ ಸಾಧ್ಯವಾಗಿದೆ. ಸುಮಾರು 35 ವೆಬಿನಾರಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ಪರೀಕ್ಷೆಯ ಕಾರಣದಿಂದ ಈ ವರ್ಷದ ವೆಬಿನಾರಗಳು ಅಂತಿಮಗೊಂಡಿದ್ದು ಮತ್ತೆ ಬರುವ ಜೂನ್ ತಿಂಗಳಿನಿಂದ ಹೊಸತನದೊಂದಿಗೆ ಪ್ರಾರಂಭವಾಗುವ ಇಂಗಿತ ವ್ಯಕ್ತಪಡಿಸಿದರು.
ವೆಬಿನಾರ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ವಿದ್ಯಾರ್ಥಿಗಳು ವೆಬಿನಾರನಿಂದ ಸಾಕಷ್ಟು ಹೊಸ ವಿಷಯ ಕಲಿತಿರುತ್ತೇವೆ.ಇವು ಪಠ್ಯೇತರ ಮತ್ತು ಪಠ್ಯ ಪೂರಕ ವಿಷಯಗಳನ್ನು ಒಳಗೊಂಡಿದ್ದು, ನಮ್ಮ ಜ್ಞಾನದ ವೃದ್ಧಿಗೆ ಪ್ರೇರಣೆಯೂ ಮತ್ತು ಸಹಕಾರಿಯೂ ಆಗಿವೆ ಎಂದು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು.ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥಾಪಕ ಆರ್. ಬಾಲಸುಬ್ರಹ್ಮಣ್ಯಂ ಮಾತನಾಡಿ, ಸಂಸ್ಥೆಯು ದೂರದೃಷ್ಟಿ ಹೊಂದಿದ್ದು, ಸದೃಢ ಮತ್ತು ಸಾಕ್ಷರ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ಇಂತಹ ಸಣ್ಣ ಸಣ್ಣ ಮೆಟ್ಟಿಲುಗಳೇ ಕಾರಣೀಭೂತವಾಗುತ್ತವೆ. ಶಿಕ್ಷಣವು ಕೇವಲ ಶಾಲೆ, ಕಾಲೇಜಿಗೆ ಮಾತ್ರ ಸೀಮಿತವಾಗಿಲ್ಲ, ಇದನ್ನು ಮೀರಿದ ಶಿಕ್ಷಣ ವ್ಯವಸ್ಥೆಯೊಂದಿದೆ. ಅದು ತಂದೆ, ತಾಯಿ, ಪರಿಸರ, ಸಮುದಾಯ, ಸಂದರ್ಭಗಳು, ಪಶು -ಪಕ್ಷಿಗಳು, ಗಿಡ- ಮರಗಳು ಹಾಗೂ ಮಾತುಗಳಿಂದ ಕಲಿಕೆಯು ನಿರಂತರವಾಗಿದೆ ಎಂದರು.
ವಿಜ್ಞಾನ ಶಿಕ್ಷಕ ಜಟ್ಟೆಪ್ಪ ಗರಸಂಗಿ ಮಾತನಾಡಿದರು.ಸಮಾರೋಪದ ವೆಬಿನಾರನಲ್ಲಿ 674 ವಿದ್ಯಾರ್ಥಿಗಳು ಹಾಗೂ 789 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 1463 ಪಾಲ್ಗೊಂಡಿದ್ದರು.