ಸಿದ್ಧೇಶ್ವರ ಶ್ರೀಗಳ ಸ್ಮರಣೆಯಿಂದ ಜ್ಞಾನ ವಿಸ್ತಾರವಾಗುತ್ತದೆ-ಬಸವರಾಜ ಸ್ವಾಮೀಜಿ

KannadaprabhaNewsNetwork | Published : Feb 28, 2024 2:36 AM

ಸಾರಾಂಶ

ಯಾರ ಸ್ಮರಣೆ ಮಾಡಿದರೆ ಜ್ಞಾನ ವಿಸ್ತಾರ ಆಗುತ್ತದೆಯೋ ಅಂತವರನ್ನು ಸದಾಕಾಲ ಸ್ಮರಿಸಬೇಕು. ಸಿದ್ಧೇಶ್ವರ ಶ್ರೀಗಳ ಜ್ಞಾನ, ವಿಚಾರ, ತತ್ವಗಳು ವಿಸ್ತಾರವಾಗಿದ್ದವು. ಅವರ ಸ್ಮರಣೆ ಮಾಡುವುದು ನಮ್ಮ ಭಾಗ್ಯ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಬಸವರಾಜ ಸ್ವಾಮೀಜಿ ಹೇಳಿದರು.

ಗದಗ: ಯಾರ ಸ್ಮರಣೆ ಮಾಡಿದರೆ ಜ್ಞಾನ ವಿಸ್ತಾರ ಆಗುತ್ತದೆಯೋ ಅಂತವರನ್ನು ಸದಾಕಾಲ ಸ್ಮರಿಸಬೇಕು. ಸಿದ್ಧೇಶ್ವರ ಶ್ರೀಗಳ ಜ್ಞಾನ, ವಿಚಾರ, ತತ್ವಗಳು ವಿಸ್ತಾರವಾಗಿದ್ದವು. ಅವರ ಸ್ಮರಣೆ ಮಾಡುವುದು ನಮ್ಮ ಭಾಗ್ಯ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಬಸವರಾಜ ಸ್ವಾಮೀಜಿ ಹೇಳಿದರು. ಅವರು ಸೋಮವಾರ ಗದಗ ನಗರದ ನಗರದ ಎಪಿಎಂಸಿ ಪ್ರಾಂಗಣದಲ್ಲಿರುವ ಕೆ.ಎಚ್‌.ಪಾಟೀಲ ಸಭಾಭವನದಲ್ಲಿ ನಡೆದ ಸಿದ್ಧೇಶ್ವರ ಶ್ರೀಗಳ ಗುರು ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಗದಗ ಅಧ್ಯಾತ್ಮ ವಿದ್ಯಾಶ್ರಮದ ನೀಲಮ್ಮ ತಾಯಿ ಅಸುಂಡಿ ಮಾತನಾಡಿ, ಸಿದ್ಧೇಶ್ವರ ಶ್ರೀಗಳ ಬದುಕಿನ ಕ್ಷಣಗಳನ್ನು ಶಬ್ದಗಳಲ್ಲಿ ಜೋಡಿಸಿ ಹೇಳುವುದು ಕಷ್ಟ. ಅಸಾಮಾನ್ಯ ವ್ಯಕ್ತಿತ್ವದ ಅವರ ಸಾಧನೆಗಳು ಲೋಕಮಾನ್ಯವಾಗಿವೆ. ಸಿದ್ಧೇಶ್ವರ ಶ್ರೀಗಳು ಜ್ಞಾನ ಸೂರ್ಯನಿದ್ದಂತೆ. ‘ಕೈವಲ್ಯಾವಸ್ಥೆಯಿಂದ ಲೋಕಕಲ್ಯಾಣ ಸಾಧ್ಯವಿಲ್ಲ. ಲೀಲಾವಸ್ಥೆ ಹರಿದು ಬಂದಾಗ ಮಾತ್ರ ಲೋಕ ಕಲ್ಯಾಣ ಸಾಧ್ಯ. ಲೀಲಾವಸ್ಥೆ ಅವರೊಳಗೆ ಹರಿದ ಕಾರಣ ಸಾಮಾನ್ಯ ಚೈತನ್ಯವೊಂದು ವಿಶೇಷ ರೂಪ ತಾಳಿತು. ಜ್ಞಾನಕ್ಕೆ ಮನಸ್ಸು ಎಳೆಯಬೇಕೇ ಹೊರತು; ವಿಷಯಕ್ಕೆ ಅಲ್ಲ ಎಂಬುದು ಅವರ ಬದುಕಿನ ನಿಲುವಾಗಿತ್ತು. ಎಲ್ಲ ಜಾತಿ, ಮತ, ಪಂಥಗಳ ವಿಚಾರಧಾರೆಗಳನ್ನು ಓದಿಕೊಂಡರು. ಆದರೆ, ಯಾವುದಕ್ಕೂ ಅಂಟಿಕೊಳ್ಳಲಿಲ್ಲ ಎಂದರು.ಗದಗ– ವಿಜಯಪುರ ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಸಿದ್ಧೇಶ್ವರ ಶ್ರೀಗಳ ಬಗ್ಗೆ ಎಲ್ಲರಿಗೂ ತಕ್ಕಮಟ್ಟಿಗೆ ತಿಳಿದಿದೆ. ಉಳಿದವರು ಅವರ ವಿಚಾರಧಾರೆಗಳಿಂದ ಸ್ಫೂರ್ತಿ ಪಡೆಯುವುದಷ್ಟೇ ಬಾಕಿ ಇದೆ. ಪರಮ ಸತ್ಯ, ತತ್ವಗಳನ್ನು ಅನುಷ್ಠಾನಕ್ಕೆ ತರುವ ಮುನ್ನ ಅವುಗಳನ್ನು ಕೇಳಬೇಕು. ಸಿದ್ಧೇಶ್ವರ ಶ್ರೀಗಳು ಜ್ಞಾನದ ಹಿಮಾಲಯವನ್ನೇ ಹತ್ತಿದರು. ನಾವು ಒಂದು ಬೆಟ್ಟವನ್ನಾದರೂ ಹತ್ತಬೇಕು ಎಂದರು. ಜಗತ್ತಿನಲ್ಲಿ ಇರುವುದನ್ನೆಲ್ಲಾ ನಾವು ಕೇಳಬೇಕಿಲ್ಲ, ಎಲ್ಲರನ್ನೂ ಆರಾಧಿಸಬೇಕಿಲ್ಲ. ಆದರೆ, ಜಗತ್ತಿನಲ್ಲಿ ಕೆಲವೊಂದಿಷ್ಟು ಮಂದಿಯ ಬಗ್ಗೆ ತಿಳಿದುಕೊಳ್ಳಲೇ ಬೇಕಿರುತ್ತದೆ. ಸಿದ್ಧೇಶ್ವರ ಶ್ರೀಗಳು ಅಂತಹ ವರ್ಗಕ್ಕೆ ಸೇರಿದವರು. ವಿಶ್ವಮಾನವತ್ವದ ಬಗ್ಗೆ ಹೇಳುವುದು ಸುಲಭ, ನಡೆದುಕೊಳ್ಳುವುದು ಕಷ್ಟ. ಸಿದ್ಧೇಶ್ವರ ಶ್ರೀಗಳದ್ದು ವಿಶಾಲ ದೃಷ್ಟಿ. ಜೀವನದ ಪ್ರತಿಕ್ಷಣವೂ ಯೋಗಿಯಂತೆ ಕಂಡರು. ಇದು ಮಹಾ ತಪಸ್ವಿಗೆ ಮಾತ್ರ ಸಾಧ್ಯ ಎಂದರು. ತೋಂಟದ ಸಿದ್ಧರಾಮ ಸ್ವಾಮೀಜಿ ಹಾಗೂ ಶಿವಾನಂದ ಮಠದ ಹಿರಿಯ ಶ್ರೀಗಳು ಕಳುಹಿಸಿದ ಆಡಿಯೋ ಸಂದೇಶ ಬಿತ್ತರಿಸಲಾಯಿತು. ಶಿವಾನಂದ ಮಠದ ಕಿರಿಯ ಶ್ರೀ ಸದಾಶಿವಾನಂದ ಸ್ವಾಮೀಜಿ ಮಾತನಾಡಿದರು. ಸಿದ್ಧೇಶ್ವರ ಶ್ರೀಗಳ ಗುರು ಸ್ಮರಣೆ ಕಾರ್ಯಕ್ರಮ ಆಯೋಜಿಸಿದ್ದ ಮಾಜಿ ಶಾಸಕ ಡಿ.ಆರ್‌.ಪಾಟೀಲ ಅವರನ್ನು ವಿಜಯಪುರ ಜ್ಞಾನಯೋಗಾಶ್ರಮದ ಬಸವರಾಜ ಸ್ವಾಮೀಜಿ ಅಭಿನಂದಿಸಿದರು. ಜೆ.ಕೆ. ಜಮಾದಾರ ನಿರೂಪಿಸಿದರು. ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ, ವಿರೋಧ ಪಕ್ಷದ ನಾಯಕ ಎಲ್‌.ಡಿ. ಚಂದಾವರಿ, ಕಾಂಗ್ರೆಸ್‌ ಹಿರಿಯ ಮುಖಂಡ ಗುರಣ್ಣಾ ಬಳಗಾನೂರ, ದಲಾಲರ ಸಂಘದ ಅಧ್ಯಕ್ಷ ಚಂದ್ರು ಬಾಳೆಹಳ್ಳಿಮಠ ಇದ್ದರು.

Share this article