ವಿದ್ಯಾರ್ಥಿಗಳಿಗೆ ಜ್ಞಾನವೇ ಸಂಪತ್ತು: ಮರಿಬಸಪ್ಪ

KannadaprabhaNewsNetwork |  
Published : Jul 19, 2025, 02:00 AM IST
 | Kannada Prabha

ಸಾರಾಂಶ

ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಭೌತಿಕವಾಗಿ ಏನನ್ನೂ ಕೊಡುವುದಿಲ್ಲ, ಆದರೆ ಜ್ಞಾನ ಹಾಗೂ ಬದುಕಿನಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಗೆಲ್ಲುವ ಮನೋಭೂಮಿಕೆಯನ್ನು ಸಿದ್ಧಮಾಡುತ್ತಾರೆ ಎಂದು ನಿವೃತ್ತ ಪ್ರಾಂಶುಪಾಲ ಮರಿಬಸಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಭೌತಿಕವಾಗಿ ಏನನ್ನೂ ಕೊಡುವುದಿಲ್ಲ, ಆದರೆ ಜ್ಞಾನ ಹಾಗೂ ಬದುಕಿನಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಗೆಲ್ಲುವ ಮನೋಭೂಮಿಕೆಯನ್ನು ಸಿದ್ಧಮಾಡುತ್ತಾರೆ ಎಂದು ನಿವೃತ್ತ ಪ್ರಾಂಶುಪಾಲ ಮರಿಬಸಪ್ಪ ಹೇಳಿದರು.

ಮಧುಗಿರಿ ತಾಲೂಕು ಐ.ಡಿ.ಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಳೆಯ ವಿದ್ಯಾರ್ಥಿಗಳು ಸಲ್ಲಿಸಿದ ಗುರುವಂದನೆ ಸ್ವೀಕರಿಸಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಜ್ಞಾನವೇ ಸಂಪತ್ತು. ಜ್ಞಾನವನ್ನು ಬಳಕೆಮಾಡಿಕೊಂಡು ಜವಾಬ್ದಾರಿಯುತ ಪ್ರಜೆಗಳಾಗಿ ಸಮಾಜವನ್ನು, ಬದುಕನ್ನು ಬೆಳಗಲು ಸಾಧ್ಯವಾಗುತ್ತದೆ ಎಂದರು. ಶಿಕ್ಷಣ ಮುಗಿಸಿ ನೀವೆಲ್ಲರೂ ಈಗ ಉದ್ಯೋಗ, ವ್ಯವಹಾರ ಆರಂಭಿಸಿ ದುಡಿಮೆ ಮಾಡುತ್ತಿದ್ದೀರಿ. ಉತ್ತಮ ಬದುಕು ಕಟ್ಟಿಕೊಳ್ಳುತ್ತಿದ್ದೀರಿ. ಇಂತಹ ನೀವು ಎಂದೋ ಪಾಠ ಹೇಳಿದ ಉಪನ್ಯಾಸಕರನ್ನು ಸ್ಮರಿಸಿ ಅವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದು, ಗುರುಗಳ ಬಗ್ಗೆ ಇರುವ ಗೌರವ ಭಾವನೆ ಹಾಗೂ ವಿದ್ಯೆಯ ಮಹತ್ವ ತಿಳಿದಿರುವ ಮಾದರಿ ಪ್ರಜೆಗಳಾಗಿದ್ದೀರಿ. ನಿಮ್ಮ ಮಕ್ಕಳಿಗೂ ಇಂತಹುದ್ದೇ ಸಂಸ್ಕಾರ ಕಲಿಸಿ ಅವರೂ ಉತ್ತಮ ಸ್ಥಾನಮಾನ ಪಡೆಯಲು ನೀವು ಮಾರ್ಗದರ್ಶನ ಮಾಡಬೇಕು ಎಂದು ಹೇಳಿದರು.

ಶಾಲಾಕಾಲೇಜಿನಲ್ಲಿ ಗುರುಗಳು ಹೇಳಿಕೊಡುವ ಶಿಕ್ಷಣ ಸಾಮಾನ್ಯವೇ ಆದರೂ ಅದರ ಜ್ಞಾನದಿಂದ ಹೆಚ್ಚಿನ ತಿಳುವಳಿಕೆ ಹೊಂದಿ ಬೆಳೆಯುವುದು ಬುದ್ಧಿವಂತರ ಲಕ್ಷಣ. ನೀವೆಲ್ಲರೂ ಅ ಮಾರ್ಗದಲ್ಲಿರುವುದು ಸಂತಸವಾಗಿದೆ. ನಿಮಗೆ ವಿದ್ಯೆ ಕಲಿಸಿದ ನಮಗೂ ಹೆಮ್ಮೆಯಾಗಿದೆ ಎಂದರು.

ಇದಕ್ಕೂ ಮೊದಲು ಊರಿನ ಪ್ರಮುಖ ರಸ್ತೆಗಳಲ್ಲಿ ಮಂಗಳವಾದ್ಯಗಳೊಂದಿಗೆ ಉಪನ್ಯಾಸಕರನ್ನು ಮೆರವಣಿಗೆ ಮೂಲಕ ಸಮಾರಂಭಕ್ಕೆ ಕರೆತರಲಾಯಿತು. ಕಾಲೇಜಿನ ಹಾಲಿ ಪ್ರಾಚಾರ್ಯ ಅಡವೀಶ್, ಓಬಳನರಸಿಂಹಯ್ಯ ಹಾಗೂ ಉಪನ್ಯಾಸಕರು ಭಾಗವಹಿಸಿದ್ದರು. ಈ ವೇಳೆ ಸಂಸ್ಥೆಯ ಪ್ರಗತಿಗೆ ಶ್ರಮಿಸಿದ ಸಿಬ್ಬಂದಿಯನ್ನು ಸನ್ಮಾನಿಸಿ ಗೌರವಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿರತೆ ದಾಳಿಗೆ ಮೇಕೆ ಬಲಿ: ಅರಣ್ಯ ಇಲಾಖೆ ಎದುರು ಪ್ರತಿಭಟನೆ
ಸತ್ಯಾಗ್ರಹ ಸೌಧ ಅಭಿವೃದ್ಧಿ: ನೀಲನಕ್ಷೆ ತಯಾರಿಗೆ ಪರಿಶೀಲನೆ