ಕನ್ನಡಪ್ರಭ ವಾರ್ತೆ ಘಟಪ್ರಭಾ
ಶಿಕ್ಷಣವಿದ್ದರೇ ಸಮಾಜದಲ್ಲಿ ಯಾವುದು ಒಳ್ಳೆಯದು? ಯಾವುದು ಕೆಟ್ಟದ್ದು? ಎಂಬ ಅರಿವು ಮೂಡುತ್ತದೆ. ತಂತ್ರಜ್ಞಾನದ ಯುಗದಲ್ಲಿ ಶಿಕ್ಷಣ ಅಗತ್ಯವಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.ಸಮೀಪದ ಗಣೇಶವಾಡಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವಜ್ರ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ 30- 40 ವರ್ಷಗಳ ಇತಿಹಾಸ ಅವಲೋಕಿಸಿದಾಗ ಆಗಿನ ಕಾಲದಲ್ಲಿ ಜನರು ಶಿಕ್ಷಣಕ್ಕೆ ಒತ್ತು ಕೊಡುತ್ತಿರಲಿಲ್ಲ. ಅದರ ಅರಿವು ಅವರಿಗೆ ತಿಳಿದಿರಲಿಲ್ಲ. ಈಗ ಕಾಲ ಬದಲಾವಣೆಯತ್ತ ಸಾಗುತ್ತಿದೆ. ಪ್ರತಿಯೊಬ್ಬರೂ ಶಿಕ್ಷಣದ ಕಡೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಕಾಲವು ಬದಲಾಗುತ್ತಿದ್ದಂತೆಯೇ ಜನರು ಸಹ ಬದಲಾವಣೆ ಬಯಸುತ್ತಿದ್ದಾರೆ. ಅದು ಯಾವುದೇ ಕ್ಷೇತ್ರ ಆಗಿರಬಹುದು. ಜನರು ಈಗ ಹೆಚ್ಚೆಚ್ಚು ಪ್ರಜ್ಞಾವಂತರಾಗುತ್ತಿದ್ದಾರೆ. ಇದಕ್ಕೆ ಕಾರಣ ವಿದ್ಯೆ ಎಂಬ ಅಸ್ತ್ರ. ಈಗಿರುವ ಪಾಲಕರು ಶಿಕ್ಷಣಕ್ಕೆ ಪ್ರಾಮುಖ್ಯತೆ ಕೊಡುತ್ತಿದ್ದಾರೆ. ಇದರಿಂದ ಸಮಾಜವು ಸಹ ಸುಧಾರಣೆಗೊಳ್ಳುತ್ತಿದೆ. ಡಾ.ಅಂಬೇಡ್ಕರ್ ಅವರು ಪ್ರತಿಪಾದಿಸಿದ ತತ್ವ- ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ. ಶಿಕ್ಷಣ, ಸಂಘಟನೆ, ಹೋರಾಟದಿಂದ ಸಮಾಜವು ಬಲಿಷ್ಟವಾಗುತ್ತಿದೆ ಎಂದು ತಿಳಿಸಿದರು.
75ರ ಸಂಭ್ರಮದಲ್ಲಿರುವ ಈ ಶಾಲೆಗೆ 2 ಕೊಠಡಿಗಳನ್ನು ನಿರ್ಮಿಸಿ ಕೊಡಲಾಗುವುದು. ಗ್ರಾಮಸ್ಥರ ಬೇಡಿಕೆಯಂತೆ ಗಣೇಶವಾಡಿ ದ್ವಾರಬಾಗಿಲು ನಿರ್ಮಾಣ ಕಾರ್ಯಕ್ಕೆ ಕೈಲಾದ ಸಹಾಯ ಮಾಡಲಾಗುವುದು. ಪೋಡಿ ಮುಕ್ತ ಗ್ರಾಮವನ್ನಾಗಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಅಧಿಕಾರಿಗಳು ಈ ನಿಟ್ಟಿನಲ್ಲಿ ಸಾಧಕ-ಬಾಧಕ ವರದಿ ನೀಡಬೇಕು. ಸಾಮಾನ್ಯ ರೈತರಿಗೂ ಇದರಿಂದ ಅನುಕೂಲವಾಗಬೇಕು. 2 ಗುಂಟೆ ಜಮೀನು ಹೊಂದಿದವರು ಈಗ ಎಕರೆಗಟ್ಟಲೇ ಜಮೀನು ಅನುಭವಿಸುತ್ತಿದ್ದಾರೆ. ಇದರ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಇದೇ ರೀತಿಯಾಗಿ ಖಂಡ್ರಟ್ಟಿ ಗ್ರಾಮದಲ್ಲಿಯೂ ನಡೆದಿತ್ತು. ಅಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ಮಾಡಿ ಕೊನೆಗೂ 3 ವರ್ಷಕ್ಕೆ ಖಂಡ್ರಟ್ಟಿ ಪೋಡಿ ಮುಕ್ತ ಗ್ರಾಮವಾಯಿತು. ಗಣೇಶವಾಡಿ ಗ್ರಾಮವನ್ನು ಸಹ ಪೋಡಿ ಮುಕ್ತ ಗ್ರಾಮವನ್ನಾಗಿ ಪರಿವರ್ತಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.ಅರಭಾವಿ ದುರದುಂಡೀಶ್ವರ ಮಠದ ಗುರು ಬಸವಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಅಪ್ಪಯ್ಯ ಮಾಳ್ಯಾಗೋಳ ವಹಿಸಿದ್ದರು. ಗೋಕಾಕ ತಹಸೀಲ್ದಾರ್ ಡಾ.ಮೋಹನ ಭಸ್ಮೇ, ಮೂಡಲಗಿ ಬಿಇಒ ಅಜೀತ ಮನ್ನಿಕೇರಿ, ಪ್ರಭಾ ಶುಗರ್ಸ ನಿರ್ದೇಶಕ ಶಿವಲಿಂಗ ಪೂಜೇರಿ, ಮದನ ದೇಶಪಾಂಡೆ, ಕೆಂಚಪ್ಪ ಪಾಟೀಲ, ಹಣಮಂತರಾವ ದೇಶಪಾಂಡೆ, ಗ್ರಾ.ಪಂ. ಅಧ್ಯಕ್ಷ ನಾಗಪ್ಪ ಹೊರಟ್ಟಿ, ನ್ಯಾಯವಾದಿ ಸುರೇಶ ಜಾಧವ, ಶ್ರೀಪತಿ ಗಣೇಶವಾಡಿ, ಸಿದ್ರಾಮ ಮೂಲಿಮನಿ, ರಮೇಶ ಪೂಜೇರಿ, ಯಲಗೌಡ ಪಾಟೀಲ, ಶಾಲೆಯ ಪ್ರಧಾನ ಶಿಕ್ಷಕ ಆರ್.ಡಿ.ಪತ್ತಾರ, ಆರ್.ಕೆ.ಹಂದಿಗುಂದ, ಗ್ರಾಮ ಪಂಚಾಯತಿ ಸದಸ್ಯರು, ಎಸ್‌ಡಿಎಂಸಿ ಸದಸ್ಯರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.