ಸೊರಬ: ಮಕ್ಕಳಿಗೆ ಬಾಲ್ಯದಲ್ಲಿಯೇ ವ್ಯವಹಾರಿಕ ಜ್ಞಾನ ಮತ್ತು ಸುತ್ತಲಿನ ಪರಿಸರದಲ್ಲಿ ಅವಶ್ಯಕ ವಸ್ತುಗಳ ಕುರಿತು ಮಾಹಿತಿ ಅಗತ್ಯ ಎಂದು ಸಮಾಜ ಸೇವಕ ರಾಜು ಹಿರಿಯಾವಲಿ ಹೇಳಿದರು.
ಪಠ್ಯ ಶಿಕ್ಷಣಕ್ಕೆ ಮಾತ್ರ ಪೂರಕವಾಗಿರದೇ ನಮ್ಮ ಸಂಸ್ಕೃತಿ, ಸಂಸ್ಕಾರ ಹಾಗೂ ಬಾಲ್ಯದಲ್ಲಿ ಮಕ್ಕಳಿಗೆ ವ್ಯವಹಾರಿಕ ಜ್ಞಾನವನ್ನು ನೀಡಬೇಕಾದ ಅಗತ್ಯವಿದೆ. ಇದರಿಂದ ಮಕ್ಕಳ ಮನೋವಿಕಸನಕ್ಕೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ನಡೆಯುವ ಮತ್ತು ಅಲ್ಲಿನ ಪರಿಸರವನ್ನು ಪರಿಚಯಿಸುವ ಉದ್ದೇಶದಿಂದ ಹಲವು ಸೊಪ್ಪು-ತರಕಾರಿ ಪ್ರತಿನಿತ್ಯ ಅಂಗಡಿಯಲ್ಲಿ ಸಿಗುವ ವಸ್ತುಗಳ ಪರಿಚಯವಾಗುವ ನಿಟ್ಟಿನಲ್ಲಿ ಮಕ್ಕಳ ಸಂತೆ ಪೂರಕವಾಗುತ್ತದೆ. ಶಿಕ್ಷಣ ಇಲಾಖೆ ರೂಪಿಸಿರುವ ಈ ಯೋಜನೆಯಿಂದ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದರು ಹೇಳಿದರು.
ಇತಿಹಾಸ ಸಂಶೋಧಕ ಶ್ರೀಪಾದ ಬಿಚ್ಚುಗತ್ತಿ ಮಾತನಾಡಿ, ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಸಾಮಾಜಿಕ ಚಿಂತನೆ ಮತ್ತು ಜವಾಬ್ದಾರಿಯನ್ನು ತಿಳಿಸುತ್ತಿರುವುದು ಉತ್ತಮ ಕಾರ್ಯವಾಗಿದೆ. ಇಂತಹ ಕಾರ್ಯಕ್ರಮ ನಡೆಯಲು ಪೋಷಕರ ಶ್ರಮವೂ ಸಹ ಸಾಕಷ್ಟಿದೆ. ಮಕ್ಕಳಿಗೆ ಅಗತ್ಯ ವಸ್ತುಗಳ ಕುರಿತು ಪರಿಚಯಿಸುವುದರಿಂದ ಅವರ ಜ್ಞಾನದ ಮಟ್ಟವು ಸಹ ಉನ್ನತಿಯಾಗುತ್ತದೆ ಎಂದರು.ಮಕ್ಕಳಿಗೆ ಪುಸ್ತಕದ ಜ್ಞಾನವಷ್ಟೇ ಸಾಲದು. ಅವರಿಗೆ ವ್ಯವಹಾರ ಜ್ಞಾನವೂ ಅಗತ್ಯವಿದೆ. ಬಾಲ್ಯದಿಂದಲೇ ಓದಿನ ಜತೆಗೆ ಜೀವನಕ್ಕೆ ಅಗತ್ಯ ನೆರವಾಗುವ ಇನ್ನಿತರ ಜ್ಞಾನವನ್ನು ಒದಗಿಸಿಕೊಡುವ ಮೂಲಕ ಶಿಕ್ಷಣ ಸಂಸ್ಥೆಗಳು ನೆರವಾಗಿ ಮಾದರಿಯಾಗಬೇಕು. ಮಕ್ಕಳ ಅಭಿರುಚಿಗೆ ತಕ್ಕಂತೆ ಅವರ ಆಸಕ್ತಿಯನ್ನು ಗಮನಿಸಿ ಪೋಷಿಸುವ ಜವಾಬ್ದಾರಿ ಪೋಷಕರದ್ದು. ಮಾನವಿಕ ಆವರಣವನ್ನು ಪಠ್ಯೇತರ ಚಟುವಟಿಕೆಗಳ ಮೂಲಕ ತಿಳಿಸಿಕೊಡುವ ಉತ್ಸಾಹ, ಕರ್ತವ್ಯ ಸಮಾಜದ್ದು ಎಂದ ಅವರು, ಆಶಾಕಿರಣ್ ಸಂಸ್ಥೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಮತ್ತು ಬೌದ್ಧಿಕ ವಿಕಾಸಕ್ಕೆ ಪೂರಕ ಜ್ಞಾನವನ್ನು ಹಂಚಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.
ನಂತರ ನಡೆದ ಮಕ್ಕಳ ಸಂತೆಯಲ್ಲಿ ಮಕ್ಕಳು ಆಹಾರ, ಸ್ಟೇಷನರಿಸ್, ಬಟ್ಟೆ, ಒಡವೆ, ಸೊಪ್ಪು-ತರಕಾರಿ ಮುಂತಾದವುಗಳ ಮಾರಾಟ ಮಾಡಿದರು.ಈ ಸಂದರ್ಭದಲ್ಲಿ ಆಶಾಕಿರಣ್ ಸಂಸ್ಥೆ ಮುಖ್ಯಸ್ಥ ಯು. ಸಂಗಪ್ಪ, ಮುಖ್ಯ ಶಿಕ್ಷಕ ಶೋಭಾ ಯು. ಸಂಗಪ್ಪ ಸೇರಿದಂತೆ ಸಹ ಶಿಕ್ಷಕರು, ಮಕ್ಕಳ ಪೋಷಕರು ಹಾಜರಿದ್ದರು.