ವಚನ ಸಾಹಿತ್ಯದ ಜ್ಞಾನ ಭಂಡಾರ ಶಿವಲಿಂಗೇಶ್ವರ ಶ್ರೀ

KannadaprabhaNewsNetwork | Published : Nov 28, 2024 12:31 AM

ಸಾರಾಂಶ

ಭಂಡಿವಾಡ-ಮಂಟೂರು ಹಾಗೂ ಬಮ್ಮಿಗಟ್ಟಿ ಅಡವಿ ಸಿದ್ಧೇಶ್ವರ ಮಠದ ಪೀಠಾಧಿಪತಿಗಳಾಗಿದ್ದ ಲಿಂ. ಶಿವಲಿಂಗೇಶ್ವರ ಶ್ರೀಗಳು ವಚನ ಸಾಹಿತ್ಯ ಪ್ರಸಾರಕ್ಕೆ ತಮ್ಮದೆಯಾದ ಕೊಡುಗೆ ನೀಡಿದ್ದಾರೆ. ವಚನ ಸಾಹಿತ್ಯದ ಬಗ್ಗೆ ಅವರು ಅಪಾರ ಜ್ಞಾನ ಹೊಂದಿದ್ದರು.

ಹುಬ್ಬಳ್ಳಿ:

ವಚನ ಸಾಹಿತ್ಯದ ಪರಿಪೂರ್ಣ ಜ್ಞಾನವನ್ನು ಲಿಂ. ಶಿವಲಿಂಗೇಶ್ವರ ಶ್ರೀಗಳು ಹೊಂದಿದ್ದರು ಎಂದು ಶಿರಹಟ್ಟಿ ಫಕೀರ ದಿಂಗಾಲೇಶ್ವರ ಶ್ರೀ ಹೇಳಿದರು.

ತಾಲೂಕಿನ ಭಂಡಿವಾಡ-ಮಂಟೂರು ಗ್ರಾಮದ ಶ್ರೀಅಡವಿ ಸಿದ್ಧೇಶ್ವರ ಮಠದಲ್ಲಿ ಬುಧವಾರ ನಡೆದ ಲಿಂ. ಶಿವಲಿಂಗೇಶ್ವರ ಶ್ರೀಗಳ ಪುಣ್ಯಸ್ಮರಣೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.

ಭಂಡಿವಾಡ-ಮಂಟೂರು ಹಾಗೂ ಬಮ್ಮಿಗಟ್ಟಿ ಅಡವಿ ಸಿದ್ಧೇಶ್ವರ ಮಠದ ಪೀಠಾಧಿಪತಿಗಳಾಗಿದ್ದ ಲಿಂ. ಶಿವಲಿಂಗೇಶ್ವರ ಶ್ರೀಗಳು ವಚನ ಸಾಹಿತ್ಯ ಪ್ರಸಾರಕ್ಕೆ ತಮ್ಮದೆಯಾದ ಕೊಡುಗೆ ನೀಡಿದ್ದಾರೆ. ವಚನ ಸಾಹಿತ್ಯದ ಬಗ್ಗೆ ಅವರು ಅಪಾರ ಜ್ಞಾನ ಹೊಂದಿದ್ದರು. ರಾಜ್ಯದಲ್ಲೇ ವಚನ ಸಾಹಿತ್ಯ ಅರಿತುಕೊಂಡಿರುವ ಪ್ರಮಖರಲ್ಲೊಬ್ಬರಾಗಿದ್ದರು ಎಂದರು.

ಅವರಲ್ಲಿನ ಜ್ಞಾನ ಬಹುತೇಕರಿಗೆ ಮಾದರಿಯಾಗುವಂತಹದ್ದು. ವಚನ ಸಾಹಿತ್ಯ ವಿಮರ್ಶೆಯ ದೃಷ್ಟಿಯಿಂದ ಲಿಂ. ಶಿವಲಿಂಗೇಶ್ವರ ಶ್ರೀಗಳು ಇನ್ನಷ್ಟು ವರ್ಷ ನಮ್ಮ ಜತೆಯಲ್ಲಿರಬೇಕಿತ್ತು ಎಂದು ಸ್ಮರಿಸಿದರು.

ಬೊಮ್ಮನಹಳ್ಳಿಯ ಶಿವಯೋಗೇಶ್ವರ ಶ್ರೀ ಮಾತನಾಡಿ, ಭಂಡಿವಾಡ-ಮಂಟೂರು ಗ್ರಾಮದ ಮೇಲಿನ ಪ್ರೇಮದಿಂದ ಕೆಳಗಿ ಸಂಸ್ಥಾನದ ಮಠವನ್ನೇ ಬಿಟ್ಟು ಬಂದಿದ್ದರು. ಬಯಲು ಜಾಗದಲ್ಲಿ ಶ್ರೀಮಠ ನಿರ್ಮಿಸಿ ಭಕ್ತರ ಉದ್ಧಾರಕ್ಕೆ ಶ್ರಮಿಸಿದ್ದಾರೆ. ಕಿರಿಯರಲ್ಲಿ ಕಿರಿಯಾಗಿ, ಹಿರಿಯರಲ್ಲಿ ಹಿರಿಯರಾಗಿದ್ದರು ಎಂದರು.

ರುದ್ರಾಕ್ಷಿಮಠ ಬಸವಲಿಂಗ ಶ್ರೀ ಮಾತನಾಡಿ, ಶಿವಲಿಂಗೇಶ್ವರ ಶ್ರೀಗಳ ಅಗಲಿಕೆಯಿಂದ ಧಾರ್ಮಿಕವಾಗಿ ಅನಾಥ ಪ್ರಜ್ಞೆ ಕಾಡುತ್ತಿದೆ. ಸಾತ್ವಿಕ ಮಹಾಸ್ವಾಮಿಗಳು. ಮರಿ ದೇವರ ಪಟ್ಟಾಧಿಕಾರ ಮಾಡುವ ಇಚ್ಛೆಯಿತ್ತು. ಗುರುವಿನ ಆಶಯದಂತೆ ನಾವೆಲ್ಲ ನಡೆಯಬೇಕು ಎಂದು ಕರೆ ನೀಡಿದರು.

ಕುಂದಗೋಳ ಕಲ್ಯಾಣಪುರ ಮಠದ ಬಸವಣ್ಣಜ್ಜ ಮಾತನಾಡಿ, ಲಿಂ. ಶಿವಲಿಂಗೇಶ್ವರ ಸ್ವಾಮೀಜಿಗಳು ಆದರ್ಶದ ಜೀವನ ನಡೆಸಿದವರು. ಶಾಂತ ಸ್ವಭಾವದ ಮೂರ್ತಿ. ಜನ ಸೇವೆಯೇ ಜನಾರ್ದನನ ಸೇವೆ ಎಂದುಕೊಂಡವರು. ಭಕ್ತರು ಮುಂದಿನ ಉತ್ತರಾಧಿಕಾರಿಯೊಂದಿಗೆ ಸೇರಿ ಶ್ರೀಮಠದ ಅಭಿವೃದ್ಧಿಗೆ ಮುಂದಾಗಬೇಕು. ಸಮಾಜದ ದೀಕ್ಷೆ ತೆಗೆದುಕೊಂಡ ಇಂಧುದರ ದೇವರೊಂದಿಗೆ ಗ್ರಾಮಸ್ಥರು ನಿಲ್ಲಬೇಕು ಎಂದರು.

ಶಿರಹಟ್ಟಿ ಫಕೀರ ಸಿದ್ದರಾಮ ಶ್ರೀ, ಕೆಳಗಿ ಶಿವಲಿಂಗೇಶ್ವರ ಸಂಸ್ಥಾನ ಮಠ ಶಿವಯೋಗೇಶ್ವರ ಶ್ರೀ, ಶ್ರೀಮಠದ ಉತ್ತರಾಧಿಕಾರಿ ಇಂಧುದರ ದೇವರು, ಹರಿಹರ ಕುಮಾರಪಟ್ಟಣ ಪುಣ್ಯಕೋಟಿ ಮಠದ ಜಗದೀಶ್ವರ ಶ್ರೀ, ಮಂಟೂರು ರಾಮಲಿಂಗೇಶ್ವರ ಮಠದ ಮಹಾಂತಲಿಂಗ ಶ್ರೀ ಸೇರಿದಂತೆ ಹಲವರಿದ್ದರು.

ರಾಜ್ಯಕ್ಕೆ ಮಾದರಿಯಾಗಲಿ:

ಮಂಟೂರಿನಲ್ಲಿ 775 ಮಂಟಪ ಪೂಜೆಯಲ್ಲಿ ಪಾಲ್ಗೊಂಡಿದ್ದ ಹಾನಗಲ್ಲ ಕುಮಾರ ಶ್ರೀಗಳ ಶಿವಯೋಗ ಮಂದಿರ ಸ್ಥಾಪಿಸುವ ಸಂಕಲ್ಪ ಮಾಡಿದರು. ಇಂತಹ ಪುಣ್ಯಭೂಮಿಯಲ್ಲಿರುವ ಶ್ರೀಮಠ ರಾಜ್ಯಕ್ಕೆ ಮಾದರಿಯಾಗಬೇಕು. ಶ್ರೀಗಳ ಅಶಯದಂತೆ ಶಾಲೆಯ ಅಭಿವೃದ್ಧಿಗೆ ಎಲ್ಲರೂ ಮುಂದಾಗಬೇಕು ಎಂದು ಫಕೀರ ದಿಂಗಾಲೇಶ್ವರ ಶ್ರೀ ಹೇಳಿದರು.

Share this article