ಭೀಮಣ್ಣ ಗಜಾಪುರ
ಈ ಹೋರಾಟಕ್ಕೆ ಪಿಂಜಾರ ರಂಜಾನಸಾಬ್ ಪ್ರಾಣತೆತ್ತ ಏಕಮಾತ್ರರಾಗಿದ್ದರೂ ಇನ್ನು ಕೆಲವು ಹೋರಾಟಗಾರರು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಕರ್ನಾಟಕ ಏಕೀಕರಣವಾದಾಗ ಕೂಡ್ಲಿಗಿ ತಾಲೂಕಿನ ಕೋ. ಚೆನ್ನಬಸಪ್ಪ ಅವರ ಹಸುವಿನ ಕೊಟ್ಟಿಗೆಗೆ ಆಂಧ್ರದ ಕೆಲವು ಪುಂಡರು ಬೆಂಕಿ ಹಚ್ಚಿದ್ದರು. ಸಕ್ರಿಯವಾಗಿ ಚಳವಳಿಯಲ್ಲಿ ಧುಮುಕಿದ್ದ ಕೋ.ಚೆನ್ನಬಸಪ್ಪ ಅವರನ್ನು ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಸ್ಮರಿಸಬೇಕಿದೆ.
ಕೂಡ್ಲಿಗಿ ತಾಲೂಕಿನ ಗಡಿಗ್ರಾಮ ಆಲೂರಿನವರಾದ ಕೋಣನ ಮನೆತನದ ಚೆನ್ನಬಸಪ್ಪ 1945ರಲ್ಲಿ ಬೆಳಗಾವಿಯಲ್ಲಿ ಲಾ ಕಾಲೇಜಿನ ವಿದ್ಯಾರ್ಥಿ ದೆಸೆಯಿಂದಲೂ ಏಕೀಕರಣ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ನಂತರ 1946ರಲ್ಲಿ ವಕೀಲರಾಗಿ ವೃತ್ತಿ ಪ್ರಾರಂಭಿಸಿದರು. ಬಳ್ಳಾರಿಯಿಂದಲೇ ಪ್ರಾರಂಭವಾದ ಈ ಹೋರಾಟದಲ್ಲಿ ಕೋಚೆ ತೊಡಗಿಸಿಕೊಂಡಿದ್ದರು. ಏಕೀಕರಣ ಮಹಾಸಮಿತಿ ಸದಸ್ಯರಾಗಿ, ಬಳ್ಳಾರಿ ಜಿಲ್ಲಾ ಕರ್ನಾಟಕ ಸಂಘ, ಬಳ್ಳಾರಿ ಜಿಲ್ಲಾ ಕರ್ನಾಟಕ ಕ್ರಿಯಾ ಸಮಿತಿ, ಅಕರಾನಿ ಪರಿಷತ್ತು, ಪೂರ್ವ ಏಕೀಕರಣ ಸಂಘದ ಪದಾಧಿಕಾರಿಯಾಗಿ ನಾಮಕರಣಗೊಂಡ ಸದಸ್ಯರಾಗಿದ್ದರು. ರೈತ ಎಂಬ ಪತ್ರಿಕೆ ಸಂಪಾದಕರಾಗಿದ್ದ ಕೋಚೆ ಚಳವಳಿ ಬಗ್ಗೆ ಪ್ರತಿ ಹೋರಾಟದ ಹೆಜ್ಜೆಗಳನ್ನು ದಾಖಲಿಸುತ್ತಾ ಹೋಗಿದ್ದಲ್ಲದೇ ಜನತೆಗೆ ಕನ್ನಡದ ಸ್ವಾಭಿಮಾನದ ಕಿಚ್ಚು ಹಚ್ಚಿದ್ದರು. ಈ ಹೋರಾಟದಲ್ಲಿ ಕೋಚೆಯವರೇ ಅತೀ ಕಿರಿಯ ವಯಸ್ಸಿನ ವ್ಯಕ್ತಿಯಾಗಿದ್ದರು.ಹಸುವಿನ ಕೊಠಡಿಗೆ ಬೆಂಕಿ:
ಕರ್ನಾಟಕ ಏಕೀಕರಣವಲ್ಲದೇ ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿ ಸೆರೆಮನೆವಾಸ ಅನುಭವಿಸಿದ ಕೋಚೆ, ವಕೀಲರಾಗಿ, ನ್ಯಾಯಾಧೀಶರಾಗಿ, ಪತ್ರಕರ್ತರಾಗಿ, ಸಾಹಿತಿಯಾಗಿ 1951ರಲ್ಲಿ ಕೂಡ್ಲಿಗಿ ಕ್ಷೇತ್ರದಿಂದ ಮದ್ರಾಸ್ ಅಸೆಂಬ್ಲಿಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು.
1933ರಲ್ಲಿ ಹಗರಿಬೊಮ್ಮನಹಳ್ಳಿಯಲ್ಲಿ ನಡೆದ ಬಳ್ಳಾರಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಕೋಚೆ 2011ರಲ್ಲಿ ವಿಜಾಪುರದಲ್ಲಿ ನಡೆದ ಅಖಿಲ ಭಾರತ 79ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವ ಮೂಲಕ ಕೂಡ್ಲಿಗಿ ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ. ಅವರು ನಮ್ಮನ್ನಗಲಿ 11 ವರ್ಷ ಕಳೆದಿವೆ. ಅವರ ನಾಡಪ್ರೇಮ, ದೇಶಪ್ರೇಮ ಮಾತ್ರ ಇಂದಿನ ಯುವಕರಿಗೆ ಮಾದರಿಯಾಗಿದೆ.