ಸಮೃದ್ಧ ಮಳೆ, ಬೆಳೆ: ಅದ್ಧೂರಿ ಹಬ್ಬ ಆಚರಣೆ

KannadaprabhaNewsNetwork |  
Published : Nov 01, 2024, 12:09 AM IST
ಪೋಟೊ31ಕೆಎಸಟಿ1: ಕುಷ್ಟಗಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ವ್ಯಾಪಾರ ವಹಿವಾಟು ಜೋರಾಗಿ ನಡೆಯಿತು. | Kannada Prabha

ಸಾರಾಂಶ

ಕಳೆದ ವರ್ಷ ದೀಪಾವಳಿಯ ಸಂದರ್ಭದಲ್ಲಿ ಜನ ಬರಗಾಲದಿಂದ ತತ್ತರಿಸಿದ್ದರು. ಈ ಬಾರಿ ಅತ್ಯುತ್ತಮ ಮಳೆಯಾಗಿದ್ದು, ಬೆಳೆ ಸಮೃದ್ಧವಾಗಿ ಬಂದಿದೆ. ಇದೇ ಖುಷಿಯಲ್ಲಿ ದೀಪಾವಳಿ ಆಚರಣೆಗೆ ಜನ ಭರದ ಸಿದ್ಧತೆ ನಡೆಸಿದ್ದು, ಅಗತ್ಯ ವಸ್ತುಗಳ ಖರೀದಿ ಜೋರಾಗಿದೆ.

ಖುಷಿಯಲ್ಲಿ ರೈತ ಸಮುದಾಯ । ಅಗತ್ಯ ವಸ್ತುಗಳ ಖರೀದಿ ಜೋರು

ಪರಶಿವಮೂರ್ತಿ ದೋಟಿಹಾಳ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಕಳೆದ ವರ್ಷ ದೀಪಾವಳಿಯ ಸಂದರ್ಭದಲ್ಲಿ ಜನ ಬರಗಾಲದಿಂದ ತತ್ತರಿಸಿದ್ದರು. ಈ ಬಾರಿ ಅತ್ಯುತ್ತಮ ಮಳೆಯಾಗಿದ್ದು, ಬೆಳೆ ಸಮೃದ್ಧವಾಗಿ ಬಂದಿದೆ. ಇದೇ ಖುಷಿಯಲ್ಲಿ ದೀಪಾವಳಿ ಆಚರಣೆಗೆ ಜನ ಭರದ ಸಿದ್ಧತೆ ನಡೆಸಿದ್ದು, ಅಗತ್ಯ ವಸ್ತುಗಳ ಖರೀದಿ ಜೋರಾಗಿದೆ.

ಬೆಳಕಿನ ಹಬ್ಬ ದೀಪಾವಳಿ ಹಿನ್ನೆಲೆ ಪಟ್ಟಣದ ಬಸವೇಶ್ವರ ವೃತ್ತ, ಕಾಯಿಪಲ್ಯೆ ಮಾರುಕಟ್ಟೆ, ಪೊಲೀಸ್‌ ಠಾಣೆಯ ಮುಂಭಾಗ, ಬಸ್ ನಿಲ್ದಾಣದ ಮುಖ್ಯರಸ್ತೆ ಹಾಗೂ ತಾಲೂಕಿನ ದೋಟಿಹಾಳ, ಹನುಮಸಾಗರ, ಹನುಮನಾಳ ಹಾಗೂ ತಾವರಗೇರಾ ಸೇರಿದಂತೆ ವಿವಿಧ ಕಡೆಗಳಲ್ಲಿ ಅಗತ್ಯ ವಸ್ತುಗಳಾದ ಹಣ್ಣು ಹಂಪಲು ಹಾಗೂ ಅಲಂಕಾರಿಕ ವಸ್ತುಗಳ ಖರೀದಿಯಲ್ಲಿ ಜನ ನಾಮುಂದು ತಾಮುಂದು ಎನ್ನುವಂತೆ ತೊಡಗಿದ್ದರು.

ದೀಪಾವಳಿ ಹಬ್ಬಕ್ಕಾಗಿ ಹೊಸ ಹೊಸ ವಿನ್ಯಾಸದ ಹಲವು ಬಗೆಯ ಉಡುಪುಗಳು ಮಾರುಕಟ್ಟೆಗೆ ಬಂದಿದ್ದು, ಈ ವರ್ಷ ಬೆಲೆ ಏರಿಕೆ ಬಿಸಿ ತಟ್ಟಿದೆ. ಬಟ್ಟೆ, ಗೃಹೋಪಯೋಗಿ, ದಿನಸಿ, ಸ್ಟೇಷನರಿ ಅಂಗಡಿಗಳಲ್ಲಿ ಜನ ತುಂಬಿ ತುಳುಕುತ್ತಿದ್ದಾರೆ.

ಮಾರುಕಟ್ಟೆಯ ತುಂಬಾ ಚೆಂಡು ಹೂವು, ಗುಲಾಬಿ, ಮಲ್ಲಿಗೆ, ಸೇವಂತಿ, ಕನಕಾಂಬರ, ವಿವಿಧ ಬಗೆಯ ಹಣ್ಣುಗಳು, ಲಕ್ಷ್ಮೀ ಫೋಟೋಗಳು, ಅಲಂಕಾರಿಕ ವಸ್ತುಗಳು ತುಂಬಿಕೊಂಡಿವೆ. ವಿಶೇಷವಾಗಿ ಬಟ್ಟೆ ಅಂಗಡಿಗಳಲ್ಲಂತೂ ಜನವೋ ಜನ.

ಬೆಲೆ ಏರಿಕೆಯ ಬಿಸಿ:

ಮಾರುಕಟ್ಟೆಯಲ್ಲಿ ಹೂವಿನ ದರ ಕಳೆದ ವಾರಕ್ಕಿಂತ ಹೆಚ್ಚಿದೆ. ಒಂದು ಕೆಜಿ ಸೇವಂತಿ ಹೂವಿಗೆ ₹250ರಿಂದ ₹300 ಇದ್ದರೆ, ಗುಲಾಬಿ ₹400, ಮಲ್ಲಿಗೆ ₹500ರಿಂದ ₹800, ಕನಕಾಂಬರ ₹800ರಿಂದ ₹1000, ಚೆಂಡು ಹೂವು ₹100-₹150 ದರವಿದೆ

ಹಣ್ಣುಗಳ ದರ:

ಒಂದು ಕೆಜಿ ಸೇಬು ಹಣ್ಣಿಗೆ ₹150ರಿಂದ ₹200, ದ್ರಾಕ್ಷಿ ₹70-₹100 ಕಿತ್ತಳೆ, ₹50ರಿಂದ ₹80, ದಾಳಿಂಬೆ ₹150 ರಿಂದ ₹200, ಸಪೋಟಾ ₹50, ಬಾಳೆ ಹಣ್ಣು ₹50, ಮೋಸಂಬಿ ₹60, ಸೀತಾಫಲ ₹50ರಂತೆ ಮಾರಾಟವಾಯಿತು.

ಆಕಾಶ ಬುಟ್ಟಿಗಳು ಗಾತ್ರಕ್ಕೆ ಅನುಗುಣವಾಗಿ ಮಾರಾಟಕ್ಕಿದ್ದು, ₹250ರಿಂದ ₹1500ರ ವರೆಗೆ ಮಾರಾಟವಾದವು. ನಕ್ಷತ್ರ ಮಾದರಿ, ಕಂದಿಲು ಆಕಾರದ ಆಕಾಶ ಬುಟ್ಟಿಗಳು, ಕೋಮಲ್ ಡಿಸೈನ್, ಗುಲಾಬ್ ರಂಗೀಲಾ, ಚಂದ್ರನಾಕಾರದ ಆಕಾಶ ಬುಟ್ಟಿಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ.

ವಾಹನಗಳ ಮಾಲೀಕರು ಹಾಗೂ ರೈತಾಪಿ ಜನ ತಮ್ಮ ವಾಹನ ಹಾಗೂ ಎತ್ತುಗಳಿಗೆ ಅಲಂಕಾರಿಕ ಸಾಮಗ್ರಿಗಳನ್ನು ಖರೀದಿಸಿದರು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌