ಹಾನಗಲ್ಲ ತಾಲೂಕಿನ 74 ಪ್ರೌಢಶಾಲೆಗಳ 3601 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಸಿದ್ಧವಾಗಿದ್ದು, ತಾಲೂಕಿನ 14 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಚಿನ್ನಿಕಟ್ಟಿ ತಿಳಿಸಿದರು.
ಹಾನಗಲ್ಲ: ತಾಲೂಕಿನ 74 ಪ್ರೌಢಶಾಲೆಗಳ 3601 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಸಿದ್ಧವಾಗಿದ್ದು, ತಾಲೂಕಿನ 14 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಚಿನ್ನಿಕಟ್ಟಿ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದ ಅವರು, 41 ಸರ್ಕಾರಿ, 17 ಅನುದಾನಿತ, 16 ಅನುದಾನ ರಹಿತ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಸಿದ್ಧಗೊಂಡಿದ್ದು 14 ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ. ತಲಾ 14 ಅಧೀಕ್ಷಕರು, ಪ್ರಶ್ನೆಪತ್ರಿಕೆ ಪಾಲಕರು, ಜಾಗೃತ ದಳ ಸದಸ್ಯರು, ಮೊಬೈಲ ಸ್ವಾಧೀನಾಧಿಕಾರಿಗಳು, ಸಿಸಿ ಟಿವಿ ತಾಂತ್ರಿಕ ಸಹಾಯಕರು, ಕಚೇರಿ ಸಹಾಯಕರು, ಪೊಲೀಸ್ ಸಿಬ್ಬಂದಿ, 20 ಗ್ರುಪ್ ಡಿ ನೌಕರರು, 6 ಮಾರ್ಗಾಧಿಕಾರಿಗಳು, 280ಕ್ಕೂ ಅಧಿಕ ಕೊಠಡಿ ಮೇಲ್ವಿಚಾರಕರನ್ನು ಪರೀಕ್ಷಾ ಸುವ್ಯವಸ್ಥೆಗಾಗಿ ನೇಮಿಸಲಾಗಿದೆ. ತಾಲೂಕಿನ ಎಲ್ಲ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ಮಕ್ಕಳಿಗೆ ಪರೀಕ್ಷಾ ಪ್ರವೇಶ ಪತ್ರಗಳನ್ನು ವಿತರಿಸುವ ಕಾರ್ಯ ಪೂರ್ಣಗೊಂಡಿದೆ. ಮಕರವಳ್ಳಿ ಹೊರತುಪಡಿಸಿ ಎಲ್ಲೆಡೆ ವಿಶೇಷ ಚೇತನ ಮಕ್ಕಳು ಕೂಡ ಪರೀಕ್ಷೆ ಬರೆಯುತ್ತಿದ್ದಾರೆ. ಇಂತಹ ಮಕ್ಕಳಿಗೆ 1 ಗಂಟೆಯ ಹೆಚ್ಚುವರಿ ಅವಧಿಯನ್ನು ಪರೀಕ್ಷೆ ಬರೆಯಲು ನೀಡಲಾಗಿದೆ. ಅಲ್ಲದೆ ಗ್ರೌಂಡಫ್ಲೋರ್‌ನಲ್ಲಿಯೇ ಇಂತಹ ಮಕ್ಕಳಿಗೆ ಪರೀಕ್ಷೆ ಬರೆಯಲು ಎಲ್ಲ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಪರೀಕ್ಷೆ ಆರಂಭಕ್ಕೆ ಮೊದಲು 10 ನಿಮಿಷ ಪ್ರಶ್ನೆ ಪತ್ರಿಕೆ ಓದಿಕೊಳ್ಳಲು ಅವಕಾಶ ನೀಡಲಾಗಿದೆ. ಬಸ್ ವ್ಯವಸ್ಥೆ ಇಲ್ಲದ ಹಿರೇಬಾಸೂರು ಪರೀಕ್ಷಾರ್ಥಿಗಳಿಗಾಗಿ ಕೂಸನೂರು ಪರೀಕ್ಷಾ ಕೇಂದ್ರದವರೆಗೆ ಬಸ್ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ ಎಂದು ತಿಳಿಸಿದರು. ಈಗಾಗಲೇ ಹತ್ತು ಹಲವು ರೀತಿಯನ್ನು ಮಕ್ಕಳ ಪರೀಕ್ಷೆ ಸಿದ್ಧತೆಗಾಗಿ ನಮ್ಮ ಎಲ್ಲ ಪ್ರೌಢಶಾಲೆಗಳ ಶಿಕ್ಷಕರು ಶ್ರಮಿಸಿದ್ದಲ್ಲದೆ, ಈಗ ಮತ್ತೆ ಪರೀಕ್ಷೆ ನಂತರವೂ ಮಕ್ಕಳಿಗೆ ವಿಶೇಷ ವರ್ಗಗಳನ್ನು ನಡೆಸಲಾಗುತ್ತಿದೆ. ರಜಾ ದಿನಗಳಲ್ಲಿ ಕೂಡ ಮಕ್ಕಳಿಗೆ ವಿಶೇಷ ವರ್ಗಗಳ ಪರೀಕ್ಷಾ ಸಿದ್ಧತೆ ಮಾಡಿಸಲಾಗುತ್ತಿದೆ. ಕಳೆದ ವರ್ಷ ಶೇ.70.2 ರಷ್ಟು ಎಸ್‌ಎಸ್‌ಎಲ್‌ಸಿ ಫಲಿತಾಂಶ ಹಾನಗಲ್ಲ ತಾಲೂಕಿನದಾಗಿತ್ತು. ಈ ಬಾರಿ ಶೇ.100 ಫಲಿತಾಂಶಕ್ಕೆ ನಮ್ಮ ಶಿಕ್ಷಕರ ಪ್ರಯತ್ನವಿದೆ. ಮಾರ್ಚ 18ರಿಂದ ಎಪ್ರೀಲ್ 2 ರ ವರೆಗೆ ಪರೀಕ್ಷೆಗಳು ನಡೆಯುವವು. ಸುದ್ದಿಗೋಷ್ಠಿಯಲ್ಲಿ ಪರೀಕ್ಷಾ ವಿಭಾಗದ ಬಿ.ಉಮೇಶ ಇದ್ದರು.