ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಪ್ರಮುಖರು ಮಾತನಾಡಿ, ವೀರಶೈವರು, ಒಕ್ಕಲಿಗರು ಇತ್ಯಾದಿ ಜಾತಿಗಳು ಎಂಬುದಾಗಿ ಜಾತಿಗಣತಿಗೆ ಮುಂದಾಗಿದೆ. ಜಾತಿಗಣತಿ ವರದಿ ಅನುಷ್ಠಾನದಿಂದ ಯಾವುದೇ ಜನಾಂಗಕ್ಕೆ ಅನಾನುಕೂಲವಾಗಬಾರದು. ವರದಿಯನ್ನು ಈಗಾಗಲೇ ಹಲವು ಸಮುದಾಯಗಳು ಹಾಗೂ ಸಂಘ ಸಂಸ್ಥೆಗಳೂ ವಿರೋಧಿಸಿವೆ. ಅಲ್ಲದೇ, ವೀರಶೈವ ಸಮುದಾಯದವರು, ಒಕ್ಕಲಿಗ ಸಮುದಾಯದ ಸ್ವಾಮೀಜಿಗಳು ಪ್ರತಿಭಟನೆ ನಡೆಸಿ, ವಿರೋಧ ವ್ಯಕ್ತಪಡಿಸಿದ್ದಾರೆ. ಜಾತಿಗಣತಿಯನ್ನು ವೈಜ್ಞಾನಿಕವಾಗಿ ನಡೆಸದಿದ್ದಲ್ಲಿ ಜಿಲ್ಲೆಯಲ್ಲಿಯೂ ಪ್ರತಿಭಟನೆ ನಡೆಸುವಂತೆ ತೀರ್ಮಾನಿಸಲಾಯಿತು.
ಜಮ್ಮಾ ಕೋವಿ ಹಕ್ಕು 5 ಏಕರೆ ಕಡಿಮೆ ಇರುವವರಿಗೆ ನೀಡುವುದಿಲ್ಲ. ಆದರೆ 5 ಏಕರೆ 10 ಸೆಂಟ್ ಇರುವರಿಗೆ ನೀಡುತ್ತಾರೆ. ಇದು ಖಂಡನೀಯ. ಆದ್ದರಿಂದ 5 ಏಕರೆ ಒಳಗೆ ಇರುವವರಿಗೂ ಜಮ್ಮಾ ಕೋವಿ ಹಕ್ಕು ನೀಡುವಂತೆ ಠರಾವು ಮಂಡಿಸಲಾಯಿತು.ಒಕ್ಕಲಿಗರ ಒಡೆತನದ ಜಾಗವನ್ನು 5 ಎಕರೆಗಿಂತ ಕಡಿಮೆ ಮಾಡಲು ಸರ್ಕಾರ ಹೊರಡಿಸಿರುವ ಸುತ್ತೋಲೆಯಿಂದ ರಾಜ್ಯದ ಎಲ್ಲಾ ಸಣ್ಣ ಹಿಡುವಳಿದಾರರಿಗೆ ಅನಾನುಕೂಲವಾಗಲಿದೆ. ಆದ್ದರಿಂದ ಈ ಆದೇಶವನ್ನು ಸರ್ಕಾರ ಮರುಪರಿಶೀಲಿಸಿ ಪರಿಷ್ಕೃತ ಆದೇಶವನ್ನು ಹೊರಡಿಸಲು ಸರ್ಕಾರವನ್ನು ಒತ್ತಾಯಿಸುವ ಠರಾವು ಮಂಡಿಸಲಾಯಿತು.
ಬಡ ಒಕ್ಕಲಿಗರ ಹಿತ ಕಾಯುವುದು ನಮ್ಮ ಕಾಯಕವಾಗಿದೆ. ಆದರೆ, ಒಕ್ಕಲಿಗರ ಒಡೆತನದ ಜಾಗವನ್ನು 5 ಎಕರೆಗಿಂತ ಕಡಿಮೆ ಮಾಡಲು ಸರ್ಕಾರ ಸುತ್ತೋಲೆ ತಂದಿದೆ. ಈ ಸುತ್ತೋಲೆಗೆ ನಮ್ಮ ವಿರೋಧವಿದೆ. ಮುಂದಿನ ದಿನಗಳಲ್ಲಿ ಸುತ್ತೋಲೆಯನ್ನು ಸರಿಪಡಿಸದಿದ್ದಲ್ಲಿ ಸಮುದಾಯದವರನ್ನು ಒಗ್ಗೂಡಿಸಿ ಪ್ರತಿಭಟನೆ ನಡೆಸಲಾಗುವುದು. ಜಾತಿಗಣತಿ ಮತ್ತು ಜಾಗದ ಕುರಿತು ಸರ್ಕಾರದೊಂದಿಗೆ ಚರ್ಚಿಸಲಾಗುವುದು ಎಂದರು.
ಸಂಘದ ನಿದೇರ್ಶಕ ಕೆ.ಎಂ.ಲೋಕೇಶ್ ಮಾತನಾಡಿ, ಜಾತಿ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ನಮ್ಮಲ್ಲಿ 60-70 ಸಾವಿರ ಜನಸಂಖ್ಯೆಯಿದೆ ಎಂದು ಹೇಳಲಾಗುತ್ತದೆ. ಈ ಕುರಿತು ಸಂಘದಿಂದ ಸಮಿತಿ ರಚಿಸಿ ಪೂರ್ಣವಾದ ಮಾಹಿತಿ ಪಡೆಯುವಂತಾಗಬೇಕು ಎಂದರು.
ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ 9ನೇ ವಾರ್ಷಿಕ ಮಹಾಸಭೆ ಅಧ್ಯಕ್ಷತೆಯನ್ನು ಎಸ್.ಎಂ.ಚಂಗಪ್ಪ ವಹಿಸಿದ್ದರು. ಆಡಳಿತ ಮಂಡಳಿಯ ವರದಿಯನ್ನು ಸದಸ್ಯ ಜಿ. ಆರ್. ಭುವನೇಂದ್ರ ವಾಚಿಸಿದರೆ, ಎಸ್.ಎಂ.ಚಂಗಪ್ಪ ಲೆಕ್ಕಪತ್ರ ಮಂಡಿಸಿದರು.