ಕೊಡಗು ಮುಸ್ಲಿಂ ಕಪ್ ವಾಲಿಬಾಲ್ ಪಂದ್ಯಾವಳಿ: ಕೊಟ್ಟಮುಡಿ ಝೆಡ್‌ವೈಸಿ ತಂಡ ಚಾಂಪಿಯನ್

KannadaprabhaNewsNetwork | Published : Jan 23, 2024 1:48 AM

ಸಾರಾಂಶ

ಕೊಡಗು ಜಿಲ್ಲಾ ಮುಸ್ಲಿಂ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ (ಕೆ. ಡಿ. ಎಂ. ಎಸ್. ಸಿ. ಎ.) ವತಿಯಿಂದ ವಿರಾಜಪೇಟೆಯ ತಾಲೂಕು ಮೈದಾನದಲ್ಲಿ ಕಳೆದ ಮೂರು ದಿನಗಳಿಂದ ಆಯೋಜನೆಗೊಂಡಿದ್ದ 15ನೇ ವರ್ಷದ ಜಿಲ್ಲಾ ಮಟ್ಟದ ಜಮಾಅತ್ ವಾರು ಹೊನಲು ಬೆಳಕಿನ ಮುಸ್ಲಿಂ ಕಪ್ ವಾಲಿಬಾಲ್ ಪಂದ್ಯಾವಳಿ-2024ರ ಫೈನಲ್ ನಲ್ಲಿ ಕೊಟ್ಟಮುಡಿ ಝೆಡ್. ವೈ. ಸಿ. ತಂಡವು ಪ್ರಶಸ್ತಿ ಗೆದ್ದಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ ಕೊಟ್ಟಮುಡಿ ಝೆಡ್. ವೈ. ಸಿ. ತಂಡವು 15ನೇ ವರ್ಷದ ಕೊಡಗು ಜಿಲ್ಲಾ ಮುಸ್ಲಿಂ ಕಪ್ ವಾಲಿಬಾಲ್ ಪಂದ್ಯಾವಳಿ -2024ರ ಚಾಂಪಿಯನ್ ಪಟ್ಟವನ್ನು ತನ್ನ ಮುಡಿಗೇರಿಸಿಕೊಂಡಿತು. ಇದರಿಂದಾಗಿ ಈ ಬಾರಿಯೂ ವಿಜಯದ ಮಾಲೆ ಧರಿಸುವ ಕನಸಿನೊಂದಿಗೆ ಸೆಣೆಸಾಡಿದ ಕಳೆದ ಬಾರಿಯ ಚಾಂಪಿಯನ್ ಗುಂಡಿಕೆರೆ ತಂಡ ಕೇವಲ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಕೊಡಗು ಜಿಲ್ಲಾ ಮುಸ್ಲಿಂ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ (ಕೆ. ಡಿ. ಎಂ. ಎಸ್. ಸಿ. ಎ.) ವತಿಯಿಂದ ವಿರಾಜಪೇಟೆಯ ತಾಲೂಕು ಮೈದಾನದಲ್ಲಿ ಕಳೆದ ಮೂರು ದಿನಗಳಿಂದ ಆಯೋಜನೆಗೊಂಡಿದ್ದ 15ನೇ ವರ್ಷದ ಜಿಲ್ಲಾ ಮಟ್ಟದ ಜಮಾಅತ್ ವಾರು ಹೊನಲು ಬೆಳಕಿನ ಮುಸ್ಲಿಂ ಕಪ್ ವಾಲಿಬಾಲ್ ಪಂದ್ಯಾವಳಿ-2024ರ ಫೈನಲ್ ನಲ್ಲಿ ವಿನ್ನರ್ಸ್ ಪ್ರಶಸ್ತಿಗಾಗಿ ಹೋರಾಡಿದ ಕೊಟ್ಟಮುಡಿ ಝೆಡ್. ವೈ. ಸಿ. ತಂಡ ಎದುರಾಳಿಯಾಗಿದ್ದ ಬಲಿಷ್ಠ ಗುಂಡಿಕೆರೆ ತಂಡವನ್ನು 25-18 ಮತ್ತು 25-15ರ ನೇರ ಎರಡು ಸೆಟ್ಟುಗಳಿಂದ ಮಣಿಸಿ ವಿಜಯದ ನಗೆ ಬೀರಿತು.ಫೈನಲ್ ಪಂದ್ಯ ತೀವ್ರ ಕುತೂಹಲ ಮೂಡಿಸಿದಂತಿತ್ತು. ಹೆಚ್ಚು ಭರವಸೆಯ ಮೂಲಕ ಆಟ ಆರಂಭಿಸಿದ ಉಭಯ ತಂಡಗಳು ಸಮಬಲದ ಹೋರಾಟ ನಡೆಸಿದರೂ ಕೊಟ್ಟಮುಡಿ ಝೆಡ್. ವೈ. ಸಿ. ತಂಡ ಉತ್ತಮ ಪ್ರದರ್ಶನದ ಮೂಲಕ ತನ್ನ ಅಂಕಗಳನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿತು. ಪ್ರೇಕ್ಷಕರ ಸಮಬಲದ ಪ್ರೋತ್ಸಾಹ ಎರಡು ತಂಡಗಳಿಗೂ ಇತ್ತಾದರೂ, ಅಂತಿಮವಾಗಿ ಕೊಟ್ಟಮುಡಿ ಝೆಡ್. ವೈ. ಸಿ. ತಂಡ ಪಂದ್ಯಾವಳಿಯ ವಿಜಯದ ಮಾಲೆ ಧರಿಸಿತು.ಇದಕ್ಕೂ ಮೊದಲು ನಡೆದ ಮೊದಲ ಸೆಮಿ ಫೈನಲ್ ನಲ್ಲಿ ಗುಂಡಿಗೆರೆ ‘ಎ’ ತಂಡ ನಾಪೋಕ್ಲು ‘ಎ’ ತಂಡವನ್ನು ನೇರ ಎರಡು ಸೆಟ್ಟುಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿದರೆ, 2ನೇ ಸೆಮಿ ಫೈನಲ್ ನಲ್ಲಿ ಕೊಟ್ಟಮುಡಿ ಝೆಡ್. ವೈ. ಸಿ. ತಂಡ ಕರಿಕೆ ‘ಎ’ ತಂಡವನ್ನು ನೇರ ಎರಡು ಸೆಟ್ಟುಗಳಿಂದ ಪರಾಭವಗೊಳಿಸಿ ಪಂದ್ಯಾವಳಿಯ ಅಂತಿಮ ಹಂತಕ್ಕೆ ಅರ್ಹತೆ ಪಡೆದುಕೊಂಡಿತ್ತು.ಪಂದ್ಯಾವಳಿಯ ಬೆಸ್ಟ್ ಆಲ್ರೌಂಡರ್ ವಿಶೇಷ ಪ್ರಶಸ್ತಿಯನ್ನು ಕೊಟ್ಟಮುಡಿ ಝೆಡ್. ವೈ. ಸಿ. ತಂಡದ ಸುಹೇಲ್ ಪಡೆದುಕೊಂಡರೆ, ಬೆಸ್ಟ್ ಡಿಫೆನ್ಸ್ ಪ್ರಶಸ್ತಿಯನ್ನು ಅದೇ ತಂಡದ ಇರ್ಷಾದ್ ಪಡೆದುಕೊಂಡರು. ಬೆಸ್ಟ್ ಬ್ಲಾಕರ್ ಪ್ರಶಸ್ತಿಯನ್ನು ಕೊಟ್ಟಮುಡಿ ಝೆಡ್. ವೈ. ಸಿ. ತಂಡದ ಬಾಸಿತ್ ಪಡೆದುಕೊಂಡರೆ, ಬೆಸ್ಟ್ ಅಟ್ಯಾಕರ್ ಪ್ರಶಸ್ತಿಯನ್ನು ಗುಂಡಿಕೆರೆ ತಂಡದ ಬದ್ರುದ್ದೀನ್ ಪಡೆದುಕೊಂಡರು. ಪಂದ್ಯಾವಳಿಯ ಬೆಸ್ಟ್ ಪಾಸರ್ ಪ್ರಶಸ್ತಿ ಗುಂಡಿಕೆರೆ ತಂಡದ ಗಫೂರ್‌ ಪಾಲಾಯಿತು.

ಭಾನುವಾರ ರಾತ್ರಿ ನಡೆದ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಶಾಸಕ ಎ.ಎಸ್. ಪೊನ್ನಣ್ಣ ಭಾಗವಹಿಸಿದ್ದರು. ಸಮಾರಂಭದಲ್ಲಿ ಮಾತನಾಡಿದ ಪೊನ್ನಣ್ಣ, ಸಹೋದರತೆ ಮತ್ತು ಸಾಮರಸ್ಯದ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಕ್ರೀಡೆಗಳು ಕೂಡ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಮುಸ್ಲಿಂ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಪಿ.ಎ. ಹನೀಫ್ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ವ್ಯವಸ್ಥಿತ ರೀತಿಯಲ್ಲಿ ಸಂಘಟಿಸುವುದು ಸುಲಭದ ಮಾತಲ್ಲ. ಕಳೆದ 14 ವರ್ಷಗಳಿಂದ ಆಯೋಜಿಸಿಕೊಂಡು ಬರುತ್ತಿರುವ ಕೊಡಗು ಜಿಲ್ಲಾ ಮುಸ್ಲಿಂ ಕಪ್ ವಾಲಿಬಾಲ್ ಪಂದ್ಯಾವಳಿಗೆ ಸರ್ಕಾರದ ಅನುದಾನದ ಅಗತ್ಯವಿದೆ ಎಂದು ಹೇಳಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ, ವಿರಾಜಪೇಟೆ ಪುರಸಭಾ ಸದಸ್ಯ ದೇಚಮ್ಮ ಕಾಳಪ್ಪ, ಎಚ್.ಎಸ್. ಮತೀನ್ ಮೊಹಮ್ಮದ್ ರಾಫಿ, ಅಬ್ದುಲ್ ಜಲೀಲ್ ವಿವಿಧ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಎಚ್. ಎ.ಹಂಸ, ಎಂ.ಎ. ಇಸ್ಮಾಯಿಲ್, ಮೀದೇರಿರ ನವೀನ್, ಕಾಂಗ್ರೆಸ್ ಪ್ರಮುಖರಾದ ಲತೀಫ್ ಸುಂಟಿಕೊಪ್ಪ, ಕೆ.ಎಂ. ಸಯ್ಯದ್ ಭಾವ, ಆಲೀರ ರಶೀದ್, ಕೆ. ಡಿ. ಎಂ. ಎಸ್. ಸಿ. ಎ. ಮಾಜಿ ಅಧ್ಯಕ್ಷರಾದ ಅಬ್ದುಲ್ ರೆಹಮಾನ್, ಪ್ರಮುಖ ಪದಾಧಿಕಾರಿಗಳಾದ ಕರೀಂ ಕಡಂಗ, ಎಡಪಾಲ ಹಂಸು, ಕೋಳುಮಂಡ ರಫೀಕ್ ಸೇರಿದಂತೆ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.ಪಂದ್ಯಾವಳಿಯ ಸಮಾರೋಪ ಸಮಾರಂಭದ ಅಂಗವಾಗಿ ವಿಶೇಷ ಚೇತನರ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ತೃತೀಯ ಸ್ಥಾನ ಪಡೆದ ಸಿದ್ದಾಪುರ ಸಮೀಪದ ಅರೆಕಾಡುವಿನ ಹಸನ್ ಮತ್ತು ತಮ್ಮ ಸೇವಾ ಬದ್ಧತೆ ಮೂಲಕ ಪಟ್ಟಣದ ಜನ ಮೆಚ್ಚುಗೆಗೆ ಪಾತ್ರರಾಗಿರುವ ವಿರಾಜಪೇಟೆ ಪುರಸಭೆಯ ಪೌರಕಾರ್ಮಿಕ ಮಹಿಳೆ ಗೌರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಕೆ. ಡಿ. ಎಂ. ಎಸ್. ಸಿ. ಎ. ಪ್ರಧಾನ ಕಾರ್ಯದರ್ಶಿ ಎಂ ಎಂ. ಇಸ್ಮಾಯಿಲ್ ಸ್ವಾಗತಿಸಿದರು. ಪ್ರಮುಖರಾದ ಅಬ್ದುಲ್ ರಹಿಮಾನ್ (ಅಂದಾಯಿ) ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ಆಸಿಫ್ ಪಂದ್ಯಾವಳಿಯ ವೀಕ್ಷಕ ವಿವರಣೆ ನೀಡಿದರು.

Share this article