ಕೊಡಗು ಪೊಲೀಸ್‌ ಯಶಸ್ವಿ ಕಾರ್ಯಾಚರಣೆ: ಏಳು ಮಂದಿ ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್‌ಗಳ ಸೆರೆ

KannadaprabhaNewsNetwork |  
Published : Oct 03, 2024, 01:33 AM IST
ಜಿಲ್ಲಾ ಪೊಲೀಸ್‌  ವರಿಷ್ಠಾಧಿಕಾರಿ ಕೆ.ರಾಮರಾಜನ್  ಸುದ್ದಿಗೋಷ್ಠಿ | Kannada Prabha

ಸಾರಾಂಶ

ಥಾಯ್ಲೆಂಡ್‌ ದೇಶದಿಂದ ದುಬೈ ಮತ್ತು ಕೇರಳಕ್ಕೆ ತನ್ನ ಸಹಚಾರರೊಂದಿಗೆ ಹೈಡ್ರೋ ಗಾಂಜಾ ಸಾಗಿಸುತ್ತಿದ್ದ ಡ್ರಗ್ ಪೆಡ್ಲರ್‌ ಹಾಗೂ ಇತರ ಸಹಚರರ ಸಹಿತ ಏಳು ಮಂದಿಯನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ. ಬಂಧಿತರಿಂದ ಸುಮಾರು 3 ಕೋಟಿ ರು. ಬೆಲೆ ಬಾಳುವ 3 ಕೆ.ಜಿ. 31 ಗ್ರಾಂ ತೂಕದ ಹೈಡೋ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ ಸ್ವಿಫ್ಟ್‌ ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಥಾಯ್ಲೆಂಡ್‌ ದೇಶದಿಂದ ದುಬೈ ಮತ್ತು ಕೇರಳಕ್ಕೆ ತನ್ನ ಸಹಚಾರರೊಂದಿಗೆ ಹೈಡ್ರೋ ಗಾಂಜಾ ಸಾಗಿಸುತ್ತಿದ್ದ ಡ್ರಗ್ ಪೆಡ್ಲರ್‌ ಹಾಗೂ ಇತರ ಸಹಚರರ ಸಹಿತ ಏಳು ಮಂದಿಯನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಂಡಿಗೆರೆ ಹೆಗ್ಗಳ ಗ್ರಾಮದ ನಾಸಿರುದ್ದೀನ್ ಎಂ.ಯು. (26), ಎಡಪಾಲದ ಗ್ರಾಮದ ಯಾಹ್ಯಾ ಸಿ.ಎಚ್. (28), ಕುಂಜಿಲ ಗ್ರಾಮದ ಅಕನಾಸ್ (26), ಬೆಟೋಳಿ ಗ್ರಾಮದ ವಾಜೀದ್ (26) ಕೇರಳದ ಕಣ್ಣೂರಿನ ಕಲ್ಲಿಲ್‌ತಾಯ ಗ್ರಾಮದ ರಿಯಾಜ್ (44), ಆರ್ಜಿ ಗ್ರಾಮದ ನಿವಾಸಿ, ಬೆಂಗಳೂರಿನಲ್ಲಿ ವಾಸವಿದ್ದ ರವೂಫ್ (28) ಹಾಗೂ ಪ್ರಕರಣದ ಪ್ರಮುಖ ಆರೋಪಿ ಕೇರಳದ ಕಾಸರಗೋಡುನ ಮೆಹರೂಫ್ (37) ಬಂಧಿತ ಆರೋಪಿಗಳು.ಬಂಧಿತರಿಂದ ಸುಮಾರು 3 ಕೋಟಿ ರು. ಬೆಲೆ ಬಾಳುವ 3 ಕೆ.ಜಿ. 31 ಗ್ರಾಂ ತೂಕದ ಹೈಡೋ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ ಸ್ವಿಫ್ಟ್‌ ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದರು.

ಕೇರಳ ಮೂಲದ ಮಹಮ್ಮದ್ ಅನೂಫ್ ಥಾಯ್ಲೆಂಡ್‌ ದೇಶದ ಬ್ಯಾಂಕಾಕ್ ನಗರದಲ್ಲಿ ಕೆಫೆ ಇಟ್ಟುಕೊಂಡಿದ್ದ., ಇವನು ಕೇರಳದ ಕಾಸರಗೋಡಿನ ಮೆಹರೂಫ್ ಹಾಗೂ ವಿರಾಜಪೇಟೆ ಆರ್ಜಿ ಗ್ರಾಮದ ರವೂಫ್ ಜೊತೆ ತಂಡವನ್ನು ಕಟ್ಟಿಕೊಂಡು ಅಲ್ಲಿಂದ ಹೈಡೋಫೋನಿಕ್‌ ರೀತಿಯಲ್ಲಿ ಬೆಳೆದಿರುವ ಗಾಂಜಾ (ಹೈಡೋ ಗಾಂಜಾವನ್ನು) ವಿಮಾನದ ಮೂಲಕ ಭಾರತ ಮತ್ತು ದುಬೈಗೆ ಸಾಗಾಟ ಮಾಡಲು ಪ್ರಯತ್ನಿಸುತ್ತಿದ್ದ.

ಕಾಸರಗೋಡಿನ ಮೆಹರೂಫ್ ಮತ್ತು ಮಹಮ್ಮದ್ ಅನೂಪ್‌ ವಿರಾಜಪೇಟೆಯ ರವೂಫ್, ನಾಸೀರುದ್ದೀನ್, ವಾಜೀದ್‌, ನಾಪೋಕ್ಲುವಿನ ಯಾಹಿಯಾ, ಅಕನಾಸ್, ಅಜ್ಜಲ್, ಕೇರಳದ ರಿಯಾಜ್ ಇವರುಗಳನ್ನು ಒಳಗೊಂಡ ತಂಡ ರಚಿಸಿಕೊಂಡು ಅಂತಾರಾಷ್ಟ್ರೀಯ ಮಾದಕ ದ್ರವ್ಯ ಸಾಗಾಟ ಕಾರ್ಯದಲ್ಲಿ ತೊಡಗಿದ್ದರು.

ಬ್ಯಾಂಕಾಕ್ ನಿಂದ ಹೈಡೋ ಗಾಂಜಾವನ್ನು ಯಾಹ್ಯಾ ಎಂಬಾತ ಸೆ.23 ರಂದು ರಾತ್ರಿ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಂದಿರುತ್ತಾನೆ. ನಂತರ ನಾಸೀರುದ್ದೀನ್, ಅಕನಾಸ್, ಅಜ್ಜಲ್, ರಿಯಾಜ್ ಮತ್ತು ವಾಜೀದ್ ರವರು ಯಾಹ್ಯಾನೊಂದಿಗೆ ಸೇರಿ ಸ್ವಿಫ್ಟ್ ಕಾರಿನಲ್ಲಿ ಬೆಂಗಳೂರಿನ ವಿಮಾನ ನಿಲ್ದಾಣದಿಂದ ಯಾಹ್ಯಾನನ್ನು ಕರೆದುಕೊಂಡು ಕೊಡಗು ಜಿಲ್ಲೆಗೆ ಆಗಮಿಸಿ ಗೋಣಿಕೊಪ್ಪದಲ್ಲಿ ತಂಗಿದ್ದರು.

ಕೇರಳದ ಮೆಹರೂಫನ ಮುಂದಿನ ನಿರ್ದೇಶನಕ್ಕಾಗಿ ಈ ತಂಡ ಕಾಯುತ್ತಿದ್ದು, ಒಂದೇ ಸ್ಥಳದಲ್ಲಿ ಇದ್ದರೆ ಯಾರಿಗಾದರೂ ಅನುಮಾನ ಬರುತ್ತದೆ ಎಂದು ತಿಳಿದು ಸ್ಥಳದಿಂದ ಸ್ಥಳಕ್ಕೆ ಬದಲಾವಣೆ ಮಾಡುವ ಉದ್ದೇಶದಿಂದ ವಿರಾಜಪೇಟೆಯಿಂದ ಮಡಿಕೇರಿಗೆ ಹೊರಟಿದ್ದರು. ಈ ನಡುವೆ ಕೊಡಗು ಪೊಲೀಸ್‌ ಇಲಾಖೆಯ ಡಿ.ಸಿ.ಆ‌ರ್.ಬಿ ಘಟಕದ ಪೊಲೀಸ್ ನಿರೀಕ್ಷಕ ಮೇದಪ್ಪ ಐ.ಪಿ.ಗೆ ಬಂದಂತಹ ಖಚಿತ ಮಾಹಿತಿ ಮೇರೆಗೆ ಮಾಹಿತಿಯನ್ನು ಪೊಲೀಸ್ ಉಪಾಧೀಕ್ಷಕ ಮಹೇಶ್ ಕುಮಾರ್‌ಗೆ ತಿಳಿಸಲಾಯಿತು. ಮಡಿಕೇರಿ ನಗರ ಪೊಲೀಸ್‌ ಠಾಣಾ ಸರಹದ್ದಿನ ವಿರಾಜಪೇಟೆ ರಸ್ತೆಯಲ್ಲಿರುವ ರಮ್ಯ ಸರ್ವಿಸ್ ಸ್ಟೇಷನ್ ಬಳಿಯಲ್ಲಿ ಸೆ.28ರ ಬೆಳಗಿನ ಜಾವ 1 ಗಂಟೆಗೆ ದಾಳಿ ನಡೆಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಕೃತ್ಯಕ್ಕೆ ಸಹಕರಿಸಿದ ಇನ್ನೊಬ್ಬ ಆರೋಪಿ ಆರ್ಜಿ ಗ್ರಾಮದ ನಿವಾಸಿ, ಬೆಂಗಳೂರಿನಲ್ಲಿ ವಾಸವಿದ್ದ ರವೂಫ್ (28) ನನ್ನು ಸೆ.28 ರಂದು ಬೆಂಗಳೂರಿನ ಸಂಜಯನಗರ ಲೇಔಟ್ ನಿವಾಸದಲ್ಲಿ ನಾಪೋಕ್ಲು ಪೊಲೀಸ್‌ ಠಾಣೆಯ ಉಪನಿರೀಕ್ಷಕ ಮಂಜುನಾಥ್ ತಂಡ ವಶಕ್ಕೆ ಪಡೆದಿದೆ.

ಈ ಪ್ರಕರಣದ ಪ್ರಮುಖ ಆರೋಪಿ ಕೇರಳದ ಕಾಸರಗೋಡುನ ಮೆಹರೂಫ್ (37) ಸೆ.29 ರಂದು ರಾತ್ರಿ 10.30ಕ್ಕೆ ಥಾಯ್ಲೆಂಡ್‌ನ ಬ್ಯಾಂಕಾಕ್ ಗೆ ಪರಾರಿಯಾಗಲು ಯತ್ನಿಸುತ್ತಿರುವಾಗ ಕೇರಳದ ಎರ್ನಾಕುಲಂ ಜಿಲ್ಲೆಯ ಎಸ್.ಪಿ. ವೈಭವ್‌ ಸಕ್ಷೇನಾ ಮತ್ತು ಕೊಚ್ಚಿನ್ ಏರ್ ಪೋರ್ಟ್ ಇಮಿಗ್ರೇಶನ್ ಅಧಿಕಾರಿ ಕೃಷ್ಣರಾಜ್ ಸಹಕಾರದಿಂದ ಮಡಿಕೇರಿ ಗ್ರಾಮಾಂತರ ವೃತ್ತನಿರೀಕ್ಷಕ ಅನೂಪ್ ಮಾದಪ್ಪ ಹಾಗೂ ಸಿಬ್ಬಂದಿ ತಂಡ ಕೊಚ್ಚಿನ್ ಏ‌ರ್ ಪೋರ್ಟನಲ್ಲಿ ಬಂಧಿಸಿ ಕೊಡಗಿಗೆ ಕರೆ ತಂದಿದೆ.

ಮಡಿಕೇರಿ ಉಪವಿಭಾಗದ ಡಿವೈಎಸ್ಪಿ ಮಹೇಶ್ ಕುಮಾರ್ ಹಾಗೂ ಮಡಿಕೇರಿ ನಗರ ವೃತ್ತ ನಿರೀಕ್ಷಕ ರಾಜು ಪಿ.ಕೆ. ನೇತೃತ್ವದ ತಂಡ ಸತತ 72 ಗಂಟೆಗಳ ಕಾಲ ತನಿಖೆಯಲ್ಲಿ ತೊಡಗಿಸಿಕೊಂಡು ಪ್ರಕರಣವನ್ನು ಯಶಸ್ವಿಯಾಗಿ ಬೇಧಿಸಲಾಗಿದೆ. ಇದೊಂದು ವಿಶೇಷ ಪ್ರಕರಣವಾಗಿದ್ದು ಇದರ ತನಿಖೆಯನ್ನು ಮಡಿಕೇರಿ ನಗರ ವೃತ್ತ ನಿರೀಕ್ಷಕ ಪಿ.ಕೆ ರಾಜು ಕೈಗೊಂಡಿದ್ದರು.

...................................

ಇದೊಂದು ಅಪರೂಪ ಪ್ರಕರಣವಾಗಿದ್ದು, ಹೈಡೋ ಗಾಂಜಾ ಎಂಬುವುದು ಸಾಮಾನ್ಯ ಗಾಂಜಾಕ್ಕಿಂತ ಹೆಚ್ಚು ನಶೆಯನ್ನು ಕೊಡುವ ಮಾದಕ ದ್ರವ್ಯವಾಗಿದ್ದು, ದುಬಾರಿ ಬೆಲೆಯದ್ದಾಗಿರುತ್ತದೆ. ಹೈಡೋ ಗಾಂಜಾವನ್ನು ವಿಭಿನ್ನ ರೀತಿಯ ಕೃತಕ ಬೆಳಕನ್ನು ಉಪಯೋಗಿಸಿ ಹಾಗೂ ಹವಾ ನಿಯಂತ್ರಿತ ಕೊಠಡಿಯಲ್ಲಿ ನೀರಿನಿಂದ ಬೆಳೆಯಲಾಗುತ್ತದೆ.

-ಕೆ.ರಾಮರಾಜನ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕೊಡಗು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌