ಕೊಡಗು ವಿ.ವಿ. ಪ್ರಥಮ ಪದವಿ ಸೆಮಿಸ್ಟರ್ ಮೌಲ್ಯಮಾಪನಕ್ಕೆ ಚಾಲನೆ

KannadaprabhaNewsNetwork | Published : Feb 17, 2024 1:16 AM

ಸಾರಾಂಶ

ಕೊಡಗು ವಿ.ವಿ.ಯ ಪ್ರಥಮ ವರ್ಷದ ಸ್ನಾತಕ ವಿದ್ಯಾರ್ಥಿಗಳ ಪ್ರಥಮ ಸೆಮಿಸ್ಟರ್ ಪರೀಕ್ಷಾ ಪತ್ರಿಕೆಗಳ ಮೌಲ್ಯಮಾಪನಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು. ಮಡಿಕೇರಿಯ ಎಫ್‌ಎಂಕೆಎಂಸಿ ಕಾಲೇಜನ್ನು ಮೌಲ್ಯಮಾಪನ ಕೇಂದ್ರವನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದ್ದು ಕೊಡಗಿನ ವಿವಿಧ ಸ್ನಾತಕ ಪದವಿ ಕಾಲೇಜುಗಳ ವಿಷಯವಾರು ಸುಮಾರು 100 ಮಂದಿ ಮೌಲ್ಯಮಾಪಕರು ಪಾಲ್ಗೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ವಿಶ್ವವಿದ್ಯಾಲಯದ ಘಟಕ ಮತ್ತು ಸಂಯೋಜಿತ ಮಹಾವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಥಮ ವರ್ಷದ ಸ್ನಾತಕ ವಿದ್ಯಾರ್ಥಿಗಳ ಪ್ರಥಮ ಸೆಮಿಸ್ಟರ್ ಪರೀಕ್ಷಾ ಪತ್ರಿಕೆಗಳ ಮೌಲ್ಯಮಾಪನಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.

ಮಡಿಕೇರಿಯ ಎಫ್‌ಎಂಕೆಎಂಸಿ ಕಾಲೇಜನ್ನು ಮೌಲ್ಯಮಾಪನ ಕೇಂದ್ರವನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದ್ದು ಕೊಡಗಿನ ವಿವಿಧ ಸ್ನಾತಕ ಪದವಿ ಕಾಲೇಜುಗಳ ವಿಷಯವಾರು ಸುಮಾರು 100 ಮಂದಿ ಮೌಲ್ಯಮಾಪಕರು ಮೌಲ್ಯಮಾಪನ ಕಾರ್ಯದಲ್ಲಿ ಸಕ್ರಿಯವಾಗಿ ಮತ್ತು ಉತ್ಸಾಹದಿಂದ ಭಾಗಿಯಾಗಿದ್ದಾರೆ.ಇದೇ ಸಂದರ್ಭದಲ್ಲಿ ಸ್ನಾತಕ ಪದವಿ ಪರೀಕ್ಷಾ ಪತ್ರಿಕೆಗಳ ಮೌಲ್ಯಮಾಪಕಾರರನ್ನು ಉದ್ದೇಶಿಸಿ ಮಾತನಾಡಿದ ಕೊಡಗು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಅಶೋಕ ಸಂ‌ ಆಲೂರ, ನೂತನವಾಗಿ ಆರಂಭವಾದ ಕೊಡಗು ವಿಶ್ವವಿದ್ಯಾಲಯವು ಸಾಂಘಿಕ ಪ್ರಯತ್ನದ ಮೂಲಕ ಬಹು ಯಶಸ್ವಿಯಾಗಿ ಸ್ನಾತಕ ಪದವಿ ಪರೀಕ್ಷೆಗಳನ್ನು ನಡೆಸುತ್ತಿದೆ. ಈ ಚೊಚ್ಚಲ ಸ್ನಾತಕ ಪದವಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವದನ್ನು ಶ್ಲಾಘಿಸುತ್ತಾ, ನಮ್ಮ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ಶ್ರಮಿಸಲಿದ್ದೇವೆ ಎಂದು ತಿಳಿಸಿದರು.ಕೊಡಗು ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಆದ ಡಾ. ಸೀನಪ್ಪ ಮಾತನಾಡಿ, ಭವಿಷ್ಯದಲ್ಲಿ ನಮ್ಮ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದಂತಹ ವಿದ್ಯಾರ್ಥಿಗಳು ತಮ್ಮ ಉನ್ನತ ವ್ಯಾಸಂಗ ಮತ್ತು ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ತೊಡಕುಗಳು ಆಗಬಾರದು ಎಂಬ ಸದುದ್ದೇಶದಿಂದ ಮೌಲ್ಯಮಾಪನ ಪ್ರಕ್ರಿಯೆಗೆ ತ್ವರಿತ ಚಾಲನೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಪರೀಕ್ಷಾ ಸಂಯೋಜಕರಾದ ಪ್ರೊ. ರವಿಶಂಕರ್ ಅವರನ್ನೊಳಗೊಂಡ ತಂಡವು ಬಹು ಅಚ್ಚುಕಟ್ಟಾಗಿ ಮೌಲ್ಯಮಾಪನ ಕೇಂದ್ರವನ್ನು ವ್ಯವಸ್ಥಿತವಾಗಿ ಸಿದ್ದಪಡಿಸಿರುವುದನ್ನು ಅಭಿನಂದಿಸಿದರು.ಕೊಡಗು ವಿಶ್ವವಿದ್ಯಾಲಯದ ಸ್ನಾತಕ ಪದವಿ ಪರೀಕ್ಷೆಗಳ ಸಂಯೋಜಕ ಪ್ರೊ. ರವಿಶಂಕರ್, ಪರೀಕ್ಷಾ ಮೇಲ್ವಿಚಾರಕ ಪ್ರೊ‌. ರಾಘವ್, ಉಪ ಮೇಲ್ವಿಚಾರಕ ಡಾ. ಶೈಲಶ್ರೀ ಮೌಲ್ಯಮಾಪಕರು, ಆಡಳಿತ ಸಿಬ್ಬಂದಿ ಇದ್ದರು.

Share this article