ಕನ್ನಡಪ್ರಭ ವಾರ್ತೆ ಮಡಿಕೇರಿ
2023-2024ನೇ ಶೈಕ್ಷಣಿಕ ಸಾಲಿನ ಪ್ರಥಮ ಸೆಮಿಸ್ಟರ್‌ನ ಪದವಿ ಪರೀಕ್ಷೆಗಳ ಫಲಿತಾಂಶ ಪ್ರಕಟಿಸಿದ ರಾಜ್ಯದ ಮೊದಲ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ನಮ್ಮ ಕೊಡಗು ವಿಶ್ವವಿದ್ಯಾಲಯವು ಭಾಜನವಾಗಿದೆ ಎಂದು ವಿ.ವಿ. ಮೂಲಗಳು ತಿಳಿಸಿವೆ.ಸ್ನಾತಕ ಪದವಿ ಪರೀಕ್ಷಾ ಫಲಿತಾಂಶ ಕುರಿತು ಮಾತನಾಡಿದ ಕೊಡಗು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಅಶೋಕ ಸಂ. ಆಲೂರ ಅವರು, ಕರ್ನಾಟಕ ಸರ್ಕಾರವು 2022-23ನೇ ಸಾಲಿನಲ್ಲಿ ಕೊಡಗಿನಲ್ಲಿ ನೂತನವಾಗಿ ಕೊಡಗು ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಿ 2023ರ ಏಪ್ರಿಲ್ ನಲ್ಲಿ ಅದನ್ನು ಅಧಿಕೃತವಾಗಿ ಉದ್ಘಾಟನೆ ಮಾಡಿತ್ತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಥ್ ಅವರು ಕೊಡಗು ವಿಶ್ವವಿದ್ಯಾಲಯದ ವೆಬ್‌ಸೈಟ್ kuk.karnataka.gov.in ಅನ್ನು 2023 ಮೇ 5 ರಂದು ರಾಜಭವನದಲ್ಲಿ ಅನಾವರಣಗೊಳಿಸಿದ್ದರು. ಕೊಡಗು ವಿಶ್ವವಿದ್ಯಾಲಯಕ್ಕೆ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (UGC) ತನ್ನ ಅಧಿನಿಯಮ 1956 ರ ಪ್ರಕರಣ 2 (ಎಫ್) ಅಡಿಯಲ್ಲಿ 2023 ರ ಜು.25 ರಂದು ಮಾನ್ಯತೆಯನ್ನು ನೀಡಿ ಪ್ರಕಟಣೆ ಹೊರಡಿಸಿತ್ತು. ಯುಜಿಸಿ ಮಾನ್ಯತೆ ಸಿಕ್ಕಿರುವುದರಿಂದ ಯುಜಿಸಿ ಅಡಿಯಲ್ಲಿ ಬರುವಂತಹ ವಿವಿಧ ಪದವಿಗಳನ್ನು ನೀಡಲು ಕೊಡಗು ವಿಶ್ವವಿದ್ಯಾಲಯವು ಅಧಿಕೃತ ಮಾನ್ಯತೆ ಪಡೆದುಕೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.ಕೊಡಗು ವಿಶ್ವವಿದ್ಯಾಲಯವು ಘಟಕ ಮತ್ತು ಸಂಯೋಜಿತ ಮಹಾವಿದ್ಯಾಲಯಗಳಲ್ಲಿ 2023-24ನೇ ಶೈಕ್ಷಣಿಕ ಸಾಲಿನಲ್ಲಿ ಬಿಎ, ಬಿಕಾಂ, ಬಿಬಿಎ, ಬಿಸಿಎ ಮತ್ತು ಬಿಎಸ್ಸಿ ಪ್ರವೇಶಾತಿಗೆ ಅವಕಾಶ ಕಲ್ಪಿಸಿಕೊಟ್ಟಿತ್ತು. ಪ್ರಥಮ ವರ್ಷದ ಸ್ನಾತಕ ವಿದ್ಯಾರ್ಥಿಗಳ ಪ್ರಥಮ ಸೆಮಿಸ್ಟರ್ ಪರೀಕ್ಷೆಗಳಲ್ಲಿ 1025 ಪುರುಷ ವಿದ್ಯಾರ್ಥಿಗಳು ಮತ್ತು 999 ಮಹಿಳಾ ವಿದ್ಯಾರ್ಥಿಗಳು ಸೇರಿ ಒಟ್ಟು 2024 ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಬರೆದಿದ್ದಾರೆ ಎಂದು ತಿಳಿಸಿದ್ದಾರೆ.
ತ್ವರಿತ ನಿರ್ವಹಣೆ:ಕೊಡಗು ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಡಾ. ಸೀನಪ್ಪ ಮಾತನಾಡಿ, ನಮ್ಮ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದಂತಹ ವಿದ್ಯಾರ್ಥಿಗಳು ಭವಿಷ್ಯದಲ್ಲಿ ತಮ್ಮ ಉನ್ನತ ವ್ಯಾಸಂಗ ಮತ್ತು ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ತೊಡಕುಗಳು ಆಗಬಾರದು ಎಂಬ ಸದುದ್ದೇಶದಿಂದ ಮೌಲ್ಯಮಾಪನ ಪ್ರಕ್ರಿಯೆಗೆ ತ್ವರಿತ ಚಾಲನೆ ನೀಡಲಾಗಿತ್ತು. ಪರೀಕ್ಷೆಗಳು ಮುಗಿದ 20 ದಿನಗಳೊಳಗೆ ಫಲಿತಾಂಶ ಪ್ರಕಟಿಸಬೇಕು ಎಂಬ ಯುಜಿಸಿಯ ನಿರ್ದೇಶವಿದ್ದು ಅದರಂತೆಯೇ ನಮ್ಮ ಕೊಡಗು ವಿಶ್ವವಿದ್ಯಾಲಯವು ಪರೀಕ್ಷೆಗಳು ನಡೆದ ಕೇವಲ ಒಂದು ದಿನದೊಳಗೆ ಮೊದಲ ಹಂತದ ಫಲಿತಾಂಶ ಪ್ರಕಟಿಸುವಲ್ಲಿ ಸಫಲವಾಗಿದೆ ಎಂದು ತಿಳಿಸಿದರು. ಕೊಡಗು ವಿಶ್ವವಿದ್ಯಾಲಯದ ಸ್ನಾತಕ ಪದವಿ ಪರೀಕ್ಷೆಗಳ ಸಂಯೋಜಕ ಪ್ರೊ. ರವಿಶಂಕರ್, ಪರೀಕ್ಷಾ ಮೇಲ್ವಿಚಾರಕ ಪ್ರೊ. ರಾಘವ್ ಹಾಗೂ ಉಪ ಮೇಲ್ವಿಚಾರಕರಾದ ಡಾ. ಶೈಲಶ್ರೀ ಹಾಗೂ ಕೊಡಗು ವಿಶ್ವವಿದ್ಯಾಲಯದ ಯುಯುಸಿಎಂಎಸ್ ತಂಡದವರು ಹಾಜರಿದ್ದರು.