ಕೊಡವ ಕ್ರಿಕೆಟ್ ಲೆದರ್‌ಬಾಲ್ ಪ್ರೀಮಿಯರ್ ಲೀಗ್ ಸೀಸನ್-2 ಸಂಪನ್ನ

KannadaprabhaNewsNetwork | Published : Apr 15, 2025 12:54 AM

ಸಾರಾಂಶ

ಯುವ ಸಮೂಹ ಹಾದಿ ತಪ್ಪುವುದನ್ನು ತಪ್ಪಿಸಲು ಮತ್ತು ಆರೋಗ್ಯಕರ ಜೀವನ ನಡೆಸಲು ಕ್ರೀಡೆ ಸಹಕಾರಿಯಾಗಿದೆ ಎಂದು ಶಾಸಕರು ಹೇಳಿದರು.

ಕನ್ನಡಪ್ರಭ ವಾರ್ತೆ ಪಾಲಿಬೆಟ್ಟ

ಯುವ ಸಮೂಹ ಹಾದಿ ತಪ್ಪುವುದನ್ನು ತಪ್ಪಿಸಲು ಮತ್ತು ಆರೋಗ್ಯಕರ ಜೀವನ ನಡೆಸಲು ಕ್ರೀಡೆ ಸಹಕಾರಿಯಾಗಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಅಭಿಪ್ರಾಯಪಟ್ಟಿದ್ದಾರೆ.

ಕೂರ್ಗ್ ಕ್ರಿಕೆಟ್ ಫೌಂಡೇಶನ್ ವತಿಯಿಂದ ಪಾಲಿಬೆಟ್ಟದಲ್ಲಿ ಆಯೋಜಿಸಿರುವ ಕೊಡವ ಕ್ರಿಕೆಟ್ ಲೆದರ್‌ಬಾಲ್ ಪ್ರೀಮಿಯರ್ ಲೀಗ್ ಸೀಸನ್-2 ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯ ಹಾಗೂ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡಾಕೂಟಗಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶವನ್ನು ಕಲ್ಪಿಸಿಕೊಟ್ಟಿರುವುದಲ್ಲದೆ ಉತ್ತಮ ಬದುಕು ಕಟ್ಟಿಕೊಟ್ಟಿವೆ ಎಂದರು. ಕ್ರೀಡೆಗಳು ಯುವ ಸಮೂಹವನ್ನು ಉತ್ತಮ ಮಾರ್ಗದಲ್ಲಿ ಕೊಂಡೊಯ್ಯುತ್ತವೆ ಮತ್ತು ಆರೋಗ್ಯವನ್ನು ಕಾಪಾಡುತ್ತದೆ. ಹೆಚ್ಚು ಹೆಚ್ಚು ಕ್ರೀಡಾಕೂಟಗಳು ನಡೆಯುವುದರಿಂದ ಕೊಡಗಿನ ಆಟಗಾರರಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಸಹಕಾರಿಯಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕೂರ್ಗ್ ಕ್ರಿಕೆಟ್ ಫೌಂಡೇಶನ್ ನ ಅಧ್ಯಕ್ಷ ಪೊರುಕೊಂಡ ಸುನಿಲ್ ಅವರು, ಕೊಡಗಿನಲ್ಲಿ ಲೆದರ್ ಬಾಲ್ ಕ್ರಿಕೆಟ್ ಕ್ರೀಡೆಯನ್ನು ಉತ್ತೇಜಿಸುವ ಮತ್ತು ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಲೆದರ್‌ಬಾಲ್ ಪ್ರೀಮಿಯರ್ ಲೀಗ್ ನ್ನು ನಡೆಸಿಕೊಂಡು ಬರಲಾಗುತ್ತಿದೆ. ಲೆದರ್ ಬಾಲ್ ಕ್ರಿಕೆಟ್ ಗೆ ಜಿಲ್ಲೆಯ ಯುವ ಸಮೂಹವನ್ನು ಸೆಳೆಯುವುದು ನಮ್ಮ ಕನಸಾಗಿತ್ತು, ಅದು ನನಸಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಮಾಜಿ ಹಾಕಿ ಒಲಿಂಪಿಯನ್ ಲೆಫ್ಟಿನೆಂಟ್ ಕರ್ನಲ್ ಬಾಳೆಯಡ ಸುಬ್ರಮಣಿ ಮಾತನಾಡಿ ದಾನಿಗಳ ಸಹಕಾರವಿದ್ದರೆ ಮಾತ್ರ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ಆಯೋಜಿಸಲು ಸಾಧ್ಯ, ಇದರೊಂದಿಗೆ ಯುವ ಸಮೂಹಕ್ಕೆ ಪ್ರೋತ್ಸಾಹದ ಅಗತ್ಯವೂ ಇದೆ ಎಂದರು.

ರಾಜ್ಯ ಸರ್ಕಾರದ ಮುಖ್ಯ ವಿದ್ಯುತ್ ಪರಿವೀಕ್ಷಕ ತೀತಿರ ರೋಶನ್ ಅಪ್ಪಚ್ಚು ಅವರು ಮಾತನಾಡಿ ಕೊಡಗಿನಲ್ಲಿ ಕ್ರೀಡಾ ಸುಗ್ಗಿಯೇ ನಡೆಯುತ್ತಿದೆ. ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಅಗತ್ಯ ಪ್ರೋತ್ಸಾಹ ಮತ್ತು ಸಹಕಾರ ದೊರೆಯುತ್ತಿದೆ ಎಂದು ಹೇಳಿದರು.

ರಿಪಬ್ಲಿಕ್ ಟಿವಿ ಮತ್ತು ಆರ್ ಕನ್ನಡದ ಅಧ್ಯಕ್ಷ ಹಾಗೂ ಕೂರ್ಗ್ ಕ್ರಿಕೆಟ್ ಫೌಂಡೇಶನ್ ನ ಮುಖ್ಯ ಮಾರ್ಗದರ್ಶಕ ಚೇರಂಡ ಕಿಶನ್ ಮಾದಪ್ಪ ಮಾತನಾಡಿ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಆಯೋಜನೆ ಸಾಧಾರಣ ಕಾರ್ಯವಲ್ಲ, ಇದರ ಹಿಂದೆ ಸಮಾನ ಮನಸ್ಕರ ಕನಸು ಮತ್ತು ಶ್ರಮವಿದೆ. ಕೊಡಗಿನ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಕೆಲಸವನ್ನು ಕೂರ್ಗ್ ಕ್ರಿಕೆಟ್ ಫೌಂಡೇಶನ್ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮತ್ತಷ್ಟು ಕ್ರೀಡಾಕೂಟಗಳು ಆಯೋಜನೆಗೊಂಡು ಕೊಡಗಿನ ಕ್ರೀಡಾಪ್ರತಿಭೆಗಳಿಗೆ ಅವಕಾಶ ಲಭಿಸುವ ವಿಶ್ವಾಸ ವ್ಯಕ್ತಪಡಿಸಿದರು.

ಕ್ಯೂರೆಮಾರ್ವೆಲ್ ನಿರ್ದೇಶಕಿ ಪಾಲಚಂಡ ಪೂಜಿತಾ ಉತ್ತಪ್ಪ ಅವರು ಮಾತನಾಡಿ ಶುಭ ಹಾರೈಸಿದರು.

ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡಂಡ ಬೋಪಣ್ಣ, ಉದ್ಯಮಿ ಕುಪ್ಪಂಡ ಚಿಣ್ಣಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಕೊಡಗು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಗುಮ್ಮಟ್ಟೀರ ಕಿಲನ್ ಗಣಪತಿ, ಕೂರ್ಗ್ ಕ್ರಿಕೆಟ್ ಫೌಂಡೇಶನ್ ಉಪಾಧ್ಯಕ್ಷ ಪಾಲಚಂಡ ಜಗನ್ ಉತ್ತಪ್ಪ, ಪಂದ್ಯಾವಳಿಯ ಸಂಚಾಲಕ ಚಂಡೀರ ರಚನ್ ಚಿಣ್ಣಪ್ಪ, ವ್ಯವಸ್ಥಾಪಕ ಚೆರುಮಂದಂಡ ಸೋಮಣ್ಣ, ನಿರ್ದೇಶಕರಾದ ಮಡ್ಲಂಡ ದರ್ಶನ್ ಪೆಮ್ಮಯ್ಯ, ಕೀತಿಯಂಡ ಗಣಪತಿ, ಅಣ್ಣಳಮಾಡ ರಾಯ್ ಚಿಣ್ಣಪ್ಪ, ಕುಲ್ಲೇಟಿರ ಶಾಂತ ಕಾಳಪ್ಪ, ಬಲ್ಲಂಡ ರೇಣ ಮತ್ತಿತರರು ಉಪಸ್ಥಿತರಿದ್ದರು.

ಕೊಡವ ಕ್ರಿಕೆಟ್ ಲೆದರ್ ಬಾಲ್ ಪ್ರೀಮಿಯರ್ ಲೀಗ್ ಸೀಸನ್ - 2 ರ ವೆಸ್ಟರ್ನ್ ಘಾಟ್ ವಾರಿಯರ್ಸ್ ಮತ್ತು ಟೀಮ್ ಲಿವರೇಜ್ ತಂಡಗಳ ನಡುವೆ ನಡೆದ ಅಂತಿಮ ಪಂದ್ಯವನ್ನು ಶಾಸಕ ಎ.ಎಸ್.ಪೊನ್ನಣ್ಣ ಅವರು ಬ್ಯಾಟಿಂಗ್ ಹಾಗೂ ಬೌಲಿಂಗ್ ಮಾಡುವ ಮೂಲಕ ಉದ್ಘಾಟಿಸಿದರು.

Share this article