ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಪವಿತ್ರ ರಂಜಾನ್ ಮಾಸಾಚರಣೆಯ ಗೌರವಾರ್ಥ ವಿರಾಜಪೇಟೆಯಲ್ಲಿ ಕೆ. ಎಂ. ಎ. ಇಫ್ತಾರ್ ಆತ್ಮೀಯ ಕೂಟ-2024 ಆಯೋಜಿಸಲಾಯಿತು. ವಿರಾಜಪೇಟೆಯ ಗೌರಿಕೆರೆ ಸಮೀಪದಲ್ಲಿರುವ ಮದರಸಾ ಸಭಾಂಗಣದಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ಜೀವ ಕಾರುಣ್ಯ ಕ್ಷೇತ್ರದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.ಇದಕ್ಕೂ ಮೊದಲು ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷ ದುದ್ದಿಯಂಡ ಎಚ್. ಸೂಫಿ ಹಾಜಿ, ಸಮಕಾಲೀನ ಯುಗದಲ್ಲಿ ನೈತಿಕತೆ ಕುಸಿಯುತ್ತಿರುವ ಈ ಸಂದರ್ಭದಲ್ಲಿ ಯುವಕರು ಆಧ್ಯಾತ್ಮಿಕತೆಯೊಂದಿಗೆ ಮರುಸಂಪರ್ಕಿಸುವುದು ಮತ್ತು ಉತ್ತಮ ಸಾಮಾಜಿಕ ಬೆಳವಣಿಗೆಯ ಹಾದಿಯತ್ತ ತಮ್ಮನ್ನು ಮರುಹೊಂದಿಸುವುದು ಅತ್ಯಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಇಸ್ಲಾಂ ಧರ್ಮದ 4ನೇ ಕಡ್ಡಾಯ ಕರ್ಮವಾಗಿರುವ ಪವಿತ್ರ ರಂಜಾನ್ ತಿಂಗಳ ವ್ರತಾಚಾರಣೆ ತೀರಾ ಮಹತ್ವವಾದದ್ದು ಎಂದರು.ಎಲ್ಲಾ ವಿಧದ ಮಾನವೀಯ ದೌರ್ಬಲ್ಯಗಳಿಂದ ಮನುಷ್ಯನನ್ನು ಮುಕ್ತಗೊಳಿಸಿ ದೇಹ ಮತ್ತು ಆತ್ಮವನ್ನು ಪವಿತ್ರಗೊಳಿಸುವುದೇ ಒಂದು ತಿಂಗಳ ಪೂರ್ಣ ವ್ರತಾಚರಣೆಯ ಉದ್ದೇಶವಾಗಿದೆ. ರಂಜಾನ್ ತಿಂಗಳ ಚೈತನ್ಯವು ಎಲ್ಲಾ ಇಂದ್ರಿಯನಿಗ್ರಹದ ಸಾಧನವಾಗಿ ಕೆಲಸ ಮಾಡುತ್ತದೆ ಎಂದು ತಿಳಿಸಿದರು.
ರಂಜಾನ್ ತಿಂಗಳಿನಲ್ಲಿ ಎಲ್ಲ ಬಯಕೆಗಳ ಮೇಲೆ ನಿಯಂತ್ರಣ ಹೇರಿಕೊಂಡು ಸಮಾಜದಲ್ಲಿ ನಾಗರಿಕನಾಗಿ, ಆರೋಪಗಳಿಂದ ಮುಕ್ತನಾಗಿ, ಅಪರಾಧಗಳಿಂದ ದೂರವಿದ್ದು ಇತರರಿಗೆ ಮಾದರಿಯಾಗುವಂತೆ ಜೀವನ ತನ್ನದಾಗಿಸಿಕೊಳ್ಳುವ ಹಲವಾರು ಸಾಮಾಜಿಕ, ನೈತಿಕ ಮೌಲ್ಯಗಳನ್ನು ಕಲಿಸಿಕೊಡುವ ವಾರ್ಷಿಕ ತರಬೇತಿಯೂ ಹೌದು ಎಂದು ಅಭಿಪ್ರಾಯಪಟ್ಟರು.ಕೊಡವ ಮುಸ್ಲಿಂ ಅಸೋಸಿಯೇಷನ್ ಹಿರಿಯ ಉಪಾಧ್ಯಕ್ಷ ಮೂರ್ನಾಡಿನ ಹಿರಿಯ ವೈದ್ಯ ಡಾ. ಜೋಯಿಪೆರ ಎ. ಕುಂಜ್ಹಬ್ದುಲ್ಲಾ ಮಾತನಾಡಿ, ಇಸ್ಲಾಂ 14 ಶತಮಾನಗಳ ಹಿಂದೆಯೇ ವೈಜ್ಞಾನಿಕತೆಗೆ ಹೆಚ್ಚು ಒತ್ತು ನೀಡಿದೆ. ವ್ರತಾಚರಣೆಯಿಂದ ಮನುಷ್ಯನ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ ಎಂಬುದನ್ನು ಹಲವು ವೈಜ್ಞಾನಿಕ ಸಂಶೋಧನೆಗಳು ಸಾಬೀತುಪಡಿಸಿದೆ ಎಂದರು.
ಉಪವಾಸವು ಹೃದಯ ಸ್ತಂಭನ, ಪಾರ್ಶ್ವವಾಯು, ಮಧುಮೇಹ ಖಿನ್ನತೆಯಂತಹ ಗಂಭೀರ ಕಾಯಿಲೆಗಳ ಸಂಭವವನ್ನು ಕಡಿಮೆ ಮಾಡುತ್ತದೆ. ಉಪವಾಸವು ದೇಹದಲ್ಲಿ ಮೆಗ್ನೀಸಿಯಮ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಹೃದಯಾಘಾತವನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ವಿವರಿಸಿದರು.ಉಪವಾಸದಿಂದ ಕಾಲುಗಳಲ್ಲಿನ ಸ್ನಾಯು ಸೆಳೆತವನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಬಹುದು. ಅಸ್ತಮಾ, ನರರೋಗ, ಮಹಿಳೆಯರಲ್ಲಿ ಗರ್ಭಾಶಯದ ರಕ್ತಸ್ರಾವವನ್ನು ಇದು ಸುಧಾರಿಸುತ್ತದೆ. ರಂಜಾನ್ ಮಾಸಾಚರಣೆಯಲ್ಲಿ ಹಸಿವು ಮತ್ತು ಬಾಯಾರಿಕೆಯ ಮೂಲಕ ಅನೇಕ ಪ್ರಯೋಜನೆಗಳನ್ನು ಪಡೆದುಕೊಳ್ಳಬಹುದು. 30 ದಿನಗಳ ಕಾಲ ಉಪವಾಸ ಮಾಡುವುದರಿಂದ ದೇಹದಲ್ಲಿ ಯಾವುದೇ ಪರಿಣಾಮವಾಗುವುದಿಲ್ಲ. ಜೊತೆಗೆ ಇದರಿಂದ ಅನೇಕ ಕಾಯಿಲೆಗಳು ಗುಣಮುಖವಾಗುತ್ತದೆ ಎಂದು ಹಲವಾರು ವೈದ್ಯಕೀಯ ಅಧ್ಯಯನಗಳಿಂದ ತಿಳಿದು ಬಂದಿದೆ ಎಂದು ವಿವರಿಸಿದರು.
ವಿರಾಜಪೇಟೆಯ ಶಾಫಿ ಜುಮಾ ಮಸೀದಿಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಅಬ್ದುಲ್ ರಶೀದ್, ಕೆ. ಎಂ. ಎ. ಉಪಾಧ್ಯಕ್ಷರಾದ ಅಕ್ಕಳತಂಡ ಎಸ್. ಮೊಯ್ದು, ಸಂಸ್ಥೆಯ ಮಾಜಿ ನಿರ್ದೇಶಕರು ಮತ್ತು ನಿವೃತ್ತ ಉಪ ತಹಸೀಲ್ದಾರರಾದ ಚಿಮ್ಮಿಚ್ಚಿರ ಎ. ಅಬ್ದುಲ್ಹಾ ಹಾಜಿ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಗೆ ವಿರಾಜಪೇಟೆಯ ಶಾಫಿ ಜುಮ್ಮಾ ಮಸೀದಿಯ ಖತೀಬರಾದ ರವೂಫ್ ಹುದವಿ ನೇತೃತ್ವ ನೀಡಿದರು.ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಎಂ.ಎಂ. ಇಸ್ಮಾಯಿಲ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಫೀಕ್ ತೂಚಮಕೇರಿ ಕಾರ್ಯಕ್ರಮ ನಿರ್ವಹಿಸಿದರು. ಜಂಟಿ ಕಾರ್ಯದರ್ಶಿ ಮುಸ್ತಫ ವಂದಿಸಿದರು. ನಂತರ ಸಂಜೆ ನಡೆದ ಇಫ್ತಾರ್ ಸಂಗಮದಲ್ಲಿ ಕೆ. ಎಂ. ಎ. ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.