ಕೊಡವರಿಗೆ ಸಾಂವಿಧಾನಿಕ ರಕ್ಷಣೆ ನೀಡುವ ಅಗತ್ಯವಿದೆ: ವಿಕ್ರಮ್ ಹೆಗ್ಡೆ ಪ್ರತಿಪಾದನೆ

KannadaprabhaNewsNetwork |  
Published : Jun 27, 2026, 01:00 AM IST
ಚಿತ್ರ : 26ಎಂಡಿಕೆ1 : ಸಿಎನ್‌ಸಿ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಿತು.  | Kannada Prabha

ಸಾರಾಂಶ

ಕೊಡವ ನ್ಯಾಷನಲ್ ಕೌನ್ಸಿಲ್ ಆಶ್ರಯದಲ್ಲಿ ಮಡಿಕೇರಿಯ ಹೊರ ವಲಯದ ಕ್ಯಾಪಿಟಲ್ ವಿಲೇಜ್ ನಲ್ಲಿ ಕೊಡವರಿಗೆ ವಿಶೇಷ ಸ್ಥಾನಮಾನ, ಸಾಂವಿಧಾನಿಕ ಮಾರ್ಗಗಳು ಮತ್ತು ಅಂತಾರಾಷ್ಟ್ರೀಯ ಕಾನೂನು ವಿಷಯದ ಕುರಿತು ಶುಕ್ರವಾರ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಮಡಿಕೇರಿ: ಭಾರತದ ಬಹುತ್ವವನ್ನು ಕಾಪಾಡಿಕೊಳ್ಳಲು ಕೊಡವರ ವಿಶಿಷ್ಟ ಗುರುತನ್ನು ರಕ್ಷಿಸುವುದು ಅತ್ಯಗತ್ಯ. ಒಕ್ಕೂಟ ವ್ಯವಸ್ಥೆಯಲ್ಲಿ ಕೊಡವರಿಗೆ ಸಾಂವಿಧಾನಿಕ ರಕ್ಷಣೆಯನ್ನು ನೀಡುವ ಅಗತ್ಯವಿದೆ. ಇದು ಭಾರತೀಯ ಸಂವಿಧಾನದ ಚೌಕಟ್ಟಿನೊಳಗೆ ಒಂದು ಕಾನೂನುಬದ್ಧ ಬೇಡಿಕೆಯಾಗಿದೆ ಎಂದು ಸುಪ್ರೀಂ ಕೋರ್ಟ್ ವಕೀಲ ವಿಕ್ರಮ್ ಹೆಗ್ಡೆ ಅವರು ಪ್ರತಿಪಾದಿಸಿದ್ದಾರೆ.ಕೊಡವ ನ್ಯಾಷನಲ್ ಕೌನ್ಸಿಲ್ ಆಶ್ರಯದಲ್ಲಿ ಮಡಿಕೇರಿಯ ಹೊರ ವಲಯದ ಕ್ಯಾಪಿಟಲ್ ವಿಲೇಜ್ ನಲ್ಲಿ ಕೊಡವರಿಗೆ ವಿಶೇಷ ಸ್ಥಾನಮಾನ, ಸಾಂವಿಧಾನಿಕ ಮಾರ್ಗಗಳು ಮತ್ತು ಅಂತಾರಾಷ್ಟ್ರೀಯ ಕಾನೂನು ವಿಷಯದ ಕುರಿತು ಶುಕ್ರವಾರ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಕೊಡವ ಧಾರ್ಮಿಕ ಆಚರಣೆ, ಕೋವಿ-ತೋಕ್ ವಿಧಿ 25 ಮತ್ತು 26ರ ಅಡಿಯಲ್ಲಿ ಅತ್ಯಗತ್ಯ ಧಾರ್ಮಿಕ ಆಚರಣೆ ಕುರಿತು ವಿಷಯ ಮಂಡಿಸಿದ ವಿಕ್ರಮ್ ಹೆಗ್ಡೆ ಅವರು ಕೊಡಗನ್ನು ವ್ಯವಸ್ಥಿತವಾಗಿ ದೊಡ್ಡ ಕ್ಷೇತ್ರಗಳೊಂದಿಗೆ ವಿಲೀನಗೊಳಿಸಲಾಗಿದೆ. ಮುಂಬರುವ ಕ್ಷೇತ್ರ ಪುನರ್ವಿಂಗಡಣೆಯ ಸಂದರ್ಭ ಕೊಡಗಿಗೆ ಪ್ರತ್ಯೇಕ ಲೋಕಸಭಾ ಸ್ಥಾನವನ್ನು ಕಲ್ಪಿಸುವುದಕ್ಕೆ ಪೂರಕವಾಗಿ ಚುನಾವಣಾ ಆಯೋಗಕ್ಕೆ ದತ್ತಾಂಶ ಆಧಾರಿತ, ವಸ್ತುನಿಷ್ಠ ವಾದಗಳನ್ನು ಮಂಡಿಸಬೇಕಾಗುತ್ತದೆ ಎಂದರು. ಹಿಂದೆ ತನ್ನದೇ ಆದ 24 ಸದಸ್ಯರ ವಿಧಾನಸಭೆಯನ್ನು ಹೊಂದಿದ್ದ ಸ್ವತಂತ್ರ ಪಾರ್ಟ್-ಸಿ ರಾಜ್ಯವಾಗಿದ್ದ ಕೊಡಗನ್ನು ದೊಡ್ಡ ಕ್ಷೇತ್ರಗಳಲ್ಲಿ ವಿಲೀನಗೊಳಿಸಲಾಗಿದೆ. ಪ್ರಸ್ತುತ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ, ಕೊಡಗಿನ ಮತದಾರರಿಗಿಂತ ಮೈಸೂರು ಮತದಾರರು 3:1 ರ ಅನುಪಾತದಲ್ಲಿ ಹೆಚ್ಚಾಗಿದ್ದಾರೆ, ಇದು ಸ್ವತಂತ್ರ ರಾಜಕೀಯ ಪ್ರಾತಿನಿಧ್ಯವನ್ನು ಕೊಡಗಿಗೆ ಅಸಾಧ್ಯವಾಗಿಸಿದೆ ಎಂದು ಅಭಿಪ್ರಾಯಪಟ್ಟರು.ಕೊಡಗಿಗೆ ಪ್ರತ್ಯೇಕ ಲೋಕಸಭಾ ಸ್ಥಾನವನ್ನು ಕಲ್ಪಿಸುವುದಕ್ಕೆ ಸಂಬಂಧಿಸಿದಂತಗೆ ಮೈಸೂರಿನ ಬಯಲು ಸೀಮೆ ಮತ್ತು ಕೊಡಗಿನ ಸೂಕ್ಷ್ಮ, ಪರ್ವತಮಯ ಪಶ್ಚಿಮಘಟ್ಟಗಳ ಭೂಪ್ರದೇಶದ ಪ್ರತ್ಯೇಕವಾದ ಭೂ ಪರಿಸರದ ಚಿತ್ರಣದ ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ಇರೊಂದಿಗೆ ಇಲ್ಲಿನ ವಿಶಿಷ್ಟವಾದ ಜಮ್ಮಾ, ಸಾಗು ಮತ್ತು ಬಾಣೆ ಭೂ ಹಿಡುವಳಿಗಳು ಮತ್ತು ಜಿಲ್ಲೆಯ ತೋಟಗಾರಿಕೆ ಆಧಾರಿತ ಆರ್ಥಿಕತೆಯನ್ನು ದಾಖಲಿಸಬೇಕಾಗುತ್ತದೆ. ಇವೆಲ್ಲವುಗಳೊಂದಿಗೆ ಎಲ್ಲಾ ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಗಳಲ್ಲಿ ಅಧಿಕೃತ ನಿರ್ಣಯಗಳನ್ನು ಅಂಗೀಕರಿಸುವಂತಾಗಬೇಕು ಎಂದು ವಿಕ್ರಮ್ ಹೆಗ್ಡೆ ಸಲಹೆ ನೀಡಿದರು.

ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಹಿಮಾ ಲಾರೆನ್ಸ್ ವಿಕ್ರಮ್ ಹೆಗ್ಡೆ ಅಂತರರಾಷ್ಟ್ರೀಯ ವಿಶ್ವಸಂಸ್ಥೆಯ ಕಾನೂನಿನಡಿ ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ, ಸ್ವಯಂ-ಆಡಳಿತ ಮತ್ತು ಅದಿಮ ಸಂಜಾತ ಕೊಡವ ಜನಾಂಗೀಯ ಗುರುತು ವಿಷಯದ ಕುರಿತು ಮಾತನಾಡಿದರು.ತನ್ನದೇ ಆದ ವಿಶಿಷ್ಟ ಭಾಷೆ, ಆಚರಣೆಗಳು, ವಂಶಾವಳಿ ಮತ್ತು ಪವಿತ್ರ ಸ್ಥಳಗಳನ್ನು ಹೊಂದಿರುವ ಸಣ್ಣ ಸಮುದಾಯವನ್ನು ರಾಷ್ಟ್ರ ಹೇಗೆ ನಡೆಸಿಕೊಳ್ಳಬೇಕು ಎನ್ನುವುದಕ್ಕೆ ಸಾಂವಿಧಾನಿಕ ಉತ್ತರವೆಂದರೆ ನೀವು ತುಂಬಾ ಚಿಕ್ಕವರಾಗಿದ್ದೀರಿ ಎಂದು ಹೇಳುವುದಲ್ಲ, ಬದಲಿಗೆ, ನೀವು ವಿಶಿಷ್ಟರಾಗಿರುವುದರಿಂದ ನಿಮ್ಮ ಧ್ವನಿಯನ್ನು ರಕ್ಷಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾಂಕ್ರೀಟ್‌ ಕಾಡು ಅಭಿವೃದ್ಧಿ ಅಲ್ಲ: ಕೊಡವ ಭೂಮಿ, ಜಮ್ಮಾ ಹಿಡುವಳಿ, ದೇವರ ಕಾಡುಗಳು, ಕೃಷಿ, ಕಾಫಿ ಬೆಳೆ ಪ್ರಕೃತಿಯೊಂದಿಗೆ, ಕೊಡವ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದೆ. ಅಭಿವೃದ್ಧಿಯನ್ನು ಕೇವಲ ರೆಸಾರ್ಟ್ಗಳು ಮತ್ತು ಕಾಂಕ್ರಿಟ್ ಕಟ್ಟಡಗಳಿಂದ ಅಳೆಯಲು ಸಾಧ್ಯವಿಲ್ಲ, ಬದಲಿಗೆ ಪರಿಸರ ಮತ್ತು ಸಂಸ್ಕೃತಿಯ ಉಳಿವಿನೊಂದಿಗೆ ಅಳೆಯಬೇಕು. ಕೊಡವ ಭಾಷೆಯು ಔಪಚಾರಿಕ ಹೆಮ್ಮೆಯನ್ನು ಮೀರಿ ಶಿಕ್ಷಣ, ಡಿಜಿಟಲ್ ಸಂರಕ್ಷಣೆ ಮತ್ತು ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಿದಾಗ ಮಾತ್ರ ಬದುಕುಳಿಯುತ್ತದೆ ಎಂದು ಅಭಿಪ್ರಾಯಪಟ್ಟರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಹಿರಿಯ ವಕೀಲ ಕೆ.ಪಿ.ಬಾಲಸುಬ್ರಹ್ಮಣ್ಯ ಅವರು, ಕೊಡವರು ಅತ್ಯಂತ ಅಪರೂಪದ ಜನಾಂಗವಾಗಿದ್ದು, ಅವರನ್ನು ಸಂವಿಧಾನದ ಅಡಿಯಲ್ಲಿ ರಕ್ಷಿಸುವುದು ಇಂದಿನ ಅಗತ್ಯವಾಗಿದೆ ಎಂದರು.ಕೊಡವ ಸಾಂವಿಧಾನಿಕ ಹಕ್ಕುಗಳಿಗಾಗಿ ಸಿಎನ್‌ಸಿಯ 36 ವರ್ಷಗಳ ಶಾಂತಿಯುತ ಹೋರಾಟ ಹಾಗೂ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ಅಚಲ ಬದ್ಧತೆ ಶ್ಲಾಘನೀಯವಾಗಿದೆ. ಇವರ ಹೋರಾಟವನ್ನು ಕೊಡವರು ಬೆಂಬಲಿಸಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಕೊಡವರಿಗಾಗಿ ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ಸ್ವಯಂ ಆಡಳಿತವನ್ನು ಸಾಧಿಸುವ ತಮ್ಮ ಸಂಕಲ್ಪವನ್ನು ಪುನರುಚ್ಚರಿಸಿದರು. ವಿಚಾರಸಂಕಿರಣದ ಸಂದರ್ಭ ಮೂಲನಿವಾಸಿ ಹಾಗೂ ಪ್ರಕೃತಿ ಆರಾಧಕ ಕೊಡವ ಜನಾಂಗಕ್ಕಾಗಿ ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆಯನ್ನು ಸಾಧಿಸುವ ಕುರಿತು ಎನ್.ಯು.ನಾಚಪ್ಪ ಅವರು ಮಂಡಿಸಿದ ನಿರ್ಣಯವನ್ನು ಸಭೆಯಲ್ಲಿದ್ದವರು ಸರ್ವಾನುಮತದಿಂದ ಅಂಗೀಕರಿಸಿದರು.

ಕಾರ್ಯಕ್ರಮದಲ್ಲಿ ನಂದೇಟಿರ ಕವಿತಾ ಸುಬ್ಬಯ್ಯ, ಪುಲ್ಲೇರ ಸ್ವಾತಿ ಕಾಳಪ್ಪ, ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ, ಪಟ್ಟಮಾಡ ಲಲಿತಾ ಗಣಪತಿ, ಅಪ್ಪಾರಂಡ ನಂದಿನಿ ನಂಜಪ್ಪ, ಅಜ್ಜಿನಿಕಂಡ ಗಾನ ಮಾಚಯ್ಯ, ನಂದಿನೆರವಂಡ ನಿಶಾ ಅಚ್ಚಯ್ಯ, ನಂದಿನೆರವಂಡ ಸುಮಿತ್ರಾ ದಿನೇಶ್, ಅಚ್ಚಕಾಳೇರ ಸವಿತಾ ಮೊಣ್ಣಪ್ಪ, ಅಮ್ಮಯ್ಯಂಡ ಮೈನಾ, ಅಳಮಂಡ ಜೈ ಗಣಪತ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೃತ್ತಿ ಪರಿಣತಿ ಹೆಚ್ಚಿಸಲು ತರಬೇತಿ ಅಗತ್ಯ: ಅನುರಾಧ
ಉಡುಪಿ - ಮಹಿಳಾ ಸಹಕಾರಿಗಳಿಗೆ ತರಬೇತಿ ಕಾರ್ಯಾಗಾರ ಸಂಪನ್ನ