ಕೊಡವರಿಂದ ರಾಜ್ಯದಲ್ಲಿ ಹಾಕಿ ಜೀವಂತ: ಪರಮೇಶ್ವರ್‌

KannadaprabhaNewsNetwork | Published : Apr 28, 2025 12:49 AM

ಸಾರಾಂಶ

ಕೊಡಗಿನಂಥ ಪುಟ್ಟ ಜಿಲ್ಲೆ ದೇಶ ರಕ್ಷಣೆಗಾಗಿ ನೀಡಿರುವ ಕೊಡುಗೆ ಸದಾ ಸ್ಮರಣೀಯ ಎಂದು ಸಚಿವರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗಿನಂಥ ಪುಟ್ಟ ಜಿಲ್ಲೆ ದೇಶ ರಕ್ಷಣೆಗಾಗಿ ನೀಡಿರುವ ಕೊಡುಗೆ ಸದಾ ಸ್ಮರಣೀಯ. ದೇಶದ ಕ್ರೀಡಾ ಕ್ಷೇತ್ರಕ್ಕೂ ಕೊಡಗು ಅನೇಕ ತಾರೆಗಳನ್ನು ನೀಡಿದೆ. ದೇಶ ಮತ್ತು ರಾಜ್ಯದಲ್ಲಿ ಹಾಕಿ ಕ್ರೀಡೆ ಜೀವಂತವಾಗಿರಲು ಕೊಡವರು ಕಾರಣ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಮುದ್ದಂಡ ಹಾಕಿ ಕಪ್‌ನ ಫೈನಲ್ ಪಂದ್ಯದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಹಾಕಿ ಕ್ರೀಡೆಗೆ 4 ಸಾವಿರ ವರ್ಷಗಳ ಇತಿಹಾಸವಿದೆ. ಈಜಿಫ್ಟ್‌ನಲ್ಲಿ ಆರಂಭಗೊಂಡ ಹಾಕಿ, ಬ್ರಿಟಿಷರ ಮೂಲಕ ಭಾರತಕ್ಕೆ ಬಂತು. ಈ ಕ್ರೀಡೆ ಪ್ರಖ್ಯಾತಿಯನ್ನು ಪಡೆದು ದೇಶದ ಕೀರ್ತಿ ಮತ್ತು ಗೌರವವನ್ನು ಕಾಪಾಡಿದೆ. ಹಾಕಿ ಹಬ್ಬದ ಮೂಲಕ ಹಾಕಿ ಕ್ರೀಡೆಯನ್ನು ಜೀವಂತವಾಗಿಟ್ಟು ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುತ್ತಿರುವ ಕೊಡವರಿಗೆ ಕೋಟಿ ಕೋಟಿ ನಮನ ಎಂದರು.

ಹಿಂದೆ ರಾಜ್ಯವಾಗಿದ್ದ ಕೊಡಗು ಅತ್ಯಂತ ಸಣ್ಣ ಜಿಲ್ಲೆಯಾಗಿದೆ. ಆದರೆ ದೇಶಕ್ಕೆ ದೊಡ್ಡ ದೊಡ್ಡ ಕೊಡುಗೆಯನ್ನೇ ನೀಡಿದೆ. ಸೇನಾ ಕ್ಷೇತ್ರದಲ್ಲಿ ಫೀ.ಮಾ.ಕೆ.ಎಂ.ಕಾರ್ಯಪ್ಪ, ಜನರಲ್ ಕೆ.ಎಸ್.ತಿಮ್ಮಯ್ಯ ಸೇರಿದಂತೆ ಹಲವು ಅಧಿಕಾರಿಗಳು ಸೇವೆ ಸಲ್ಲಿಸಿದ್ದು, ಇವರೆನ್ನೆಲ್ಲ ಸ್ಮರಿಸಿಕೊಳ್ಳಬೇಕಾಗುತ್ತದೆ. ಕೊಡಗು ಅನೇಕ ಖ್ಯಾತ ಕ್ರೀಡಾಪಟುಗಳನ್ನು ಕೂಡ ಕ್ರೀಡಾಕ್ಷೇತ್ರಕ್ಕೆ ನೀಡಿದೆ. ಒಂದು ಸಮುದಾಯ ದೊಡ್ಡ ಮಟ್ಟದಲ್ಲಿ ಕ್ರೀಡೆಯ ರಕ್ಷಣೆ ಮಾಡುತ್ತಿರುವುದು ವಿಶ್ವದಲ್ಲೇ ಪ್ರಥಮ ಎಂದರೆ ಅತಿಶಯೋಕ್ತಿಯಲ್ಲ. ಈ ಬಾರಿ ಹಾಕಿ ಪಂದ್ಯಾವಳಿಯಲ್ಲಿ ದಾಖಲೆಯ 396 ಕೊಡವ ತಂಡಗಳು ಪಾಲ್ಗೊಂಡಿದ್ದು, ವಿಶೇಷ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಪೊಲೀಸ್‌ ಇಲಾಖೆಯಲ್ಲಿ ಶೇ.3 ಮೀಸಲು:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ ಕ್ರೀಡೆಗೆ ಉತ್ತೇಜನ ನೀಡುತ್ತಿದೆ. ಪೊಲೀಸ್ ಇಲಾಖೆಯ ಹುದ್ದೆಗಳಲ್ಲಿ ಕ್ರೀಡಾಪಟುಗಳಿಗೆ ಶೇ.3ರಷ್ಟು ಮೀಸಲಾತಿ ಪ್ರಕಟಿಸಲಾಗಿದೆ. ಉಳಿದ ಎಲ್ಲ ಇಲಾಖೆಗಳಲ್ಲಿ ಕ್ರೀಡಾಪಟುಗಳಿಗೆ ಶೇ.2ರಷ್ಟು ಮೀಸಲಾತಿ ಘೋಷಿಸಿದ್ದು, ಬೇರೆ ಯಾವುದೇ ರಾಜ್ಯದಲ್ಲಿ ಈ ವ್ಯವಸ್ಥೆ ಇಲ್ಲ. ರಾಜ್ಯ ಸರ್ಕಾರ ಕ್ರೀಡಾಕೂಟ ಮತ್ತು ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಕೊಡವ ಹಾಕಿ ಹಬ್ಬಕ್ಕೆ ಪ್ರತಿವರ್ಷ 1 ಕೋಟಿ ರು.ಗಳನ್ನು ಸರ್ಕಾರ ನೀಡುತ್ತಿದೆ. ಹೆಚ್ಚಿನ ಅನುದಾನ ಬೇಕು ಎಂದು ಕೇಳಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳ ಗಮನ ಸೆಳೆದು ಮುಂದಿನ ದಿನಗಳಲ್ಲಿ ಹೆಚ್ಚು ಅನುದಾನ ಬಿಡುಗಡೆಗೆ ಪ್ರಯತ್ನ ಮಾಡುವುದಾಗಿ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದರು.

ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಮಾತನಾಡಿ, ಕೊಡಗು ಕೇವಲ ಕ್ರೀಡಾ ಕ್ಷೇತ್ರಕ್ಕೆ ಮಾತ್ರ ಕೊಡುಗೆ ನೀಡಿಲ್ಲ, ದೇಶಸೇವೆಗೆ ಪ್ರಾಣವನ್ನು ಮುಡಿಪಾಗಿಟ್ಟಿದೆ. ವೀರರು ಹುಟ್ಟಿದ ನಾಡಿನ ಸೇವೆ ಮಾಡಲು ಇಬ್ಬರು ಶಾಸಕರೊಂದಿಗೆ ಸರ್ಕಾರ ಕೈಜೋಡಿಸಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಕೊಡಗು ಮತ್ತು ಕೊಡವರ ಪರ ಇದೆ ಎಂದರು.

ಕೊಡವ ಸಮಾಜಕ್ಕೆ 7 ಎಕರೆ ಭೂಮಿ:

ಬೆಂಗಳೂರು ಕೊಡವ ಸಮಾಜಕ್ಕೆ ಸುಮಾರು 50 ಕೋಟಿ ರೂ. ಬೆಲೆ ಬಾಳುವ 7 ಏಕರೆ ಜಾಗವನ್ನು ರಾಜ್ಯ ಸರ್ಕಾರ ನೀಡಿದೆ. ಈ ಜಾಗ ಮಂಜೂರಾಗಲು ರಾಜ್ಯ ಸರ್ಕಾರದ ಟ್ರಬಲ್ ಶೂಟರ್ ಎಂದೇ ಹೆಸರಾಗಿರುವ ಶಾಸಕ ಎ.ಎಸ್.ಪೊನ್ನಣ್ಣ ಅವರು ಸಾಕಷ್ಟು ಶ್ರಮವಹಿಸಿ ನಮ್ಮ ಮೇಲೆ ಒತ್ತಡ ಹಾಕಿದ್ದಾರೆ ಎಂದರು.

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿ, ಪ್ರವಾಸಿ ಕ್ಷೇತ್ರವಾಗಿ ಹೆಸರು ಗಳಿಸಿರುವ ಪ್ರಕೃತಿ ಸೌಂದರ್ಯದ ಕೊಡಗು ಜಿಲ್ಲೆ ಎಂದರೆ ಎಲ್ಲರಿಗೂ ಪ್ರೀತಿ. ಕೊಡವರು ಧೈರ್ಯ ಮತ್ತು ತ್ಯಾಗಕ್ಕೆ ಹೆಸರಾದವರು, ಕ್ರೀಡಾಕೂಟಕ್ಕೆ ಇಷ್ಟು ದೊಡ್ಡ ಮಟ್ಟದಲ್ಲಿ ಪ್ರೋತ್ಸಾಹ ನೀಡುತ್ತಿರುವುದನ್ನು ವಿಶ್ವದ ಬೇರೆಲ್ಲೂ ನೋಡಲು ಸಾಧ್ಯವಿಲ್ಲವೆಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಕಳೆದ 25 ವರ್ಷಗಳಿಂದ ಕೊಡವ ಕುಟುಂಬಗಳ ನಡುವಿನ ಹಾಕಿ ಹಬ್ಬ ನಡೆಸಿಕೊಂಡು ಬರುತ್ತಿರುವುದು ಐತಿಹಾಸಿಕ ಸಾಧನೆ ಎಂದರು.

ಕೊಡವರು ತ್ಯಾಗ ಮನೋಭಾವದವರು:

ಕ್ರೀಡೆಗಾಗಿ ಕೊಡವರು ನೀಡಿದಷ್ಟು ದೊಡ್ಡ ಕೊಡುಗೆಯನ್ನು ದೇಶದ ಬೇರೆ ಯಾವ ಸಮಾಜವೂ ನೀಡಿಲ್ಲ. ಖ್ಯಾತ ಕ್ರೀಡಾಪಟು ಎಂ.ಪಿ.ಗಣೇಶ್ ಅವರಿಗೆ ನಮ್ಮ ತಂದೆಯವರು ಅಧಿಕಾರದಲ್ಲಿದ್ದಾಗ ಹಾಕಿ ಅಕಾಡೆಮಿ ಸ್ಥಾಪನೆಗೆ 20 ಎಕರೆ ಭೂಮಿ ಮಂಜೂರು ಮಾಡುವುದಾಗಿ ತಿಳಿಸಿದ್ದರು. ಆದರೆ ಇದನ್ನು ನಿರಾಕರಿಸಿದ ಗಣೇಶ್, ಆ ಜಾಗದಲ್ಲಿ ಕ್ರೀಡಾ ಹಾಸ್ಟೆಲ್ ಸ್ಥಾಪಿಸುವಂತೆ ಕೇಳಿಕೊಂಡಿದ್ದರು. ಕೊಡವರು ಧೈರ್ಯಶಾಲಿಗಳು ಮಾತ್ರವಲ್ಲದೆ ತ್ಯಾಗ ಮನೋಭಾವ ಹೊಂದಿರುವವರು ಎಂದು ಗುಂಡೂರಾವ್‌ ಶ್ಲಾಘಿಸಿದರು.

ಸಂಸದ ಯದುವೀರ್ ಒಡೆಯರ್ ಮಾತನಾಡಿ, ಹಾಕಿ ಹಬ್ಬಕ್ಕೆ ಶಾಶ್ವತ ಮೂಲಸೌಕರ್ಯದ ಅಗತ್ಯವಿದ್ದು, ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿದರೆ ಸಂಪೂರ್ಣ ಬೆಂಬಲ ಸೂಚಿಸುವುದಾಗಿ ಭರವಸೆ ನೀಡಿದರು.

ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ಕೊಡವ ಹಾಕಿ ಹಬ್ಬ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ. ಕೊಡಗಿನಲ್ಲಿ ಕೊಡವರ ಸಂಖ್ಯೆ ಸಣ್ಣದು, ಆದರೆ ಕೊಡುಗೆ ದೊಡ್ಡದು. ಸ್ವಾತಂತ್ರ್ಯ ಹೋರಾಟದಿಂದ ಆರಂಭಗೊಂಡು ಕ್ರೀಡೆ, ಸೇನೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಕೊಡವರ ಪಾತ್ರವಿದೆ ಎಂದು ತಿಳಿಸಿದರು.

ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ರಾಜಕಾರಣಿಗಳು ಜನಾಂಗವನ್ನು ಒಡೆಯುವ ಕೆಲಸ ಮಾಡುತ್ತಾರೆ. ಆದರೆ ಕ್ರೀಡೆಗಳು ಎಲ್ಲರನ್ನು ಒಂದುಗೂಡಿಸುತ್ತದೆ ಎಂದರು.

ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ಬಾಳುಗೋಡು ಕ್ರೀಡಾ ಮತ್ತು ಸಂಸ್ಕೃತಿ ಕೇಂದ್ರದ ಅಭಿವೃದ್ಧಿಗೆ 50 ಕೋಟಿ ರೂ.ಗಳ ಅಗತ್ಯವಿದ್ದು, ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಲಿ, ಶಾಸಕರು ಕೊಡವ ಸಮಾಜಗಳ ಅಭಿವೃದ್ಧಿಗೆ ಅನುದಾನ ತರಲಿ ಎಂದು ಹೇಳಿದರು.

ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ ಮಾತನಾಡಿ, ಪ್ರಸ್ತುತ 396 ತಂಡಗಳು ಆಟವಾಡಿದ್ದು, ಮುಂದೆ ಈ ಸಂಖ್ಯೆ 500ಕ್ಕೆ ಏರಿಕೆಯಾಗುವ ಸಾಧ್ಯತೆಗಳಿವೆ. ಆದ್ದರಿಂದ ಹೆಚ್ಚಿನ ಸಂಖ್ಯೆಯ ಅಂಪೈರ್‌ಗಳ ಅಗತ್ಯವಿದ್ದು, ಆಸಕ್ತರು ಮುಂದೆ ಬರಬೇಕು, ಅಕಾಡೆಮಿ ತರಬೇತಿ ನೀಡಲಿದೆ ಎಂದು ಕರೆ ನೀಡಿದರು.

ಮುದ್ದಂಡ ಹಾಕಿ ಉತ್ಸವ ಸಮಿತಿ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ ಮಾತನಾಡಿ, ಕೊಡಗಿನಲ್ಲಿ ಕಾರ್ಯಕ್ರಮಗಳಿಗೆ ಜನ ಸೇರಿವುದಿಲ್ಲ ಎನ್ನುವ ಮಾತಿದೆ, ಆದರೆ ಮುದ್ದಂಡ ಹಪ್ ಹಾಕಿ ಉತ್ಸವದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿರುವುದು ಸಂತಸ ತಂದಿದೆ. ಹಲವು ಸವಾಲುಗಳ ನಡುವೆಯೂ ಮುದ್ದಂಡ ಹಾಕಿ ಉತ್ಸವವನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದರು.

ಮುದ್ದಂಡ ಕುಟುಂಬದ ಪಟ್ಟೆದಾರ ಡಾಲಿ ತಿಮ್ಮಯ್ಯ, ಮುದ್ದಂಡ ಕಪ್ ಹಾಕಿ ಉತ್ಸವದ ಗೌರವಾಧ್ಯಕ್ಷ ಮುದ್ದಂಡ ದೇವಯ್ಯ, ಕಾರ್ಯದರ್ಶಿ ಆದ್ಯ ಪೂವಣ್ಣ, ಕೊಡವ ಹಾಕಿ ಅಕಾಡೆಮಿ ಉಪಾಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. ಚೆಪ್ಪುಡಿರ ಗ್ರಂಥ ಕಾರ್ಯಪ್ಪ ಪ್ರಾರ್ಥಿಸಿದರು. ಮುದ್ದಂಡ ಕಪ್ ಹಾಕಿ ಉತ್ಸವ ಸಮಿತಿಯ ಉಪಾಧ್ಯಕ್ಷ ಡೀನ್ ಬೋಪಣ್ಣ ಸ್ವಾಗತಿಸಿದರು. ಸಂಯೋಜಕ ಮುದ್ದಂಡ ರಾಯ್ ತಮ್ಮಯ್ಯ ವಂದಿಸಿದರು.

Share this article