ಕೆರೆ ನಿರ್ಮಿಸಲು ಒತ್ತಾಯಿಸಿ ಕೊಳಗಲ್ಲು ಅನಿರ್ದಿಷ್ಟ ಧರಣಿ

KannadaprabhaNewsNetwork |  
Published : Jul 02, 2026, 02:15 AM IST
ಕುಡಿವನೀರಿನ ಸಮಸ್ಯೆ ನೀಗಿಸಲು ಕೆರೆ ನಿರ್ಮಿಸಬೇಕು ಎಂದು ಒತ್ತಾಯಿಸಿ ಬಳ್ಳಾರಿ ತಾಲೂಕಿನ ಕೊಳಗಲ್ಲು ಗ್ರಾಮದಲ್ಲಿ ಬುಧವಾರ ಡಿವೈಎಫ್‌ಐ ಸಂಘಟನೆ ನೇತೃತ್ವದಲ್ಲಿ ಅನಿರ್ದಿಷ್ಟ ಧರಣಿ ಆರಂಭಗೊಂಡಿತು. | Kannada Prabha

ಸಾರಾಂಶ

ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಕೆರೆ ನಿರ್ಮಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲೂಕಿನ ಕೊಳಗಲ್ಲು ಗ್ರಾಮದಲ್ಲಿ ಡಿವೈಎಫ್‌ಐ ನೇತೃತ್ವದಲ್ಲಿ ಬುಧವಾರ ಅನಿರ್ದಿಷ್ಟ ಧರಣಿ ಆರಂಭಗೊಂಡಿತು.

ಬಳ್ಳಾರಿ: ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಕೆರೆ ನಿರ್ಮಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲೂಕಿನ ಕೊಳಗಲ್ಲು ಗ್ರಾಮದಲ್ಲಿ ಡಿವೈಎಫ್‌ಐ ನೇತೃತ್ವದಲ್ಲಿ ಬುಧವಾರ ಅನಿರ್ದಿಷ್ಟ ಧರಣಿ ಆರಂಭಗೊಂಡಿತು.

ಕೊಳಗಲ್ಲು ಗ್ರಾಮಸ್ಥರು ಅನೇಕ ವರ್ಷಗಳಿಂದ ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಗ್ರಾಮದಲ್ಲಿ ಕೆರೆ ನಿರ್ಮಾಣ ಮಾಡಲು ಸಾಕಷ್ಟು ಭೂಮಿ, ಲಭ್ಯವಿದ್ದು ಸರ್ವೆ ನಂಬರ್ 557ರಲ್ಲಿ ಸುಮಾರು 296 ಎಕರೆ ಜಮೀನನ್ನು ಕುಡಿಯುವ ನೀರಿನ ಕೆರೆ ನಿರ್ಮಿಸಲು ಕಾಯ್ದಿರಿಸಲಾಗಿದೆ. ಕೆರೆ ನಿರ್ಮಾಣ ಸಂಬಂಧ ಚರ್ಚೆಗಳು ನಡೆದು, ಮಣ್ಣು ಪರೀಕ್ಷೆ ಮಾಡಲಾಗಿದೆ. ವರದಿಯೂ ಬಂದಿದೆ. ಆದರೆ, ಈ ವರೆಗೆ ಕೆರೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಸದ್ಯಕ್ಕೆ ಪೂರೈಕೆಯಾಗುತ್ತಿರುವ ನೀರು ನಿರ್ವಹಣೆಯನ್ನು ಸಹ ಗ್ರಾಮ ಪಂಚಾಯಿತಿ ಸರಿಯಾಗಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಗ್ರಾಮದಲ್ಲಿ ಸುಮಾರು 300 ಅಧಿಕ ಕುಟುಂಬಗಳು ಆಶ್ರಯವಿಲ್ಲದೆ ಒದ್ದಾಡುತ್ತಿವೆ. ಚಿಕ್ಕ ಗುಡಿಸಲುಗಳಲ್ಲಿಯೇ ಮೂರ್ನಾಲ್ಕು ಕುಟುಂಬಗಳು ವಾಸ ಮಾಡುವಂತಾಗಿದೆ. ಆದರೆ, ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಡಲಾಗಿಲ್ಲ. ಗ್ರಾಮದಿಂದ ಅಲ್ಲೀಪುರಕ್ಕೆ ಸಾಗುವ ರಸ್ತೆಯು ಸಂಪೂರ್ಣ ಹಾಳಾಗಿದ್ದು ರಸ್ತೆ ನಿರ್ಮಾಣಕ್ಕೆ ಮುಂದಾಗಿಲ್ಲ. ಶೌಚಾಲಯಗಳು ಇಲ್ಲದೆ ಮಹಿಳೆಯರು ಪರದಾಡುವಂತಾಗಿದೆ. ಹೀಗಿದ್ದರೂ ಸ್ಥಳೀಯ ಗ್ರಾಮ ಪಂಚಾಯಿತಿ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಎಲ್ಲ ಸಮಸ್ಯೆಗಳ ಕುರಿತು ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಮಾಡಿಕೊಂಡರೂ ಸೌಜನ್ಯಕ್ಕಾದರೂ ಭೇಟಿ ನೀಡಿಲ್ಲ ಎಂದು ದೂರಿದರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಯು. ಎರಿಸ್ವಾಮಿ ಮಾತನಾಡಿ, ಗ್ರಾಮದಲ್ಲಿ 15ರಿಂದ 20 ದಿನಕ್ಕೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಕಲುಷಿತ ನೀರು ಪೂರೈಕೆಯಿಂದ ಜನರು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ತೀವ್ರಗೊಂಡು ಜನರು ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.

ಕೂಡಲೇ ಶಾಸಕರು ಹಾಗೂ ಸಂಸದರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಸಮರ್ಪಕ ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಸಿಐಟಿಯು ಮುಖಂಡ ಜೆ. ಸತ್ಯಬಾಬು, ಎಚ್. ಎರಿಸ್ವಾಮಿ, ಮಸ್ತಾನ್‌ಸಾಬ್, ಉಳ್ಳೂರು ಶ್ರೀನಿವಾಸ್, ತಿಪ್ಪೇಸ್ವಾಮಿ, ಶಿವಾನಂದ, ಸೀನಪ್ಪ, ತಿಪ್ಪಣ್ಣ ಸೇರಿದಂತೆ ಡಾ. ಅಂಬೇಡ್ಕರ್ ಸಂಘ, ದಲಿತ ಸಂಘರ್ಷ ಸಮಿತಿ ಹಾಗೂ ಕನ್ನಡಪರ ಸಂಘಟನೆಗಳ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. .

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾಲಿನ್ಯ ನಿಯಂತ್ರಣ ಇಲಾಖೆ ಕಣ್ಣಿದ್ದೂ ಕುರುಡು
ವಾರದೊಳಗೆ ಚುನಾವಣಾ ಪ್ರಕ್ರಿಯೆ ಮುಗಿಸಲು ಆದೇಶ: ಎನ್.ಕೆ. ಭಟ್ಟ