ಕನ್ನಡಪ್ರಭ ವಾರ್ತೆ ಕೋಲಾರ
ಮೈತ್ರಿ ಧರ್ಮದಲ್ಲಿ ಜೆ.ಡಿ.ಎಸ್ ಪಕ್ಷಕ್ಕೆ ೩ ಸೀಟು ಹಂಚಿಕೆಯಾಗಿದ್ದು, ಈಗಾಗಲೇ ೨ ಸೀಟು ಹಂಚಿಕೆ ಮುಗಿದಿದ್ದರೂ ಕೋಲಾರದ ಸೀಟು ಹಂಚಿಕೆ ಇನ್ನು ಬಗೆಹರಿಯದಿರುವುದು ಜೆ.ಡಿ.ಎಸ್ ಮುಖಂಡರಲ್ಲಿ ಅಸಮಾಧಾನವನ್ನುಂಟು ಮಾಡಿದೆ.
ಜೆ.ಡಿ.ಎಸ್‌ನಲ್ಲಿ ಮಲ್ಲೇಶ್ ಬಾಬು, ಸಮೃದ್ಧಿ ಮಂಜುನಾಥ್ ಹಾಗೂ ನಿಸರ್ಗ ನಾರಾಯಣಸ್ವಾಮಿ ಸೇರಿ ಮೂವರು ಆಕಾಂಕ್ಷಿಗಳ ಪೈಕಿ ಮಲ್ಲೇಶ್ ಬಾಬು ಅಥವಾ ಸಮೃದ್ದಿ ಮಂಜುನಾಥ್ ಎಂದು ಕೇಳಿ ಬಂದಿತು, ಮತ್ತೊಂದು ಕಡೆ ಬಿಜೆಪಿ ಪಕ್ಷದಲ್ಲಿ ಎಸ್.ಮುನಿಸ್ವಾಮಿ, ಕಾಂಗ್ರೆಸ್ ಪಕ್ಷದಲ್ಲಿ ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪನವರಿಗಿಂತ ೨ ಲಕ್ಷಕ್ಕೂ ಅಧಿಕ ಮತ ಪಡೆದು ವಿಜಯದ ಪತಾಕೆ ಹಾರಿಸಿ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಪ್ರಥಮ ಭಾರಿಗೆ ಬಿಜೆಪಿ ಖಾತೆಯನ್ನು ತೆರೆದಿದ್ದರು.ಕಾಂಗ್ರೆಸ್ ಪಕ್ಷದಲ್ಲಿ ಕೆ.ಎಚ್.ಮುನಿಯಪ್ಪನವರ ವಿರುದ್ಧದ ಜಿಲ್ಲೆಯಲ್ಲಿ ಭಿನ್ನಮತ ಶಮನವಾಗಿದ್ದರೂ ಇನ್ನು ಕೆಲವು ಶಾಸಕರ ಕೋಪ ಹಾಗೆಯೇ ಇದೆ. ಅದಕ್ಕೆ ಮೀಸಲಾತಿಯಲ್ಲಿ ಬಲಗೈನವರಿಗೆ ಟಿಕೆಟ್ ನೀಡಬೇಕೆಂಬ ಕೂಗು ಕೇಳಿ ಬರುತ್ತಿರುವುದೇ ಸಾಕ್ಷಿಯಾಗಿದೆ.
ಈ ಸಂದರ್ಭದಲ್ಲಿ ಕೆ.ಎಚ್.ಮುನಿಯಪ್ಪನವರು, ನಾನು ಸೂಚಿಸುವ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂಬ ಷರತ್ತು ಒಡ್ಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಗೊಂದಲಕ್ಕೆ ಒಳಗಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಕೆ.ಎಚ್.ಮುನಿಯಪ್ಪ ತಮಗೆ ಅಥವಾ ತಮ್ಮ ಅಳಿಯ ಚಿಕ್ಕ ಪೆದ್ದನ್ನನಿಗೆ ನೀಡಿ ಎಂದರೆ ಮತ್ತೊಂದೆಡೆ ಬಲಗೈ ಸಮುದಾಯದ ಮಾಜಿ ರಾಜ್ಯ ಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಪ್ರಬಲ ಅಕಾಂಕ್ಷಿಯಾಗಿದ್ದಾರೆ, ಅಂತಿಮವಾಗಿ ಚಿಕ್ಕಪೆದ್ದನ್ನ ಅಥವಾ ಡಾ.ಎಲ್.ಹನುಮಂತಯ್ಯ ಇಬ್ಬರಲ್ಲಿ ಒಬ್ಬರನ್ನು ಘೋಷಿಸುವ ಸಾಧ್ಯತೆಯಿದೆಯನ್ನಲಾಗಿದೆ.
ಒಟ್ಟಾರೆಯಾಗಿ ಕೋಲಾರದ ಲೋಕಸಭೆ ಚುನಾವಣೆಯಲ್ಲಿ ಪ್ರತಿಷ್ಠಿತ ಪಕ್ಷಗಳ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಗೊಂದಲ ಉಂಟಾಗಿರುವುದಂತೂ ಸತ್ಯ,ಶೀಘ್ರದಲ್ಲಿಯೇ ಅಧಿಕೃತ ಅಭ್ಯರ್ಥಿಗಳು ತೆರೆಯ ಮೇಲೆ ಕಾಣುವ ಸಾಧ್ಯತೆಯಿದೆ.
ಬಿಜೆಪಿ ಸಂಸದರಾಗಿದ್ದ ಎಸ್.ಮುನಿಸ್ವಾಮಿಯವರು ಈಗಾಗಲೇ ಬಿಜೆಪಿ ಹೈಕಮಾಂಡ್ ಮುಖಂಡರನ್ನು ಸಂರ್ಪಕಿಸಿ ಟಿಕೆಟ್ ಆಶ್ವಾಸನೆ ಪಡೆದಿದ್ದು, ಕೋಲಾರದ ಲೋಕಸಭಾ ಟಿಕೆಟ್ ಮತ್ತೊಮ್ಮೆ ತಮಗೇ ಸಿಗಲಿದೆ ಎಂಬುವುದಾಗಿ ಹೇಳುತ್ತಿದ್ದಾರೆ. ಅವರು ಈಗಾಗಲೇ ಜೆಡಿಎಸ್ ವರಿಷ್ಠರನ್ನು ಸಂಪರ್ಕಿಸಿದ್ದಾರೆ. ಈ ಬಾರಿಯೂ ಕಾಂಗ್ರೆಸ್ ಪಕ್ಷದಲ್ಲಿರುವ ಭಿನ್ನಮತದ ಲಾಭವನ್ನು ಪಡೆಯುವ ವಿಶ್ವಾಸವನ್ನು ಮುನಿಸ್ವಾಮಿಯವರು ಹೊಂದಿದ್ದಾರೆ, ಆದರೆ ಬಿಜೆಪಿಯಲ್ಲೂ ಎಸ್.ಮುನಿಸ್ವಾಮಿ ವಿರುದ್ಧ ಒಂದು ಗುಂಪು ಅಸಮಾಧಾನಗೊಂಡಿತ್ತು, ಆದರೀಗ ಆ ಗುಂಪು ಸಮಾಧಾನಗೊಂಡಿದೆ.