ಕೋಲಾರ: ಮಕ್ಕಳಿಗೆ ಪೌಷ್ಟಿಕತೆ ಕೊರತೆ

KannadaprabhaNewsNetwork |  
Published : Jul 28, 2024, 02:09 AM IST
೨೬ಕೆಎಲ್‌ಆರ್-೬ಎಂಎಲ್ಸಿ ಇಂಚರ ಗೋವಿಂದರಾಜು. | Kannada Prabha

ಸಾರಾಂಶ

ರಾಜ್ಯಾದ್ಯಂತ ಗರ್ಭಿಣಿಯರಲ್ಲಿನ ಅಪೌಷ್ಠಿಕತೆ, ಅವಧಿ ಪೂರ್ವ ಜನಿಸಿದ ಮಕ್ಕಳಲ್ಲಿ ರಕ್ತದ ಕೊರತೆಯ ಸಮಸ್ಯೆ ನಿಭಾಯಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ತಪಾಸಣೆ ಹಾಗೂ ಆರೋಗ್ಯ ಸೇವೆಗಳನ್ನು ಕಲ್ಪಿಸಲಾಗುವುದು.

ಕನ್ನಡಪ್ರಭ ವಾರ್ತೆ ಕೋಲಾರ

ಜಿಲ್ಲೆಯಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದರ ಬಗ್ಗೆ ಎಂಎಲ್ಸಿ ಇಂಚರ ಗೋವಿಂದರಾಜು ಕರ್ನಾಟಕ ವಿಧಾನ ಪರಿಷತ್‌ ಅಧಿವೇಶನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರ ಗಮನಕ್ಕೆ ತಂದರು.

ಜಿಲ್ಲೆಯಲ್ಲಿ ಅವಧಿ ಪೂರ್ವಕ್ಕೂ ಮುನ್ನ ಹಲವು ಕಾರಣಗಳಿಂದ ಜನಿಸಿರುವ ೧ ಸಾವಿರಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಕಿ-ಅಂಶಗಳ ಪ್ರಕಾರ ೨೦೨೪ರ ಏಪ್ರಿಲ್‌ವರೆಗೆ ಜಿಲ್ಲೆಯಲ್ಲಿ ಒಟ್ಟು ೮೫,೫೨೨ ಮಕ್ಕಳನ್ನು ತೂಕ ಮಾಡಲಾಗಿದ್ದು, ೯೨ ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿದರು.

1333 ಮಕ್ಕಳಲ್ಲಿ ಅಪೌಷ್ಟಿಕತೆ

೨೦೨೩ರ ಡಿಸೆಂಬರ್ ಅಂತ್ಯದವರೆಗೆ ಒಟ್ಟು ೮೪,೬೭೧ ಮಕ್ಕಳನ್ನು ತೂಕ ಮಾಡಲಾಗಿದೆ. ಅವರಲ್ಲಿ ಒಟ್ಟು ೧,೩೩೩ ಮಕ್ಕಳಲ್ಲಿ ಅಪೌಷ್ಟಿಕತೆಯಿರುವುದು ಪತ್ತೆಯಾಗಿದೆ. ಒಟ್ಟು ಮಕ್ಕಳ ಪ್ರಮಾಣಕ್ಕೆ ಹೋಲಿಸಿದರೆ ಶೇ. ೧.೫೭ ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆಯಿದೆ. ಈ ಬಾರಿ ಶೇ. ೦.೧೧ ಪ್ರಮಾಣದಲ್ಲಿದ್ದು, ಇನ್ನೂ ಏರಿಕೆಯಾಗುವ ಆತಂಕ ಕಾಡುತ್ತಿರುವುದಾಗಿ ಸದನದಲ್ಲಿ ಪ್ರಸ್ತಾಪಿಸಿದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಉತ್ತರಿಸಿ, ಕೋಲಾರ ಜಿಲ್ಲೆ ಹಾಗೂ ರಾಜ್ಯಾದ್ಯಂತ ಗರ್ಭಿಣಿಯರಲ್ಲಿನ ಅಪೌಷ್ಠಿಕತೆ, ಅವಧಿ ಪೂರ್ವ ಜನಿಸಿದ ಮಕ್ಕಳಲ್ಲಿ ರಕ್ತದ ಕೊರತೆಯ ಸಮಸ್ಯೆ ನಿಭಾಯಿಸಲು ಆರೋಗ್ಯ ಮತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ತಪಾಸಣೆ ಹಾಗೂ ಆರೋಗ್ಯ ಸೇವೆಗಳು ಲಭ್ಯವಾಗುವಂತೆ ಕ್ರಮವಹಿಸುವುದಾಗಿ ತಿಳಿಸಿದರು.

ಸುಧಾರಣೆ ಕಾಣುತ್ತಿಲ್ಲ

ನಂತರ ಗೋವಿಂದರಾಜು ಮಾತನಾಡಿ, ಬಾಲ್ಯವಿವಾಹ, ಆರ್ಥಿಕತೆ, ಬಡತನದಿಂದಾಗಿ ಜಿಲ್ಲೆಯಲ್ಲಿ ಅಪೌಷ್ಟಿಕತೆ ಸಮಸ್ಯೆ ಮುಂದುವರೆದಿದೆ. ಇದರ ಬಗ್ಗೆ ಯಾವೊಬ್ಬ ಅಧಿಕಾರಿಗಳೂ ಗಮನಹರಿಸಿಲ್ಲ. ಅಪೌಷ್ಟಿಕತೆ ನಿರ್ಮೂಲನೆಗಾಗಿ ಕೇಂದ್ರ- ರಾಜ್ಯ ಸರ್ಕಾರಗಳು ಮಾತೃವಂದನ, ಪೌಷ್ಠಿಕ ಆಹಾರ ವಿತರಣಾ ಕಾರ್ಯಕ್ರಮ ಜಾರಿಗೆ ತಂದಿದ್ದು, ಕೋಟ್ಯಂತರ ರು. ಖರ್ಚು ಮಾಡುತ್ತಿವೆ. ಆದರೆ ಮಕ್ಕಳ ದೈಹಿಕ ಬೆಳವಣಿಗೆ ಮಾತ್ರ ನಿರೀಕ್ಷಿತ ಮಟ್ಟದ ಸುಧಾರಣೆ ಕಾಣುತ್ತಿಲ್ಲ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!