ಕನ್ನಡಪ್ರಭ ವಾರ್ತೆ ಕೋಲಾರಇನ್ಫೊಸಿಸ್ ಸಂಸ್ಥೆಯ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್) ಅನುದಾನದಲ್ಲಿ ಕೋಲಾರಮ್ಮ ಕೆರೆಯ ಸುಂದರಗೊಳಿಸಲು ಜಿಲ್ಲಾಡಳಿತ ಹಾಗೂ ಸಣ್ಣ ನೀರಾವರಿ ಇಲಾಖೆ ಕೈಗೊಂಡಿರುವ ಕಾಮಗಾರಿ ಅವೈಜ್ಞಾನಿಕ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಜಿಲ್ಲಾಧಿಕಾರಿಗೆ ಪತ್ರ ಬರೆದಿದೆ.ಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿ ಲೋಪವಿದೆ ಎಂದು ದೂರಿ ಕೋಲಾರ ನಗರಸಭೆ ಸದಸ್ಯ ಎಸ್.ಆರ್.ಮುರಳಿಗೌಡ ಪತ್ರ ಬರೆದಿದ್ದರು. ಆ ಬಳಿಕ ಆಯೋಗವು ಸಣ್ಣ ನೀರಾವರಿ ಇಲಾಖೆಯ ಮುಖ್ಯ ಎಂಜಿನಿಯರ್‌ಗೆ (ದಕ್ಷಿಣ ವಲಯ) ಆಯೋಗವು ಪತ್ರ ಬರೆದು ಕೆರೆ ಅಭಿವೃದ್ಧಿ ಕಾಮಗಾರಿಯ ಸ್ಥಿತಿಗತಿ ಬಗ್ಗೆ ವರದಿ ತರಿಸಿಕೊಂಡಿತ್ತು.
ಏರಿಗೆ ಹೂಳು ಮಣ್ಣು ಬಳಕೆವರದಿ ಅವಲೋಕಿಸಿದಾಗ ಕೋಲಾರದ ಅಮಾನಿಕೆರೆಯಲ್ಲಿ (ಕೋಲಾರಮ್ಮ) ಸಿಎಸ್‌ಆರ್ ಅನುದಾನದಲ್ಲಿ ಆನಂದ್ ಮಲ್ಲಿಗವಾಡ್ ಫೌಂಡರ್ ಮತ್ತು ಟ್ರಸ್ಟಿ ಮಲ್ಲಿಗವಾಡ್ ಫೌಂಡೇಷನ್ ಸಂಸ್ಥೆಯವರು ಕಾಮಗಾರಿ ಕೈಗೊಂಡಿದ್ದು, ಕೆರೆಯ ಸುತ್ತಲೂ ಕಟ್ಟಲಾಗಿರುವ ಏರಿ(ಬಂಡ್)ಗೆ ಕೆರೆ ಹೂಳನ್ನೇ ಬಳಸಲಾಗಿದೆ. ಇದರಿಂದ ಏರಿಯಲ್ಲಿ ಸೀಪೇಜ್ ಹೆಚ್ಚಾಗಿರುವುದು ಕಂಡುಬಂದಿದೆ. ಈ ಸಂಸ್ಥೆಯವರು ಅವೈಜ್ಞಾನಿಕವಾಗಿ ಕಾಮಗಾರಿ ನಡೆಸುತ್ತಿದ್ದನ್ನು ಗಮನಿಸಿಯೂ ಸಂಬಂಧಪಟ್ಟ ಸಣ್ಣ ನೀರಾವರಿ ಇಲಾಖೆಯ ಕೋಲಾರ ಉಪವಿಭಾಗದ ಕಾರ್ಯಪಾಲಕ ಎಂಜಿನಿಯರ್ ಹಾಗೂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಯಾವುದೇ ಕ್ರಮ ವಹಿಸದಿರುವುದು ಶೋಚನೀಯ. ಈ ನಿಟ್ಟಿನಲ್ಲಿ ಮುಖ್ಯ ಎಂಜಿನಿಯರ್ ಸೂಚನೆಯಂತೆ ಸಂಸ್ಥೆಯವರು ಕಾಮಗಾರಿ ನಿಲ್ಲಿಸಿದ್ದಾರೆ ಎಂದು ಆಯೋಗವು ಜಿಲ್ಲಾಧಿಕಾರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದೆ.ಪ್ರಾಧಿಕಾರಿದ ಷರತ್ತು ಪಾಲಿಸಿ
ಜಿಲ್ಲಾಧಿಕಾರಿಯು ಈ ಬಗ್ಗೆ ಗಮನ ಹರಿಸಿ ಅಮಾನಿಕೆರೆ ಪುನರುಜ್ಜೀವನ ಕಾಮಗಾರಿ ವೈಜ್ಞಾನಿಕವಾಗಿ ನಡೆಸುವಂತೆ ಸಂಬಂಧಪಟ್ಟ ಇಲಾಖೆಯವರಿಗೆ ಸೂಕ್ತ ನಿರ್ದೇಶನಗಳನ್ನು ನೀಡಬೇಕು. ಕೆರೆ ಸಂರಕ್ಷಣಾ ಪ್ರಾಧಿಕಾರ ಸೂಚಿಸಿದ ಷರತ್ತುಗಳ ಪ್ರಕಾರ ಕಾಮಗಾರಿ ನಡೆಸಲು ನಿರ್ದೇಶಿಸಬೇಕು’ ಎಂದು ಆದೇಶಿಸಿದೆ.ಸುಮಾರು ೨೦ ಕೋಟಿ ರೂ. ಸಿಎಸ್‌ಆರ್ ಅನುದಾನದಲ್ಲಿ ಕಾಮಗಾರಿ ನಡೆಯಲಿದೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಎಷ್ಟು ವೆಚ್ಚ, ಏನೆಲ್ಲಾ ಕಾಮಗಾರಿ ನಡೆದಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಈವರೆಗೆ ನೀಡಿಲ್ಲ. ಇದಲ್ಲದೇ, ಬೈಪಾಸ್ ರಸ್ತೆ ಕಡೆ ಕೆ.ಸಿ.ವ್ಯಾಲಿ ಅನುದಾನದಿಂದಲೂ ಕೋಲಾರಮ್ಮ ಕೆರೆ ಆವರಣದಲ್ಲಿ ಉದ್ಯಾನ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸ ಮಾಡಲಾಗಿದೆ.ಎಂಜಿನಿಯರುಗಳ ನಿರ್ಲಕ್ಷ್ಯ
ಕೋಲಾರಮ್ಮ ಕೆರೆ ಕಾಮಗಾರಿಯಲ್ಲಿ ಎಷ್ಟೊಂದು ಲೋಪವಾಗಿದೆ ಎಂದರೆ ಹೂಳನ್ನೇ ತೆಗೆದು ಕಟ್ಟೆ ಕಟ್ಟಿದ್ದಾರೆ. ಕಾಮಗಾರಿ ವೇಳೆ ಕೋಡಿಯನ್ನೇ ಒಡೆದು ಹಾಕಿದ್ದಾರೆ. ಇದರಿಂದ ಮುಂದೆ ದೊಡ್ಡ ಅಪಾಯದ ಸಾಧ್ಯತೆ ಇದೆ. ಕೆರೆ ಸ್ವರೂಪ ಬದಲಾವಣೆ ಮಾಡುವ ಮುನ್ನ ಜನಪ್ರತಿನಿಧಿಗಳಿಗೆ, ಪರಿಸರವಾದಿಗಳಿಗೆ ಪವರ್ ಪಾಯಿಂಟ್ ಪ್ರೆಜೆಂಟೇಷನ್ ಮಾಡಬೇಕಿತ್ತು. ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್‌ಗಳು ಇದ್ಯಾವ ಕೆಲಸವನ್ನೂ ಮಾಡಿಲ್ಲ. ಮುಂದೆ ಏನಾದರೂ ಅನಾಹುತ ಉಂಟಾದರೆ ಯಾರು ಹೊಣೆ ಎಂದು ಪ್ರಶ್ನಿಸಿದೆ.ಒಂದು ಕಡೆ ಹೊಸ ಕಟ್ಟೆ ನಿರ್ಮಿಸಿ ಎತ್ತರ ಮಾಡಿದ್ದಾರೆ, ಮತ್ತೊಂದು ಕಡೆ ಹಳೆ ಕಟ್ಟೆಗೆ ಮಣ್ಣು ಹಾಕಿ ವಿಸ್ತರಿಸಿದ್ದಾರೆ. ಕಟ್ಟೆ ಮೇಲೆ ರಸ್ತೆ, ಫೆನ್ಸಿಂಗ್ ಮಾಡಲಾಗಿದೆ. ಈವರೆಗೆ ೧೨ ಕೋಟಿ ರು.ಗಳ ಬಿಲ್ ಆಗಿರುವ ಮಾಹಿತಿ ಇದೆ.ಅವೈಜ್ಞಾನಿಕ ಕಾಮಗಾರಿ ಬಗ್ಗೆ ಹಲವಾರು ಬಾರಿ ದೂರು ನೀಡಿದರೂ ಕ್ರಮ ವಹಿಸಲಿಲ್ಲ. ಹೀಗಾಗಿ, ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದೆ. ವಿಚಿತ್ರವೆಂದರೆ ಆಯೋಗವೇ ಪತ್ರ ಬರೆದರೂ ಜಿಲ್ಲಾಡಳಿತ ಕ್ರಮ ವಹಿಸಿಲ್ಲ. ಈ ಬಗ್ಗೆ ಮತ್ತೊಮ್ಮೆ ಜಿಲ್ಲಾಧಿಕಾರಿಗೆ ಪತ್ರ ಬರೆದು ನೆನಪಿಸಿದ್ದೇನೆ ಎಂದು ನಗರಸಭಾ ಸದಸ್ಯ ಎಸ್.ಆರ್.ಮುರಳಿಗೌಡ ವಿವರಿಸಿದ್ದಾರೆ.ವೈಜ್ಞಾನಿಕ ಕಾಮಗಾರಿಗೆ ಆದೇಶ
ಜಿಲ್ಲಾಧಿಕಾರಿಯು ಈ ಬಗ್ಗೆ ಗಮನ ಹರಿಸಿ ಅಮಾನಿಕೆರೆ ಪುನರುಜ್ಜೀವನ ಕಾಮಗಾರಿಯನ್ನು ವೈಜ್ಞಾನಿಕವಾಗಿ ನಡೆಸುವಂತೆ ಸಂಬಂಧಪಟ್ಟ ಇಲಾಖೆಯವರಿಗೆ ಸೂಕ್ತ ನಿರ್ದೇಶನಗಳನ್ನು ನೀಡಬೇಕು. ಕೆರೆ ಸಂರಕ್ಷಣಾ ಪ್ರಾಧಿಕಾರ ಸೂಚಿಸಿದ ಷರತ್ತುಗಳ ಪ್ರಕಾರ ಕಾಮಗಾರಿ ನಡೆಸಲು ನಿರ್ದೇಶಿಸಬೇಕು’ ಎಂದು ರಾಜ್ಯ ಮಾನವ ಹಕ್ಕುಗಳು ಆಯೋಗ ಪತ್ರದಲ್ಲಿ ಆದೇಶಿಸಿದೆ.