ಋತು ರಜೆ ಕೊಡದಿದ್ದರೆ ಕ್ರಮ : ಲಾಡ್‌

| N/A | Published : Oct 12 2025, 10:54 AM IST

Santosh Lad

ಸಾರಾಂಶ

‘ರಾಜ್ಯದಲ್ಲಿ ದುಡಿಯುವ ಮಹಿಳೆಯರಿಗೆ ಋತುಚಕ್ರದ ಸಮಯದಲ್ಲಿ ರಜೆ ನೀಡುವ ನೀತಿಯನ್ನು ಪ್ರತಿಯೊಂದು ಕಂಪೆನಿಯೂ ಪಾಲಿಸಬೇಕು. ಇಲ್ಲದಿದ್ದರೆ ಕಾನೂನು ಪ್ರಕಾರ ಕ್ರಮ ಎದುರಿಸಬೇಕಾಗುತ್ತದೆ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಎಚ್ಚರಿಕೆ ನೀಡಿದ್ದಾರೆ.

  ಬೆಂಗಳೂರು :  ‘ರಾಜ್ಯದಲ್ಲಿ ದುಡಿಯುವ ಮಹಿಳೆಯರಿಗೆ ಋತುಚಕ್ರದ ಸಮಯದಲ್ಲಿ ರಜೆ ನೀಡುವ ನೀತಿಯನ್ನು ಪ್ರತಿಯೊಂದು ಕಂಪೆನಿಯೂ ಪಾಲಿಸಬೇಕು. ಇಲ್ಲದಿದ್ದರೆ ಕಾನೂನು ಪ್ರಕಾರ ಕ್ರಮ ಎದುರಿಸಬೇಕಾಗುತ್ತದೆ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಹೆಣ್ಣು ಮಕ್ಕಳ ಹಿತದೃಷ್ಟಿಯಿಂದ ಸರ್ಕಾರ ಕಾನೂನು ಮಾಡಿದೆ. ಇದಕ್ಕೂ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಸಾಹುಕಾರರ ಹೆಣ್ಣುಮಕ್ಕಳಿಗೆ ಸವಲತ್ತು ಇರುತ್ತದೆ. ದುಡಿಯುವ ವರ್ಗದ ಹೆಣ್ಣುಮಕ್ಕಳ ಕತೆ ಹೇಗೆ? ಹೀಗಾಗಿ ಸರ್ಕಾರ ವರ್ಷಕ್ಕೆ 12 ವೇತನ ಸಹಿತ ರಜೆ ದಿನಗಳನ್ನು ಘೋಷಿಸಿ ನೀತಿ ಮಾಡಿದೆ ಎಂದು ಸಮರ್ಥಿಸಿದರು.

ಇದನ್ನು ಕೇವಲ ಒಂದು ಕಾನೂನು ಎಂಬ ದೃಷ್ಟಿಯಲ್ಲಿ ನೋಡದೆ ಮಾನವೀಯ ದೃಷ್ಟಿಯಿಂದಲೂ ಕಂಪನಿಗಳು ನೋಡಬೇಕು. ಎಲ್ಲ ವರ್ಗಗಳೊಂದಿಗೂ ಚರ್ಚಿಸಿ, ಸಮಾಲೋಚಿಸಿಯೇ ನಿಯಮಗಳನ್ನು ರೂಪಿಸಲಾಗುವುದು. ರಜೆ ನೀತಿ ಜಾರಿ ಸಂಬಂಧ ವಿಧಾನಸಭೆಯಲ್ಲಿ ವಿಧೇಯಕ ಮಂಡಿಸಲಾಗುವುದು. ಇಲ್ಲವೇ ಸುಗ್ರೀವಾಜ್ಞೆ ಮಾಡಲಾಗುವುದು. ಕಂಪನಿಗಳಿಗೆ ಮಹಿಳಾ ಉದ್ಯೋಗಿಗೆ ಋತುಚಕ್ರ ರಜೆ ಕೊಡಬೇಕು ಎಂಬ ಸಾಮಾನ್ಯಜ್ಞಾನ, ಸೂಕ್ಷ್ಮತೆ ಇರಬೇಕು ಎಂದು ಸಂತೋಷ್‌ ಲಾಡ್‌ ಹೇಳಿದರು.

‘ಅಧಿಕಾರ ಹಂಚಿಕೆ ಬಗ್ಗೆ

ಬಹಿರಂಗ ಹೇಳಿಕೆ ಸಲ್ಲ’

ಅಧಿಕಾರ ಹಂಚಿಕೆ ಹಾಗೂ ಸಂಪುಟ ಪುನರ್‌ರಚನೆ ವಿಚಾರವಾಗಿ ಯಾವುದೇ ಶಾಸಕರು, ಸಚಿವರು ಬಹಿರಂಗವಾಗಿ ಮಾತನಾಡುವುದು ಸರಿಯಲ್ಲ. ಇದು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ಸಚಿವ ಸಂತೋಷ್‌ ಲಾಡ್‌ ಹೇಳಿದರು.

ನಾವೇ ಗೊಂದಲ ಸೃಷ್ಟಿ ಮಾಡಬಾರದು. ಏನೇ ಇದ್ದರೂ ಹೈಕಮಾಂಡ್‌ ಬಳಿ ಹೋಗಿ ಹೇಳಲಿ. ಯಾವುದೇ ಶಾಸಕರು, ಮಂತ್ರಿಗಳು ಬಹಿರಂಗವಾಗಿ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ.

Read more Articles on