ಸಾರಾಂಶ
ಪ್ರಿಯತಮನೊಂದಿಗೆ ಮಗಳು ಓಡಿ ಹೋಗಿದ್ದರಿಂದ ಆಕ್ರೋಶಗೊಂಡ ತಂದೆ, ಮಗಳ ತಿಥಿ ಮಾಡಿದ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ನಾಗರಾಳ ಗ್ರಾಮದಲ್ಲಿ ನಡೆದಿದೆ.
ಚಿಕ್ಕೋಡಿ : ಪ್ರಿಯತಮನೊಂದಿಗೆ ಮಗಳು ಓಡಿ ಹೋಗಿದ್ದರಿಂದ ಆಕ್ರೋಶಗೊಂಡ ತಂದೆ, ಮಗಳ ತಿಥಿ ಮಾಡಿದ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ನಾಗರಾಳ ಗ್ರಾಮದಲ್ಲಿ ನಡೆದಿದೆ.
ರಾಯಬಾಗ ತಾಲೂಕಿನ ನಾಗರಾಳ ಗ್ರಾಮದ ಯುವತಿ , ಅದೇ ಗ್ರಾಮದ ಯುವಕನನ್ನು ಪ್ರೀತಿಸುತ್ತಿದ್ದು, ಆತನೊಂದಿಗೆ ಓಡಿಹೋಗಿದ್ದಳು. ಯುವಕ ತಹಸೀಲ್ದಾರ್ ಕಚೇರಿಯಲ್ಲಿ ಗ್ರಾಮ ಸೇವಕನಾಗಿ ಕೆಲಸ ಮಾಡುತ್ತಿದ್ದ. ಈ ಸಂಬಂಧ ಯುವತಿಯ ತಂದೆ ರಾಯಬಾಗ ಪೊಲೀಸ್ ಠಾಣೆಯಲ್ಲಿ ಮಗಳು ನಾಪತ್ತೆಯಾದ ಬಗ್ಗೆ ದೂರು ಕೊಟ್ಟಿದ್ದರು. ಆದರೆ, ಆಕೆ ಸ್ವ ಇಚ್ಛೆಯಿಂದ ಆತನೊಂದಿಗೆ ಹೋಗಿರುವುದು ವಿಚಾರಣೆ ವೇಳೆ ತಿಳಿದು ಬಂತು. ತಂದೆ-ತಾಯಿಯ ನಾಲ್ಕು ಜನ ಹೆಣ್ಣುಮಕ್ಕಳ ಪೈಕಿ ಸುಶ್ಮಿತಾ ಕೊನೆಯವಳು. ಇದರಿಂದ ಮನನೊಂದ ತಂದೆ, ನಾಗರಾಳ ಗ್ರಾಮದಲ್ಲಿ ಹೆತ್ತ ಮಗಳಿಗೆ ಶ್ರಾದ್ಧ ಮಾಡಿ, ಊರವರಿಗೆ ಊಟ ಹಾಕಿಸಿ, ನನ್ನ ಮಗಳು ನಮ್ಮ ಪಾಲಿಗೆ ಸತ್ತಿದ್ದಾಳೆ ಎಂದು ಕರುಳ ಬಳ್ಳಿಯ ಸಂಬಂಧ ಕತ್ತರಿಸಿಕೊಂಡಿದ್ದಾರೆ.