ಕನ್ನಡಪ್ರಭ ವಾರ್ತೆ ಅಥಣಿ ಮದುವೆಯ ಸಂಪ್ರದಾಯದ ವಿಧಿವಿಧಾನಗಳ ಮಧ್ಯ ಸಪ್ತಪದಿ ತುಳಿದ ನವಜೋಡಿಯೊಂದು ಸಾರ್ವಜನಿಕವಾಗಿ ತಮ್ಮ ಅಂಗಾಂಗ ದಾನದ ಪ್ರತಿಜ್ಞೆ ಮಾಡಿ ಗಮನ ಸೆಳೆದರು. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಸಿದ್ದೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಮದುವೆಯಲ್ಲಿ ನವದಂಪತಿ ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾಡಿದ್ದಾರೆ.ಅಥಣಿ ತಾಲೂಕಿನ ಕೊಕಟನೂರು ಗ್ರಾಮದ ವಾಗೇಶ ಕಾಡದೇವರಮಠ ಮತ್ತು ಕೋಮಲ ಹಿರೇಮಠ ವಿವಾಹ ಸಮಾರಂಭ ಬುಧವಾರ ಸಂಪ್ರದಾಯದಂತೆ ಜರುಗಿತು.

ಕನ್ನಡಪ್ರಭ ವಾರ್ತೆ ಅಥಣಿ

ಮದುವೆಯ ಸಂಪ್ರದಾಯದ ವಿಧಿವಿಧಾನಗಳ ಮಧ್ಯ ಸಪ್ತಪದಿ ತುಳಿದ ನವಜೋಡಿಯೊಂದು ಸಾರ್ವಜನಿಕವಾಗಿ ತಮ್ಮ ಅಂಗಾಂಗ ದಾನದ ಪ್ರತಿಜ್ಞೆ ಮಾಡಿ ಗಮನ ಸೆಳೆದರು. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಸಿದ್ದೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಮದುವೆಯಲ್ಲಿ ನವದಂಪತಿ ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾಡಿದ್ದಾರೆ.ಅಥಣಿ ತಾಲೂಕಿನ ಕೊಕಟನೂರು ಗ್ರಾಮದ ವಾಗೇಶ ಕಾಡದೇವರಮಠ ಮತ್ತು ಕೋಮಲ ಹಿರೇಮಠ ವಿವಾಹ ಸಮಾರಂಭ ಬುಧವಾರ ಸಂಪ್ರದಾಯದಂತೆ ಜರುಗಿತು. ನವ ಜೋಡಿಗೆ ಅಕ್ಷತೆ ಹಾಕಿ ಶುಭ ಹಾರೈಸಲು ಬಂದ ಜನರ ಸಾಕ್ಷಿಯಾಗಿ ಈ ಜೋಡಿ ಸಮಾನ ಆಸಕ್ತಿಯಿಂದ ಈ ದೇಹ ತ್ಯಾಗದ ನಂತರ ಕೊಳೆತು ಹೋಗುವ ಅಂಗಾಂಗಗಳು ಮತ್ತೊಬ್ಬರ ಜೀವ ಉಳಿಸಲಿ ಎಂದು ಮಾನವೀಯ ಸಂದೇಶವನ್ನು ಸಾರಿದರು. ಈ ಮೂಲಕ ನವ ದಂಪತಿ ಯುವ ಜನಾಂಗಕ್ಕೆ ಪ್ರೇರಣೆಯಾದರು. ಅಂಗಾಂಗ ದಾನದ ಜೊತೆಗೆ ನಮ್ಮ ಸುತ್ತಮುತ್ತಲಿನ ಪರಿಸರ ಸಂರಕ್ಷಣೆ, ಸಾವಯವ ಕೃಷಿ, ಸ್ವದೇಶಿ ವಸ್ತುಗಳ ಬಳಕೆಗೆ ಆದ್ಯತೆ ನೀಡಬೇಕು ಎಂಬ ಸಮಾಜಮುಖಿ ಚಿಂತನೆಯನ್ನೂ ಮದುವೆಯಲ್ಲಿ ವ್ಯಕ್ತಪಡಿಸಿದರು.

ನವ ಜೋಡಿಯ ನಿರ್ಧಾರಕ್ಕೆ ಮದುವೆ ಸಮಾರಂಭದಲ್ಲಿ ಹಾಜರಿದ್ದ ಅನೇಕ ಪೂಜ್ಯರು ಮತ್ತು ಗಣ್ಯರು ಪ್ರಶಂಸೆ ವ್ಯಕ್ತಪಡಿಸಿ, ಇದು ಕೇವಲ ಮದುವೆಯಲ್ಲ, ನವ ಜೋಡಿ ಸಮಾಜಮುಖಿ ಸೇವೆಯಲ್ಲಿ ಸಮಾನ ಆಸಕ್ತಿ ಹೊಂದುವ ಮೂಲಕ ಸಮಾಜಕ್ಕೆ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಸಂಭ್ರಮದ ನಡುವೆ ಮಾನವೀಯ ಮೌಲ್ಯ ಮೆರೆದ ಈ ಮದುವೆ ಅಥಣಿಯ ಜನರ ಮನದಲ್ಲಿ ವಿಶೇಷ ಸ್ಥಾನ ಪಡೆಯಿತು. ದೇಹದ ಅಂಗಾಂಗಗಳನ್ನು ದಾನ ಮಾಡುವ ಜನಜಾಗೃತಿಯ ಆಂದೋಲನಕ್ಕೆ ಈ ಮದುವೆ ವೇದಿಕೆ ಸಾಕ್ಷಿಯಾಗಿದ್ದು ವಿಶೇಷವಾಗಿತ್ತು.