ಕನ್ನಡಪ್ರಭ ವಾರ್ತೆ ಕುಂದಾಪುರ
ಬಸ್ಸು ನಿಲ್ದಾಣದ ಬಳಿಯಲ್ಲಿ ಪಂಪ್ ಹೌಸ್ ನಿರ್ಮಾಣಕ್ಕೆ ಮುಂದಾದಾಗ ಉಂಟಾದ ಸಮಸ್ಯೆಯನ್ನು ಪರಿಹರಿಸಲು ಅಂದಿನ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳೇ ಸ್ಥಳಕ್ಕೆ ಬರಬೇಕಾದ ಪರಿಸ್ಥಿತಿ ಬಂದೊದಗಿತ್ತು. ಒಳಚರಂಡಿ ನಿರ್ವಹಣೆಯನ್ನು ದೇವಸ್ಥಾನದವರು ನಿರ್ವಹಿಸಬೇಕೇ ಅಥವಾ ಗ್ರಾ.ಪಂ ಯಿಂದ ನಿರ್ವಹಿಸಬೇಕೆ ಎನ್ನುವ ಬಗ್ಗೆ ಇನ್ನೂ ಶಾಶ್ವತ ಪರಿಹಾರಗಳು ಸಿಕ್ಕಿಲ್ಲ. ಸಮಸ್ಯೆ ಇದೇ ಮೊದಲಲ್ಲ!:ಕೆಲ ಸಮಯದ ಹಿಂದೆ ಪುಣ್ಯ ನದಿ ಕಾಶಿ ತೀರ್ಥಕ್ಕೆ ತೆರಳುವ ದಾರಿಯಲ್ಲಿ ಒಳಚರಂಡಿಗಾಗಿ ನಿರ್ಮಿಸಲಾಗಿದ್ದ ಚೇಂಬರ್ ನಿಂದ ಉಕ್ಕಿ ಹರಿದ ಕಲ್ಮಶಯಕ್ತ ನೀರು ಪರಿಸರದ ಮನೆಯಂಗಳ, ಬಾವಿಗಳನ್ನು ಸೇರಿ ದೊಡ್ಡ ಮಟ್ಟದಲ್ಲಿ ಸ್ಥಳೀಯರ ಆಕ್ರೋಶವನ್ನು ಕಾರಣವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗಿದ್ದ ಈ ಸುದ್ದಿಯನ್ನು ನೋಡಿದ ಅಂದಿನ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಹಾಗೂ ಜಿಲ್ಲಾಧಿಕಾರಿ ಕೂಡಲೇ ಸಮಸ್ಯೆ ಪರಿಹಾರಕ್ಕೆ ಸೂಚಿಸಿದ್ದರಿಂದ ತಾತ್ಕಾಲಿಕವಾಗಿ ಸಮಸ್ಯೆ ಬಗೆಹರಿಸಲಾಗಿತ್ತು.
ದುರ್ನಾತ ಹರಡಿದೆ: ಕೊಲ್ಲೂರಿನ ಇತಿಹಾಸ ಪ್ರಸಿದ್ಧ ಸಂಪ್ರೆ ಗಣಪತಿ ದೇವಸ್ಥಾನಕ್ಕೆ ತೆರಳುವ ಭಕ್ತರು ಪುಣ್ಯ ನದಿ ಸೌಪರ್ಣಿಕೆಯಲ್ಲಿ ಸ್ನಾನ ಮಾಡಿ ಶುಚಿರ್ಭೂತರಾಗಿ ಗಣಪತಿ ದೇವಸ್ಥಾನ ಪ್ರವೇಶಿಸುವುದು ವಾಡಿಕೆ. ದೇವಸ್ಥಾನಕ್ಕೆ ತೆರಳುವ ದಾರಿಯಲ್ಲಿರುವ ಒಳಚರಂಡಿ ಯೋಜನೆಯ ಚೇಂಬರ್ ನಿಂದ ಕಶ್ಮಲಯುಕ್ತ ಹೊಲಸು ನೀರು ಹರಿದು ದೇವಸ್ಥಾನ ಮುಂಭಾಗದಲ್ಲಿ ಹರಿದ ಪರಿಣಾಮ ದೇವಸ್ಥಾನದ ಆವರಣವೆಲ್ಲಾ ಗಬ್ಬೆದ್ದು ನಾರುತ್ತಿದೆ. ಇದರಿಂದಾಗಿ ದೇಗುಲಕ್ಕೆ ತೆರಳುವ ಭಕ್ತರು ಹೊಲಸು ನೀರನ್ನೇ ಮೆಟ್ಟಿಕೊಂಡು ದೇವಸ್ಥಾನ ಪ್ರವೇಶಿಸಬೇಕಾದ ಸ್ಥಿತಿ ಬಂದಿರುವುದರಿಂದ ಸ್ಥಳೀಯರು ಆಡಳಿತದ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಕೊಲ್ಲೂರಿಗೆ ಬಹು ಉಪಯೋಗವಾಗುತ್ತದೆ ಎನ್ನುವ ನಿರೀಕ್ಷೆ ಇದ್ದ ಒಳಚರಂಡಿ ಯೋಜನೆ ಒಂದಲ್ಲ ಒಂದು ರೀತಿಯಿಂದ ಸ್ಥಳೀಯರಿಗೆ ಬಾಧಕವಾಗುತ್ತಿದೆ. ಪುಣ್ಯ ತೀರ್ಥ ಹರಿಯುವ ಸ್ಥಳದಲ್ಲಿ ಕೊಳಚೆ ನೀರು ಹರಿಯುತ್ತಿರುವ ದುಃಸ್ಥಿತಿ ಬಂದಿರುವುದು ಖೇದಕರ.-ಹರೀಶ್ ತೋಳಾರ್ ಕೊಲ್ಲೂರು, ಸಾಮಾಜಿಕ ಕಾರ್ಯಕರ್ತ.