ಕುಂದಾಪುರ: ಬದುಕಿನಲ್ಲಿ ಗಳಿಸಿದ್ದೆಲ್ಲವನ್ನು ಅನುಭವಿಸುತ್ತೇನೆ ಎನ್ನುವುದು ಭ್ರಮೆ. ಅವರವರ ಯೋಗ, ಫಲಗಳಿಗೆ ಅನುಗುಣವಾಗಿ ಮಾತ್ರ ಗಳಿಸಿದ್ದನ್ನು ಪಡೆದುಕೊಳ್ಳಲು ಸಾಧ್ಯ. ಭಕ್ತಿ ಮತ್ತು ಭಾವನೆಗಳು ಸಮ್ಮಿಲನವಾದಾಗ ನಂಬಿಕೆಗಳು ಜಾಗೃತವಾಗುತ್ತವೆ, ಧಾರ್ಮಿಕ ಶ್ರದ್ಧೆ ಉದ್ದೀಪನವಾಗುತ್ತವೆ ಎಂದು ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದ್ದಾರೆ.
ಜಗತ್ತಿನಲ್ಲಿ ಯಾವುದೇ ಕಾರ್‍ಯವಾಗಬೇಕಾದರೂ ಅದರಲ್ಲಿ ಅಗೋಚರ ಶಕ್ತಿಯೊಂದರ ಅನುಗ್ರಹವಿರಬೇಕು. ಜಗನ್ಮಾತೆಯ ಆರಾಧನೆಯಿಂದ ಅಭೀಷ್ಟಗಳು ನೆರವೇರುತ್ತವೆ. ಶೃಂಗೇರಿಯ ಶ್ರೀ ಮಠಕ್ಕೂ ಕೊಲ್ಲೂರು ಶ್ರೀ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧಗಳಿವೆ. ಕೊಲ್ಲೂರು ಕ್ಷೇತ್ರದ ಉಗಮಕ್ಕೆ ಕಾರಣೀಭೂತರಾದ ಕೋಲ ಮಹರ್ಷಿ ಮತ್ತು ಶ್ರೀ ಕ್ಷೇತ್ರದ ಧಾರ್ಮಿಕ ಶ್ರದ್ಧೆಯನ್ನು ಸಂಪನ್ನಗೊಳಿಸಿದ ಶ್ರೀ ಶಂಕರ ಭಗವತ್ಪಾದರ ಮೂರ್ತಿ ಸ್ಥಾಪನೆ ಮೂಲಕ ಶ್ರೀ ದೇವಿಯ ಓಲಗ ಮಂಟಪದ ವೈಭವ ಇನ್ನಷ್ಟು ಹೆಚ್ಚಾಗಿದೆ. ಇದನ್ನು ಸೇವಾರೂಪವಾಗಿ ನೀಡಿರುವ ಮಹಾಲಿಂಗ ನಾಯ್ಕ್ ಕುಟುಂಬಿಕರು ದೇವರ ಅನುಗ್ರಹಕ್ಕೆ ಪಾತ್ರರಾಗುತ್ತಾರೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೊಲ್ಲೂರು ಕ್ಷೇತ್ರದ ಅರ್ಚಕ ಕೆ.ಎನ್. ಸುಬ್ರಹ್ಮಣ್ಯ ಅಡಿಗ, ಕೊಲ್ಲೂರಿನ ಶ್ರೀ ಮೂಕಾಂಬಿಕಾ ಅಮ್ಮನವರು ವಿಶೇಷ ಉತ್ಸವಗಳಲ್ಲಿ ವಿರಾಜಮಾನರಾಗುವ ಓಲಗ ಮಂಟಪವನ್ನು ಶಿಲೆಗಳಿಂದ ಪುನರ್ ನಿರ್ಮಾಣ ಮಾಡುವ ಮೂಲಕ ಮಹಾಲಿಂಗ ನಾಯ್ಕ್ ಕುಟುಂಬಿಕರು ಭಕ್ತಿಯ ಸೇವೆಯನ್ನು ಜಗನ್ಮಾತೆಗೆ ಅರ್ಪಿಸಿದ್ದಾರೆ ಎಂದರು.ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ಬಾಬು ಶೆಟ್ಟಿ ತಗ್ಗರ್ಸೆ, ಶೃಂಗೇರಿ ಪೀಠದ ಪ್ರಾಂತೀಯ ಧರ್ಮಾಧಿಕಾರಿ ಲೋಕೇಶ ಅಡಿಗ ಬಡಾಕೆರೆ, ಶೃಂಗೇರಿ ಪೀಠದ ಶಮಂತ್ ಭಟ್, ಕಾರ್‍ಯನಿರ್ವಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಡಾ. ಪಿ.ವಿ. ಅಭಿಲಾಷ್, ಯು. ರಾಜೇಶ್ ಕಾರಂತ, ರಘುರಾಮ ದೇವಾಡಿಗ ಆಲೂರು, ಸುರೇಂದ್ರ ಶೆಟ್ಟಿ, ಧನಾಕ್ಷಿ ವಿ. ಪೂಜಾರಿ, ಶ್ರೀ ಕ್ಷೇತ್ರ ಕೊಲ್ಲೂರಿನ ಹಿರಿಯ ಅರ್ಚಕ ಎನ್. ನರಸಿಂಹ ಅಡಿಗ, ಶ್ರೀಧರ ಅಡಿಗ, ರಾಮಚಂದ್ರ ಅಡಿಗ, ಕಾಳಿದಾಸ ಭಟ್, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರಾದ ವಂಡಬಳ್ಳಿ ಜಯರಾಮ ಶೆಟ್ಟಿ, ಡಾ. ಅತುಲ್ ಕುಮಾರ್ ಶೆಟ್ಟಿ, ರಮೇಶ್ ಗಾಣಿಗ ಕೊಲ್ಲೂರು, ಉದ್ಯಮಿಗಳಾದ ಕೃಷ್ಣಮೂರ್ತಿ ತೀರ್ಥಹಳ್ಳಿ, ನಿತೀಶ್ ಬಾಯ್ ಗಾಂಧಿ ಸೂರತ್, ಭೋಜ ನಾಯ್ಕ್, ನಾರಾಯಣ ನಾಯ್ಕ್ ಬ್ರಹ್ಮೇರಿ, ಚಂದ್ರಶೇಖರ ನಾಯ್ಕ್ ಸೆಳ್ಕೋಡು, ಉಪನ್ಯಾಸಕ ಉದಯ ನಾಯ್ಕ್ ಇದ್ದರು.ಪತ್ರಕರ್ತ ರಾಜೇಶ್ ಕೆ.ಸಿ. ನಿರೂಪಿಸಿದರು. ಜಗದ್ಗುರು ಶಂಕರಾಚಾರ್ಯ ಜಯೇಂದ್ರ ಸರಸ್ವತಿ ವೇದ ಪಾಠ ಶಾಲೆಯ ವಿದ್ಯಾರ್ಥಿಗಳು ವೇದಘೋಷ ಪಠಿಸಿದರು.ಓಲಗ ಮಂಟಪದ ಸೇವಾಕರ್ತರಾದ ಮಹಾಲಿಂಗ ನಾಯ್ಕ್ ಮತ್ತು ಮಲ್ಲಿಕಾ ಎಂ. ನಾಯ್ಕ್ ದಂಪತಿಯನ್ನು ಶ್ರೀ ಕ್ಷೇತ್ರ ಕೊಲ್ಲೂರಿನ ವತಿಯಿಂದ ಜಗದ್ಗುರುಗಳು ಗೌರವಿಸಿದರು.