ಕೊಲ್ಲೂರು: ಗುಡ್ಡ ಕುಸಿದು ಮಹಿಳೆ ಸಾವು

KannadaprabhaNewsNetwork | Published : Jul 5, 2024 12:50 AM

ಸಾರಾಂಶ

ಮನೆ ಕೆಲಸ ಮುಗಿಸಿ ಊಟ ಮಾಡಿ ಸಂಜೆ 3.15ರ ವೇಳೆಗೆ ಮನೆಯ ಹಿಂಭಾಗಕ್ಕೆ ತೆರಳಿದ್ದ ವೇಳೆ ಅಂದಾಜು 60 ಅಡಿ ಎತ್ತರದ ಗುಡ್ಡ ಕುಸಿದು ಮಣ್ಣಿನ ರಾಶಿಯಲ್ಲಿ ಹೂತು ಹೋಗಿದ್ದರು.

ಕನ್ನಡಪ್ರಭ ವಾರ್ತೆ ಕುಂದಾಪುರಕಳೆದ ರಾತ್ರಿಯಿಂದ ಧಾರಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮನೆ ಸಮೀಪದಲ್ಲಿನ ಗುಡ್ಡ ಕುಸಿದು ಮಹಿಳೆಯೋರ್ವರು ಸಾವನ್ನಪ್ಪಿದ ದಾರುಣ ಘಟನೆ ಕೊಲ್ಲೂರು ಸಮೀಪದ ಸೊಸೈಟಿ ಗುಡ್ಡೆ ಎಂಬಲ್ಲಿ ಗುರುವಾರ ಸಂಜೆ ನಡೆಡಿದೆ.ಹಳ್ಳಿಬೇರು ಗ್ರಾಮದ ಪುಟ್ಟ ಎಂಬವರ ಪತ್ನಿ ಅಂಬಾ (48) ಮೃತ ಮಹಿಳೆ.

ಕೊಲ್ಲೂರಿನಿಂದ ಕೊಡಚಾದ್ರಿಗೆ ಹೋಗುವ ದಾರಿಯಲ್ಲಿ ಸೊಸೈಟಿ ಗುಡ್ಡೆ ಎಂಬಲ್ಲಿ ಇರುವ ಕೊಲ್ಲೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿಶ್ವನಾಥ ಅಡಿಗ ಎಂಬವರ ಮನೆಗೆ ಸಮೀಪದ ಹಳ್ಳಿ ಬೇರು ಗ್ರಾಮದ ಪುಟ್ಟ ಎನ್ನುವವರ ಪತ್ನಿ ಅಂಬಾ ಮನೆಕೆಲಸಕ್ಕೆ ಬರುತ್ತಿದ್ದರು. ಗುರುವಾರವೂ ಮನೆ ಕೆಲಸ ಮುಗಿಸಿ ಊಟ ಮಾಡಿ ಸಂಜೆ 3.15ರ ವೇಳೆಗೆ ಮನೆಯ ಹಿಂಭಾಗಕ್ಕೆ ತೆರಳಿದ್ದ ವೇಳೆ ಅಂದಾಜು 60 ಅಡಿ ಎತ್ತರದ ಗುಡ್ಡ ಕುಸಿದು ಮಣ್ಣಿನ ರಾಶಿಯಲ್ಲಿ ಹೂತು ಹೋಗಿದ್ದರು.

ವಿಷಯ ತಿಳಿದ ಕೊಲ್ಲೂರಿನ ಟ್ಯಾಕ್ಸಿ ಹಾಗೂ ಜೀಪ್ ಚಾಲಕ ಅಸೋಸಿಯೇಶನ್ ಸದಸ್ಯರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಕ್ಕೆ ಮುಂದಾದರು. ಸಂಘ ಸದಸ್ಯ ಡ್ರೈವರ್ ಅನಿ ಅವರ ಪ್ರಯತ್ನದಿಂದ ಮಹಿಳೆಯನ್ನು ರಕ್ಷಣೆ ಮಾಡಿ, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಯಾವುದೇ ಪ್ರಯೋಜನವಾಗಿಲ್ಲ. ಮೃತ ಮಹಿಳೆ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಘಟನಾ ಸ್ಥಳಕ್ಕೆ ಕುಂದಾಪುರದ ಉಪ ವಿಭಾಗಾಧಿಕಾರಿ ರಶ್ಮೀ ಎಸ್.ಆರ್., ಡಿವೈಎಸ್ಪಿ ಕೆ.ಯು.ಬೆಳ್ಳಿಯಪ್ಪ, ಬೈಂದೂರು ಸರ್ಕಲ್ ಇನ್‌ಸ್ಪೆಕ್ಟರ್‌ ಸವಿತ್ರತೇಜ್, ತಹಸೀಲ್ದಾರ್ ಪ್ರದೀಪ್, ಕೊಲ್ಲೂರು ಠಾಣಾಧಿಕಾರಿ ಜಯಶ್ರೀ ಭೇಟಿ ನೀಡಿದ್ದಾರೆ.

----------

ಕಮಲಶಿಲೆ ಬ್ರಾಹ್ಮಿ ದುರ್ಗೆಯ ಪಾದ ತೊಳೆದ ಕುಬ್ಜೆ!ಬುಧವಾರ ರಾತ್ರಿಯಿಡೀ ಸುರಿದ ಭಾರಿ ಮಳೆಗೆ ಇತಿಹಾಸ ಪ್ರಸಿದ್ಧ ಕಮಲಶಿಲೆ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕುಬ್ಜಾ ನದಿಯ ನೀರು ನುಗ್ಗಿದೆ. ಪ್ರತಿ ಬಾರಿಯ ಮಳೆಗಾಲದಲ್ಲಿ ಉಕ್ಕೇರುವ ಕುಬ್ಜಾ ನದಿಯ ನೀರು ಕಮಲಶಿಲೆಯ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನವನ್ನು ಪ್ರವೇಶಿಸಿ, ಗರ್ಭಗುಡಿಯವರೆಗೂ ಸಾಗಿ, ಬ್ರಾಹ್ಮೀ ದುರ್ಗೆಯನ್ನು ತೋಯಿಸುವುದು ವಾಡಿಕೆ. ಈ ಬಾರಿಯೂ ಬುಧವಾರ ತಡರಾತ್ರಿ ಸುಮಾರು ೧.೩೦ರ ವೇಳೆಯಲ್ಲಿ ಕುಬ್ಜೆ ಉಕ್ಕಿ ಬಂದು ತಾಯಿ ದುರ್ಗೆಯನ್ನು ತೋಯಿಸಿದ್ದಾಳೆ.ಪ್ರತಿ ವರ್ಷದ ವಾಡಿಕೆಯಂತೆ ಕುಬ್ಜೆಯ ಆಗಮನಕ್ಕಾಗಿ ಕೆಲ ದಿನಗಳಿಂದ ಕ್ಷಣಗಣನೆ ಮಾಡುತ್ತಿದ್ದ ದೇಗುಲದ ಆಡಳಿತ ಮಂಡಳಿ, ಅರ್ಚಕರು ಹಾಗೂ ಭಕ್ತರು, ಬುಧವಾರ ರಾತ್ರಿ ವರೆಗೂ ಕುಬ್ಜಾ ನದಿಯ ಮಟ್ಟವನ್ನು ಗಮನಿಸಿಕೊಂಡೇ ಮನೆಗೆ ಹೋಗಿದ್ದರು. ತಡರಾತ್ರಿ ಸುರಿದ ಮಳೆಯಿಂದಾಗಿ ನದಿಯ ನೀರು ದೇಗುಲದ ಪ್ರಾಂಗಣವನ್ನು ದಾಟಿದ ಬಳಿಕ ಗರ್ಭಗುಡಿಯನ್ನು ಪ್ರವೇಶಿಸಿ ಬ್ರಾಹ್ಮೀ ದುರ್ಗಾಪರಮೇಶ್ವರಿಗೆ ಪುಣ್ಯ ಸ್ನಾನದ ಅಭಿಷೇಕವನ್ನು ನೆರವೇರಿಸಿದೆ.ದೇವಸ್ಥಾನಕ್ಕೆ ನೀರು ಬಂತು ಎನ್ನುವ ಮಾಹಿತಿ ಪಡೆದುಕೊಂಡ ಆಸು-ಪಾಸಿನ ನೂರಾರು ಭಕ್ತರು ತಡರಾತ್ರಿಯಲ್ಲಿಯೇ ದೇಗುಲಕ್ಕೆ ಆಗಮಿಸಿ, ಜಗನ್ಮಾತೆಯೊಂದಿಗೆ ಪುಣ್ಯ ಸ್ನಾನದ ಧನ್ಯತೆಯನ್ನು ಅನುಭವಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣಾನಂದ ಐತಾಳ್ ಅವರು ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಿ ಆಡಳಿತ ಮೊಕ್ತೇಸರರಾದ ಎಸ್.ಸಚ್ಚಿದಾನಂದ ಚಾತ್ರ ಅವರಿಗೆ ಪ್ರಸಾದ ವಿತರಿಸಿದರು. ಜೊತೆ ಮೊಕ್ತೇಸರರಾದ ಚಂದ್ರಶೇಖರ ಶೆಟ್ಟಿ ಹೆನ್ನಬೈಲ್ ಇದ್ದರು.* ಪುಣ್ಯ ಕ್ಷಣ ಅನುಭವಿಸಿದ ಭಕ್ತರುಘಟ್ಟದ ಮೇಲೆ ಮಳೆಯ ಪ್ರಭಾವ ಹೆಚ್ಚಾದಲ್ಲಿ ಹಾಗೂ ಯಡಮೊಗೆ ಭಾಗದಲ್ಲಿ ಮಳೆಯ ಪ್ರಮಾಣ ತೀವ್ರವಾದಾಗ ಉಕ್ಕೇರುವ ಕುಬ್ಜಾ ನದಿಯ ನೀರು ದೇವಸ್ಥಾನದ ಪ್ರಾಂಗಣವನ್ನು ದಾಟಿ, ಗರ್ಭಗುಡಿಯನ್ನು ಪ್ರವೇಶಿಸಿ ಬ್ರಾಹ್ಮೀ ದುರ್ಗೆಯ ಪಾದ ತೋಯಿಸುವ ಅಮೃತ ಘಳಿಗೆಗಾಗಿ ಕಾಯುತ್ತಿರುವ ಆಸು-ಪಾಸಿನ ಊರಿನವರು ಹಾಗೂ ಕ್ಷೇತ್ರದ ಭಕ್ತರು ಮಾಹಿತಿಯನ್ನು ಪಡೆದುಕೊಂಡು ದೇವಸ್ಥಾನಕ್ಕೆ ದೌಡಾಯಿಸುತ್ತಾರೆ ಹಾಗೂ ತುಂಬಿದ ಕುಬ್ಜೆಯ ನೀರಿನಲ್ಲಿ ಭಕ್ತಿಯಿಂದ ಮಿಂದೇಳುತ್ತಾರೆ. ಕಮಲಶಿಲೆ, ಹಳ್ಳಿಹೊಳೆ, ಆಜ್ರಿ, ಸಿದ್ದಾಪುರ, ಅಂಪಾರು, ಶಾನ್ಕಟ್ಟು ಪರಿಸರದ ಗ್ರಾಮಸ್ಥರಲ್ಲದೆ, ಕುಂದಾಪುರ ಭಾಗದಿಂದಲೂ ದೊಡ್ಡ ಸಂಖ್ಯೆಯ ಭಕ್ತರು ಆಗಮಿಸಿ ಈ ಪುಣ್ಯ ಕ್ಷಣದಲ್ಲಿ ಭಾಗಿಯಾಗುತ್ತಾರೆ.

Share this article