ಸಿದ್ಧಾಂತಕ್ಕೆ ಬದ್ಧರಾಗಿದ್ದ ಕೋಣಂದೂರು ಲಿಂಗಪ್ಪ: ಜ್ಞಾನೇಂದ್ರ

KannadaprabhaNewsNetwork |  
Published : Feb 26, 2024, 01:31 AM IST
ಫೋಟೋ 25 ಟಿಟಿಎಚ್ 01: ಮಾಜಿ ಶಾಸಕ ಕೋಣಂದೂರು ಲಿಂಗಪ್ಪನವರಿಗೆ 90 ನೇ ವರ್ಷದ ಅಭಿನಂದನೆ ಮತ್ತು ಸಾಹಿತಿ ಡಾ.ಜೆ.ಕೆ.ರಮೇಶ್ ಸಂಪಾದಿಸಿದ ಕೋಲಿಂ ಎಂಬ ಕೌತುಕ ಅಭಿನಂದನಾ ಗ್ರಂಥದ ದ್ವಿತೀಯ ಆವೃತ್ತಿಯ ಬಿಡುಗಡೆ ಪಟ್ಟಣದಲ್ಲಿ ನಡೆಯಿತು. ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಗ್ರಂಥ ಬಿಡುಗಡೆ ಮಾಡಿದರು. ವೇದಿಕೆಯಲ್ಲಿ ಕಸಾಪ ತಾಲೂಕು ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ, ಕಲ್ಗದ್ದೆ ರತ್ನಾಕರ್ ಇದ್ದರು. | Kannada Prabha

ಸಾರಾಂಶ

ರಾಜಕೀಯ ಕ್ಷೇತ್ರದಲ್ಲಿ ಸಿದ್ಧಾಂತ ಇಸಂ ಮುಂತಾದ ಎಲ್ಲ ಶಬ್ದಗಳು ಭಾಷಣಕ್ಕೆ ಸೀಮಿತವಾಗಿವೆ. ಸಮಾಜವಾದಿ ಧುರೀಣ ಶಾಂತವೇರಿ ಗೋಪಾಲಗೌಡರಂತೆ ಕೋಣಂದೂರು ಲಿಂಗಪ್ಪ ಕೂಡ ತಾವು ನಂಬಿದ ಸಿದ್ಧಾಂತಕ್ಕೆ ಬದ್ಧರಾಗಿದ್ದವರು. ಈ ಹಿಂದೆ ರಾಜಕೀಯ ಕ್ಷೇತ್ರದಲ್ಲಿ ಬಡವರ ಪರ ಅಭ್ಯರ್ಥಿ ಎಂಬ ಮಾತಿತ್ತು. ಪ್ರಸ್ತುತ ಚುನಾವಣೆ ಮಾಡುವ ತಾಕತ್ತು ಇದೆಯೇ ಎಂಬಂತ ಸ್ಥಿತಿ ನಿರ್ಮಾಣವಾಗಿದೆ. ಲಿಂಗಪ್ಪ ಅವರು ಬಿಟ್ಟ ಜಾಗಕ್ಕೆ ನಾವು ಬಂದವರು. ಆ ಸಂದರ್ಭದಲ್ಲಿ ಅವರು ಆಕ್ಟೀವ್ ಆಗಿದ್ದರೆ ನಮಗೆ ಅವಕಾಶವೇ ಇರುತ್ತಿರಲಿಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ತೀರ್ಥಹಳ್ಳಿಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ ರಾಜಕೀಯ ಕ್ಷೇತ್ರದಲ್ಲಿ ಸಿದ್ಧಾಂತ ಇಸಂ ಮುಂತಾದ ಎಲ್ಲ ಶಬ್ದಗಳು ಭಾಷಣಕ್ಕೆ ಸೀಮಿತವಾಗಿವೆ. ಸಮಾಜವಾದಿ ಧುರೀಣ ಶಾಂತವೇರಿ ಗೋಪಾಲಗೌಡರಂತೆ ಕೋಣಂದೂರು ಲಿಂಗಪ್ಪ ಕೂಡ ತಾವು ನಂಬಿದ ಸಿದ್ಧಾಂತಕ್ಕೆ ಬದ್ಧರಾಗಿದ್ದವರು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಪಟ್ಟಣದ ಕನ್ನಡ ಭವನದಲ್ಲಿ ಶನಿವಾರ ಸಂಜೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕೋಣಂದೂರು ಲಿಂಗಪ್ಪ ಅಭಿನಂದನಾ ಸಮಿತಿ ವತಿಯಿಂದ ಲಿಂಗಪ್ಪ ಅವರಿಗೆ 90ನೇ ವರ್ಷದ ಅಭಿನಂದನೆ ಮತ್ತು ಸಾಹಿತಿ ಡಾ. ಜೆ.ಕೆ.ರಮೇಶ್ ಸಂಪಾದಿಸಿದ ಕೋಲಿಂ ಎಂಬ ಕೌತುಕ ಅಭಿನಂದನಾ ಗ್ರಂಥದ ದ್ವಿತೀಯ ಆವೃತ್ತಿಯ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಸೆಕ್ಯುಲರ್ ಎಂಬ ಪದವೇ ಮೋಸದಿಂದ ಕೂಡಿದೆ. ಜಾತಿಯೇ ಪ್ರಧಾನವಾಗಿದ್ದು, ಜಾತ್ಯತೀತತೆ ಎಂಬುದು ಈಗ ಹಳಸಲು ಪದವಾಗಿದೆ. ಕೇವಲ ಭಾಷಣಕ್ಕೆ ಸೀಮಿತವಾಗಿದೆ. ಈ ಹಿಂದೆ ರಾಜಕೀಯ ಕ್ಷೇತ್ರದಲ್ಲಿ ಬಡವರ ಪರ ಅಭ್ಯರ್ಥಿ ಎಂಬ ಮಾತಿತ್ತು. ಪ್ರಸ್ತುತ ಚುನಾವಣೆ ಮಾಡುವ ತಾಕತ್ತು ಇದೆಯೇ ಎಂಬಂತ ಸ್ಥಿತಿ ನಿರ್ಮಾಣವಾಗಿದೆ. ಲಿಂಗಪ್ಪ ಅವರು ಬಿಟ್ಟ ಜಾಗಕ್ಕೆ ನಾವು ಬಂದವರು. ಆ ಸಂದರ್ಭದಲ್ಲಿ ಅವರು ಆಕ್ಟೀವ್ ಆಗಿದ್ದರೆ ನಮಗೆ ಅವಕಾಶವೇ ಇರುತ್ತಿರಲಿಲ್ಲ ಎಂದೂ ಹೇಳಿದರು.

ಲಿಂಗಪ್ಪ ಅವರನ್ನು ಅಭಿನಂದಿಸಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಸಮಾಜದಲ್ಲಿ ತುಳಿತಕ್ಕೊಳಗಾದವರ ಬಗೆಗೆ ಕಾಳಜಿಯನ್ನು ಹೊಂದಿರುವ ಶ್ರೀಯುತರು ರಾಜಕೀಯ ಕ್ಷೇತ್ರದ ಅಪ್ಪಟ ಚಿನ್ನದಂತಹ ವ್ಯಕ್ತಿಯಾಗಿದ್ದಾರೆ. ಸದನದಲ್ಲಿ ಇವರು ತಮಗೆ ಅನಿಸಿದ್ದನ್ನು ನಿರ್ಭಯವಾಗಿ ಪ್ರತಿಪಾದಿಸುತ್ತಿದ್ದ ರೀತಿ ಅನುಕರಣೀಯ. ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಜ್ಞಾನವನ್ನು ಹೊಂದಿದ್ದಾರೆ. ಜಾತಿ, ಹಣ ಯಾವುದರ ಪ್ರಭಾವವೂ ಇಲ್ಲದ ಅವರನ್ನು ಗೆಲ್ಲಿಸಿದ್ದ ಈ ಕ್ಷೇತ್ರದ ಮತದಾರರ ಪ್ರಭುದ್ಧತೆಯೂ ಮೆಚ್ಚುವಂತಹುದು ಎಂದರು.

ಕೋಲಿಂ ಗ್ರಂಥದ ಕುರಿತು ಮಾತನಾಡಿದ ಸಾಹಿತಿ ಬಿ.ಚಂದ್ರೇಗೌಡ, ಇತಿಹಾಸದ ಮೌಲ್ಯವಾಗಿ ನಮ್ಮೊಂದಿಗಿರುವ ಕೋಣಂದೂರು ಲಿಂಗಪ್ಪ ಅವರು ಶುದ್ಧ ಚಾರಿತ್ರ್ಯ ಹೊಂದಿರುವ ಅಪರೂಪದ ರಾಜಕಾರಣಿ ಆಗಿದ್ದಾರೆ. ನವೋದಯದ ಕಾಲಘಟ್ಟದ ಘಟಾನುಘಟಿ ಸಾಹಿತಿಗಳ ಒಡನಾಟವನ್ನು ಹೊಂದಿದ್ದ ಲಿಂಗಪ್ಪ ಅವರು ಕನ್ನಡ ಚಳವಳಿಯ ರೂವಾರಿಗಳಲ್ಲಿ ಒಬ್ಬರಾಗಿದ್ದಾರೆ. ಶಾಸಕರಾಗಿದ್ದ ಅವಧಿಯಲ್ಲಿ ಅತಿ ಹೆಚ್ಚು ಸಾಗುವಳಿ ಚೀಟಿ ವಿತರಿಸಿದವರು. ತಮ್ಮ ರಾಜಕೀಯ ಜೀವನದಲ್ಲಿ ಸಾಕಷ್ಟು ನೋವನ್ನು ಅನುಭವಿಸಿದ್ದರೂ ಕೀಳಾಗಿ ಕಂಡವರನ್ನು ಕ್ಷಮಿಸಿದ್ದಾರೆ. ಈ ಗ್ರಂಥ ಬಾರದಿದ್ದರೆ ಓರ್ವ ಅನುಕರಣೀಯ ವ್ಯಕ್ತಿಯ ಪ್ರಾಮಾಣಿಕ ವ್ಯಕ್ತಿತ್ವದ ಪರಿಚಯ ಆಗುತ್ತಿರಲಿಲ್ಲ ಎಂದೂ ಅಭಿಪ್ರಾಯ ವ್ಯಕ್ತಪಡಿಸಿದರು.

ಸನ್ಮಾನ ಸ್ವೀಕರಿಸಿದ ಲಿಂಗಪ್ಪ ಅವರು ಮಾತನಾಡಿ, 72ರ ಅವಧಿಯ ಚುನಾವಣೆಯಲ್ಲಿ ಗೋಪಾಲಗೌಡರ ಹೆಸರು ಹೆಚ್ಚು ಪ್ರಚಲಿತದಲ್ಲಿತ್ತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯ ದಿನಗಳನ್ನು ಎಣಿಸುತ್ತಿದ್ದ ಗುರುಗಳಿಗೆ ಚುನಾವಣಾ ಫಲಿತಾಂಶವನ್ನು ತಿಳಿಸಿ, ನೀವು ಗೆದ್ದಿದ್ದೀರಿ ಎಂದಾಗ ಅವರ ಕಣ್ಣುಗಳಲ್ಲಿ ನೀರಿಳಿಯುತ್ತಿತ್ತು ಎಂದೂ ಆ ಕ್ಷಣವನ್ನು ನೆನಪಿಸಿಕೊಂಡರು.

ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಅವರು "ಕೋಲಿಂ " ದ್ವಿತೀಯ ಆವೃತ್ತಿಯ ಗ್ರಂಥ ಬಿಡುಗಡೆ ಮಾಡಿದರು. ವೇದಿಕೆಯಲ್ಲಿ ಕಸಾಪ ತಾಲೂಕು ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ, ಕಲ್ಗದ್ದೆ ರತ್ನಾಕರ್, ಹಾಲಿಗೆ ನಾಗರಾಜ್, ಗಾಯತ್ರಿ ಶೇಷಗಿರಿ ಇದ್ದರು.

- - - -25ಟಿಟಿಎಚ್ 01:

ಅಭಿನಂದನಾ ಸಮಾರಂಭದಲ್ಲಿ ಮಾಜಿ ಶಾಸಕ ಕೋಣಂದೂರು ಲಿಂಗಪ್ಪ ಅವರನ್ನು ಗೌರವಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಾತಿಗಳಲ್ಲಿ ಮೇಲು ಕೀಳು ಎಂಬುವುದಿಲ್ಲ
ಗೃಹ ರಕ್ಷಕರಿಗೆ ಪೂರ್ಣಾವಧಿ ಕರ್ತವ್ಯ ನೀಡಿ