ಉಡುಪಿ: ಕೇರಳ ಮತ್ತು ಗೋವಾದಂತೆ ಕರ್ನಾಟಕ ರಾಜ್ಯ ಸರ್ಕಾರವೂ ಕೊಂಕಣ ರೈಲ್ವೆ ನಿಗಮದಲ್ಲಿರುವ ತನ್ನ ಶೇರುಗಳನ್ನು ತ್ಯಜಿಸಿ, ಅದನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸಲು ಸಹಕರಿಸಬೇಕು ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕುಂದಾಪುರ ಶಾಸಕ ಕಿರಣ್ ಕೊಡ್ಗಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಒತ್ತಾಯಿಸಿದ್ದಾರೆ.
ಕೇಂದ್ರ ರೈಲ್ವೆ ಮಂತ್ರಿಯಾಗಿದ್ದ ಜಾರ್ಜ್ ಫೆರ್ನಾಂಡಿಸ್ ಅವರು ಕೊಂಕಣ ರೈಲ್ವೆಯನ್ನು ಕರಾವಳಿ ಜನತೆಗೆ ಸಮರ್ಪಿಸುವಾಗ ಕರಾವಳಿಯ ರಾಜ್ಯಗಳಿಗೆ ನಿಗಮದಲ್ಲಿ ಹೂಡಿಕೆಗೆ ಶೇರುಗಳನ್ನು ನೀಡಲಾಗಿತ್ತು, ಆದರೆ ಈಗಾಗಲೇ ಕೇರಳ ಮತ್ತು ಗೋವಾ ರಾಜ್ಯಗಳು ತಮ್ಮ ಪಾಲಿನ ಶೇರುಗಳನ್ನು ತ್ಯಜಿಸಿದ್ದು, ಕರ್ನಾಟಕ ಸರ್ಕಾರವೂ ತಮ್ಮ ಶೇರುಗಳನ್ನು ತ್ಯಜಿಸಿ ಕೊಂಕಣ ರೈಲ್ವೆಯ ಅಭಿವೃದ್ಧಿಗಾಗಿ ಸಹಕಾರ ನೀಡಬೇಕು ಎಂದು ಸಂಸದರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.ಸಕರಾತ್ಮಕ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಪ್ರಯತ್ನಕ್ಕೆ ತಮ್ಮ ಪೂರ್ಣ ಸಹಕಾರ ನೀಡುವುದಾಗಿ ಭರವಸೆ ಇತ್ತರು.