ಕನ್ನಡಪ್ರಭ ವಾರ್ತೆ ಮಂಗಳೂರು
ಇತ್ತೀಚೆಗೆ ನಿಧನರಾದ ಕೊಂಕಣಿ ಅಕಾಡೆಮಿಯ ಮಾಜಿ ಅಧ್ಯಕ್ಷ ಎರಿಕ್ ಒಝೇರಿಯೊ ಅವರಿಗೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ನುಡಿನಮನ- ‘ಉತ್ರಾಂಜಲಿ’ ಕಾರ್ಯಕ್ರಮ ನಗರದ ಬೆಂದೂರು ಸಂತ ಸೆಬೆಸ್ಟಿಯನ್ ಹಾಲ್‌ನಲ್ಲಿ ನಡೆಯಿತು.ಪ್ರಸ್ತಾವನೆಗೈದು ಸ್ವಾಗತ ಕೋರಿದ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ತನ್ನ ಮತ್ತು ಎರಿಕ್ ಅವರ 37 ವರ್ಷಗಳ ಒಡನಾಟವನ್ನು ಮೆಲುಕು ಹಾಕಿದರು.ಎರಿಕ್ ಅವರ ಪತ್ನಿ ಜೊಯ್ಸ್ ಅವರು ಒಝೇರಿಯೊ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಗಳು ಡಾ. ರಶ್ಮಿ, ಅಳಿಯ- ಸಂಗೀತಗಾರ ಆಲ್ವಿನ್ ಫರ್ನಾಂಡಿಸ್, ಮೊಮ್ಮಕ್ಕಳಾದ ಅಮನ್, ಜಿಯಾ ಹಾಗೂ ಅಕಾಡಮಿ ಅಧ್ಯಕ್ಷರು, ಸದಸ್ಯರಾದ ನವೀನ್ ಲೋಬೊ, ರೊನಾಲ್ಡ್ ಕ್ರಾಸ್ತಾ, ಅಕ್ಷತಾ ನಾಯಕ್, ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಪಿಂಟೊ, ಮಂಗಳೂರು ಧರ್ಮಪ್ರಾಂತ್ಯದ ಪಿಆರ್‌ಒ ರೊಯ್ ಕ್ಯಾಸ್ತೆಲಿನೊ, ಕೊಂಕಣಿ ಲೇಖಕರ ಒಕ್ಕೂಟದ ಮುಖ್ಯಸ್ಥ ರಿಚ್ಚಾರ್ಡ್ ಮೊರಾಸ್, ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಪ್ಪಿ ಮತ್ತಿತರರು ಭಾಗವಹಿಸಿದ್ದರು.ಎರಿಕ್ ಒಝೇರಿಯೊ ಅವರ ಕಾರ್ಯಕ್ಷೇತ್ರದ ವಿವಿಧ ಮಜಲುಗಳಾದ- ವ್ಯಕ್ತಿ ಮತ್ತು ಶಕ್ತಿ (ವಾಲ್ಟರ್ ನಂದಳಿಕೆ), ಕೊಂಕಣಿ ಅಕಾಡೆಮಿ ಮತ್ತು ಶಿಕ್ಷಣ ಕ್ಷೇತ್ರ (ಸ್ಟೀವನ್ ಕ್ವಾಡ್ರಸ್), ಸಂಗೀತ ಮತ್ತು ಸಂಸ್ಕೃತಿ ಕ್ಷೇತ್ರ (ಚರಣ್ ಮಲ್ಯ) ಹಾಗೂ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ಪ್ರೇರಣಾಶಕ್ತಿ (ಕನ್ಸೆಪ್ಟಾ ಫರ್ನಾಂಡಿಸ್) ಕುರಿತು ತಮ್ಮ ಒಡನಾಟವನ್ನು ಅನಾವರಣಗೊಳಿಸಿದರು.ಎರಿಕ್ ಅವರ ಅಭಿಮಾನಿ ನಾರಾವಿಯ ಗೋಪಾಲಕೃಷ್ಣ ಅವರು ಸ್ಥಳದಲ್ಲೇ ರಚಿಸಿದ ಕವಿತೆಗೆ ಗಾಯಕ ರೊನಿ ಕ್ರಾಸ್ತಾ ಸ್ವರ ಸಂಯೋಜಿಸಿ ಹಾಡಿದರು. ಅಕಾಡೆಮಿ ಸದಸ್ಯ ಸಮರ್ಥ್ ಭಟ್ ವಂದಿಸಿದರು. ರೊನಿ ಅರುಣ್ ನಿರೂಪಿಸಿದರು.