ಎಸ್.ಜಿ. ತೆಗ್ಗಿನಮನಿ ನರಗುಂದ
ತೋಟಗಾರಿಕೆ ವಾಣಿಜ್ಯ ಬೆಳೆ ಪೇರು ಬೆಳೆಯುವಲ್ಲಿ ರಾಜ್ಯಮಟ್ಟದಲ್ಲಿ ಹೆಸರುವಾಸಿಯಾದ ಕೊಣ್ಣೂರ ಗ್ರಾಮ 22 ಸಾವಿರ ಜನಸಂಖ್ಯೆ ಹೊಂದಿದೆ. ಗ್ರಾಮದ 6 ಕಿಮೀ ಅಂತರದಲ್ಲಿ ವಾಸನ, ಗೋವನಕೊಪ್ಪ, ಬೆಳ್ಳೇರಿ, ಲಖಮಾಪುರ, ಕಲಹಾಳ, ಬೂದಿಹಾಳ, ಕಲ್ಲಾಪುರ, ಕಪ್ಪಲಿ, ಶಿರೋಳ ಸೇರಿದಂತೆ ಹಲವು ಗ್ರಾಮಗಳಿವೆ. ಈ ಎಲ್ಲ ಗ್ರಾಮಗಳಿಗೆ ಕೊಣ್ಣೂರೇ ಕೇಂದ್ರಬಿಂದುವಾಗಿದೆ.
ಮೂಲಭೂತ ಸೌಕರ್ಯದ ಕೊರತೆ:2 ಎಕರೆ ವಿಸ್ತೀರ್ಣವುಳ್ಳ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಡಿಯಲು ನೀರು, ಸ್ವಚ್ಛತೆ, ಶೌಚಾಲಯ ಇಲ್ಲ, ಅನಿವಾರ್ಯ ಎಂಬಂತೆ ಪ್ರಯಾಣಿಕರು ಬಯಲಿನಲ್ಲಿ ಮಲ-ಮೂತ್ರ ವಿಸರ್ಜನೆ ಮಾಡಬೇಕಿದೆ. 2015-16ರಲ್ಲಿ ಆಗಿನ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಈ ಗ್ರಾಮವನ್ನು ಬಯಲು ಬಹಿರ್ದೆಸೆ ಮುಕ್ತ ತಾಲೂಕು ಎಂದು ಘೋಷಣೆ ಮಾಡಿ ಹೋಗಿದ್ದಾರೆ. ಆದರೆ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಶೌಚಾಲಯವೇ ಇಲ್ಲ.
ಶಾಸಕರಿಗೆ ಮನವಿ: ಗ್ರಾಪಂ ಅಧ್ಯಕ್ಷ ಎಸ್.ಬಿ. ಕಳಸಣ್ಣವರ ಹಾಗೂ ಸದಸ್ಯರು ಸುಸಜ್ಜಿತ ಬಸ್ ನಿಲ್ದಾಣಕ್ಕೆ ಆಗ್ರಹಿಸಿ ಈ ಹಿಂದೆ ಶಾಸಕ ಸಿ.ಸಿ. ಪಾಟೀಲ ಅವರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ.
ನಿಲ್ದಾಣದಲ್ಲಿ ಕಾಂಕ್ರಿಟ್ ರಸ್ತೆ ಮತ್ತು ಶೌಚಾಲಯ ನಿರ್ಮಿಸುವಂತೆ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಅನುದಾನ ಇಲ್ಲದ ಕಾರಣ ಅಭಿವೃದ್ಧಿ ಕಾರ್ಯ ವಿಳಂಬವಾಗಿದೆ. ಮೇಲಧಿಕಾರಿಗಳು ಅನುದಾನ ಬಿಡುಗಡೆ ಮಾಡಿದರೆ ಮೂಲ ಸೌಕರ್ಯ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಬಸ್ ಡಿಪೋ ಘಟಕ ವ್ಯವಸ್ಥಾಪಕ ಪ್ರಶಾಂತ ಪಾನಬುಡೆ ಹೇಳಿದ್ದಾರೆ.