ಕೊಪ್ಪ ಗ್ರಾಮ ತಾಲೂಕು ಕೇಂದ್ರವನ್ನಾಗಿ ಅಭಿವೃದ್ಧಿ: ಕೃಷಿ ಸಚಿವ ಚಲುವರಾಯಸ್ವಾಮಿ

KannadaprabhaNewsNetwork | Published : May 22, 2025 1:14 AM

ಕೊಪ್ಪ ಗ್ರಾಮ ಜನಸಂಖ್ಯೆ ಮತ್ತು ಅಭಿವೃದ್ಧಿಯಲ್ಲಿ ವೇಗವಾಗಿ ಸಾಗುತ್ತಿದೆ. ಇಲ್ಲಿಯ ಜನರು ಸರ್ಕಾರಿ ಕಚೇರಿ ಮತ್ತು ನ್ಯಾಯಾಲಯಗಳಿಗೆ ಮದ್ದೂರಿಗೆ ಹೋಗಬೇಕಾಗಿದೆ. ಹೀಗಾಗಿ ಗ್ರಾಮವನ್ನು ತಾಲೂಕು ಕೇಂದ್ರವಾಗಿ ಅಭಿವೃದ್ಧಿಪಡಿಸಿದರೆ ಜನರಿಗೆ ಹೆಚ್ಚಿನ ಅನುಕೂಲವಾಗುತ್ತದೆ.

ಕನ್ನಡಪ್ರಭ ವಾರ್ತೆ ಮದ್ದೂರು

ನಾಗಮಂಗಲ ಕ್ಷೇತ್ರ ವ್ಯಾಪ್ತಿಯ ಕೊಪ್ಪ ಗ್ರಾಮವನ್ನು ತಾಲೂಕು ಕೇಂದ್ರವಾಗಿ ಅಭಿವೃದ್ಧಿಪಡಿಸುವ ಬಗ್ಗೆ ಚಿಂತನೆ ನಡೆಸಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬುಧವಾರ ಹೇಳಿದರು.

ಪಟ್ಟಣದ ಶಿವಪುರದ ಖಾಸಗಿ ಹೋಟೆಲ್‌ನಲ್ಲಿ ಕೊಪ್ಪ ಗ್ರಾಪಂಗೆ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಸಂತೋಷ್ ಕೊಟ್ಟಿಗೆ ಯಾರ್ ಅವರನ್ನು ಅಭಿನಂದಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕೊಪ್ಪ ಗ್ರಾಮ ಜನಸಂಖ್ಯೆ ಮತ್ತು ಅಭಿವೃದ್ಧಿಯಲ್ಲಿ ವೇಗವಾಗಿ ಸಾಗುತ್ತಿದೆ. ಇಲ್ಲಿಯ ಜನರು ಸರ್ಕಾರಿ ಕಚೇರಿ ಮತ್ತು ನ್ಯಾಯಾಲಯಗಳಿಗೆ ಮದ್ದೂರಿಗೆ ಹೋಗಬೇಕಾಗಿದೆ. ಹೀಗಾಗಿ ಗ್ರಾಮವನ್ನು ತಾಲೂಕು ಕೇಂದ್ರವಾಗಿ ಅಭಿವೃದ್ಧಿಪಡಿಸಿದರೆ ಜನರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದರು.

ಗ್ರಾಮವನ್ನು ತಾಲೂಕು ಕೇಂದ್ರವಾಗಿ ಮಾಡುವಂತೆ ಈಗಾಗಲೇ ನಾನು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಜೊತೆಗೆ ಸಂಬಂಧಪಟ್ಟ ಸಚಿವರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದರು.

ನಾಗಮಂಗಲ ಕ್ಷೇತ್ರ ಕೊಪ್ಪ ಒಳಗೊಂಡಂತೆ 38 ಗ್ರಾಪಂ ವ್ಯಾಪ್ತಿಗೆ ಸೇರಿದೆ. ಇದರಲ್ಲಿ ಕೊಪ್ಪ ಗ್ರಾಪಂ ಸರ್ಕಾರದ ಅನುದಾನವನ್ನು ಉತ್ತಮ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ ಮೂಲಕ ಹೆಚ್ಚಿನ ಅನುದಾನ ದೊರಕಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ನಾಗಮಂಗಲ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್. ದಿವಾಕರ, ಗ್ರಾಪಂ ಸದಸ್ಯರಾದ ಕುಮಾರ್ ಕೊಪ್ಪ, ಪರ್ವೇಜ್, ಗಿರೀಶ್, ಮಾಜಿ ಅಧ್ಯಕ್ಷ ನವೀನ್ ಕುಮಾರ್, ಮುಖಂಡರಾದ ಕೆ.ಎಸ್. ಜೋಗಿ ಗೌಡ, ಕೆ.ಸಿ.ರಮೇಶ, ಸೋಮಣ್ಣ, ಸುಧಾರಾಮು, ತಗ್ಗಹಳ್ಳಿ ಚಂದ್ರು ಮತ್ತಿತರರು ಇದ್ದರು.

ಬ್ರ್ಯಾಂಡ್‌ ಬೆಂಗಳೂರು ತಕ್ಷಣಕ್ಕೆ ಆಗುವಂತಹದ್ದಲ್ಲ: ಚಲುವರಾಯಸ್ವಾಮಿ

ಬ್ರ್ಯಾಂಡ್ ಬೆಂಗಳೂರು ತಕ್ಷಣಕ್ಕೇ ಆಗುವಂತಹದ್ದಲ್ಲ. ಈಗ ಯೋಜನೆ ರೂಪುಗೊಂಡಿದ್ದು, ಅದು ಜಾರಿಯಾಗಬೇಕಾದರೆ ಕನಿಷ್ಠ ಹತ್ತು ವರ್ಷವಾದರೂ ಬೇಕು ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು.

ವಿಪಕ್ಷದವರಿಗೆ ಮಾಡಲು ಕೆಲಸವಿಲ್ಲ. ಅಧಿಕಾರದಲ್ಲಿದ್ದಾಗ ಬೆಂಗಳೂರನ್ನು ಅಭಿವೃದ್ಧಿ ಮಾಡಲಿಲ್ಲ. ವ್ಯವಸ್ಥಿತವಾಗಿ ಬೆಂಗಳೂರನ್ನು ಅಭಿವೃದ್ಧಿಪಡಿಸುವಲ್ಲಿ ಎಲ್ಲಾ ಪಕ್ಷಗಳೂ ವಿಫಲವಾಗಿವೆ. ಅದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು. ಹಾಗಂತ ಟೀಕೆ ಮಾಡುವುದನ್ನೇ ಗುರಿಯಾಗಿಸಿಕೊಳ್ಳಬಾರದು ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.

ಬ್ರ್ಯಾಂಡ್‌ ಬೆಂಗಳೂರು ಯೋಜನೆಯನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಕೈಗೆತ್ತಿಕೊಂಡಿದ್ದಾರೆ. ಎಲ್ಲಿ ಲೋಪಗಳಿವೆ, ಮಾರ್ಪಾಡು ಹೇಗೆ ಮಾಡಬಹುದು ಎಂಬ ಬಗ್ಗೆ ಸಲಹೆಗಳನ್ನು ಕೊಡಲಿ. ಬಿಜೆಪಿ-ಜೆಡಿಎಸ್‌ನವರು ಅಧಿಕಾರದಲ್ಲಿದ್ದಾಗ ಏನನ್ನೂ ಮಾಡಲಿಲ್ಲ. ಅವರು ಮಾಡಿದ ಅವ್ಯವಸ್ಥೆಗಳಿಂದಲೇ ಈ ಪರಿಸ್ಥಿತಿ ಎದುರಾಗಿದೆ. ಸಿಎಂ-ಡಿಸಿಎಂ ಇಬ್ಬರೂ ಬೆಂಗಳೂರಿನ ವ್ಯವಸ್ಥೆಯನ್ನು ಸರಿಪಡಿಸುವ ಸಂಕಲ್ಪ ಮಾಡಿದ್ದಾರೆ. ಅದಕ್ಕೆ ಎಲ್ಲರೂ ಸಾಥ್‌ ನೀಡಬೇಕು ಎಂದು ಹೇಳಿದರು.