ಮಾರುತಿ ಶಿಡ್ಲಾಪೂರಹಾನಗಲ್ಲ: ಸುಮಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ 766 ಇ ಸಾಗರಮಾಲಾ ಯೋಜನೆಯಡಿ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಬೇಕಾದ ಶಿರಸಿ- ಹಾವೇರಿ ಹೆದ್ದಾರಿಯ ಕಾಮಗಾರಿಗೆ ಅರಣ್ಯ ಇಲಾಖೆ ಗ್ರೀನ್ ಸಿಗ್ನಲ್ ನೀಡಿದ್ದು, ಏಳೆಂಟು ತಿಂಗಳ ನಂತರ ಕಾಮಗಾರಿ ನಡೆಸಲು ಅನುಮತಿ ಸಿಕ್ಕಿದೆ.ತಾಲೂಕಿನ ನಾಲ್ಕರ ಕ್ರಾಸಿನಿಂದ ಆರಂಭವಾಗುವ ಶಿರಸಿ- ಹಾವೇರಿ ಹೆದ್ದಾರಿ ಶಿರಸಿ ವ್ಯಾಪ್ತಿಯಲ್ಲಿ 28 ಹೆಕ್ಟೇರ್ ಹಾಗೂ ಹಾವೇರಿ ವ್ಯಾಪ್ತಿಯಲ್ಲಿ 2 ಹೆಕ್ಟೇರ್ ಅರಣ್ಯ ಜಾಗದಲ್ಲಿ ಹಾಯ್ದು ಹೋಗಿದೆ. ಅಗಲೀಕರಣ ಸಂದರ್ಭದಲ್ಲಿ ಮರಗಳ ಕಟಿಂಗ್ ಮಾಡಬೇಕಾಗಿದೆ. ಅದಕ್ಕೀಗ ಅನುಮತಿ ಸಿಕ್ಕಿದೆ. ಅರಣ್ಯ ಇಲಾಖೆಯ ಅನುಮತಿ ಪಡೆಯದೇ ರಸ್ತೆ ಅಗೆದು ಹಾಕಲಾಗಿತ್ತು. ಇದರಿಂದ ಸಂಚಾರಕ್ಕೆ ಸಂಚಕಾರ ತಂದೊದಗಿತ್ತು.
ಶಾಸಕ ಶ್ರೀನಿವಾಸ ಮಾನೆ ಸೇರಿದಂತೆ ಶಿರಸಿ, ಹಾವೇರಿ ಭಾಗದ ಹಲವು ಜನಪ್ರತಿನಿಧಿಗಳ ಪ್ರಯತ್ನದ ಕಾರಣದಿಂದ ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಅನುಮತಿ ಸಿಕ್ಕಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಇನ್ನಾದರೂ ವಿಶೇಷ ಮುತುವರ್ಜಿ ವಹಿಸಿ ಕಾಮಗಾರಿ ಪೂರ್ಣಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎನ್ನುವುದು ಈ ಭಾಗದ ಜನತೆಯ ಒಕ್ಕೊರಲಿನ ಅಭಿಪ್ರಾಯವಾಗಿದೆ.
ಗಮನ ಸೆಳೆಯಲಾಗಿತ್ತು: ಶಿರಸಿ- ಹಾವೇರಿ ಹೆದ್ದಾರಿ ಕಾಮಗಾರಿ ಕುರಿತು ಹಲವು ಬಾರಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು. ಕಾಮಗಾರಿ ಕೈಗೊಳ್ಳಲು ಅರಣ್ಯ ಇಲಾಖೆ ಅನುಮತಿ ನೀಡಿದೆ. ಈ ಭಾಗದ ಜನತೆಯ ಸಮಸ್ಯೆಗೆ ಸ್ಪಂದಿಸಿ ಅಧಿಕಾರಿಗಳು ಬೇಗನೇ ಕಾಮಗಾರಿ ಪೂರ್ಣಗೊಳಿಸಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದ್ದಾರೆ.