ಕೊಪ್ಪಳ: ಕೈಗಾರಿಕಾ ಮಾಲಿನ್ಯ ನಿಯಂತ್ರಣ, ಜನರ ಆರೋಗ್ಯ ರಕ್ಷಣೆ ಹಾಗೂ ಬಲ್ದೋಟ ಕೈಗಾರಿಕಾ ವಿಸ್ತರಣೆ ವಿರೋಧಿಸಿ ಅ. 31ರಂದು ಕೊಪ್ಪಳ ಮತ್ತು ಭಾಗ್ಯನಗರರ ಬಂದ್‌ಗೆ ಕೊಪ್ಪಳ ಬಚಾವೋ ಆಂದೋಲನ ಸಮಿತಿ ಹಾಗೂ ಕೊಪ್ಪಳ ತಾಲೂಕು ಪರಿಸರ ಹಿತರಕ್ಷಣಾ ವೇದಿಕೆ ಕರೆ ನೀಡಿದ್ದು, ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಮಠಾಧೀಶರು, ಗಣ್ಯರ ಸಾಥ್: ಹೋರಾಟಕ್ಕೆ ರಾಜ್ಯದ ವಿವಿಧ ಭಾಗಗಳ ಮಠಾಧೀಶರು ಬೆಂಬಲ ಸೂಚಿಸಿದ್ದಾರೆ. ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್, ವಿವಿಧ ರೈತ ಸಂಘಟನೆಗಳ ಮುಖಂಡರು, ಸಾಹಿತಿಗಳು, ಪರಿಸರ ಹೋರಾಟಗಾರರು, ವ್ಯಾಪಾರಸ್ಥರು ಮತ್ತು ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಜಿಲ್ಲೆಯ 22 ಬಾಧಿತ ಗ್ರಾಮಗಳ ನಾಗರಿಕರು, ಯುವಕರು, ಮಹಿಳೆಯರು, ರೈತರು ಹಾಗೂ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಬಂದ್‌ಗೆ ಸ್ವಯಂಪ್ರೇರಿತವಾಗಿ ಬೆಂಬಲ ನೀಡುವಂತೆ ವರ್ತಕರು, ವ್ಯಾಪಾರಸ್ಥರು, ಸಾರಿಗೆ ವಲಯದವರು ಹಾಗೂ ಸಾರ್ವಜನಿಕರಲ್ಲಿ ಸಂಘಟಕರು ಮನವಿ ಮಾಡಿದ್ದಾರೆ.ಗವಿಮಠದಿಂದ ಜನಾಂದೋಲನ: ಹೋರಾಟದಲ್ಲಿ ಭಾಗವಹಿಸುವವರಿಗೆ ಬೆಳಗ್ಗೆ 7.30ರಿಂದ ಶ್ರೀ ಗವಿಸಿದ್ದೇಶ್ವರ ಮಠದಲ್ಲಿ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಉಪಾಹಾರದ ಬಳಿಕ ಮಠದಿಂದ ಮೆರವಣಿಗೆ ಆರಂಭಿಸಿ, ಬೃಹತ್ ಜನಾಂದೋಲನ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಈ ಹೋರಾಟ ಯಾವುದೇ ವ್ಯಕ್ತಿ ಅಥವಾ ಸಮುದಾಯದ ವಿರುದ್ಧವಲ್ಲ. ಕೊಪ್ಪಳದ ಭವಿಷ್ಯ, ಮಕ್ಕಳ ಆರೋಗ್ಯ, ಶುದ್ಧ ಗಾಳಿ, ನೀರು ಹಾಗೂ ಪರಿಸರ ಸಂರಕ್ಷಣೆಯ ಉದ್ದೇಶದಿಂದ ನಡೆಯುತ್ತಿದೆ ಎಂದು ಹೋರಾಟಗಾರರು ಸ್ಪಷ್ಟಪಡಿಸಿದ್ದಾರೆ.
ಬಂದ್‌ನಲ್ಲಿ ಭಾಗವಹಿಸುವ ಸ್ವಾಮೀಜಿಗಳು: ಹೋರಾಟ ಸಮಿತಿ ಕರೆ ನೀಡಿರುವ ಬಂದ್‌ನಲ್ಲಿ ಗದಗ-ಡಂಬಳ ತೋಂಟದಾರ್ಯ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿಗಳು, ಮುಂಡರಗಿ ತೋಂಟದಾರ್ಯ ಮಠದ ಶ್ರೀ ನಿಜಗುಣಾನಂದ ಸ್ವಾಮಿಗಳು, ಶ್ರೀ ಶಿವಕುಮಾರ ಮಹಾಸ್ವಾಮಿಗಳು, ಶ್ರೀ ಸಿದ್ದಬಸವ ಕಬೀರ ಮಹಾಸ್ವಾಮಿಗಳು, ಶ್ರೀ ಕೋರೇಶ್ವರ ಮಹಾಸ್ವಾಮಿಗಳು, ಶ್ರೀ ಗುರುಲಿಂಗತೇಶ್ವರ ಸ್ವಾಮಿಗಳು, ಅಟವಂಡಿದ ಶ್ರೀ ಪ.ಬ. ಮರುಳಸಿದ್ಧಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಹಿರೇಮಠದ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು ಪಾಲ್ಗೊಳ್ಳಲಿದ್ದಾರೆ.
ವ್ಯಾಪಕ ಬೆಂಬಲ: ಕೊಪ್ಪಳ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಕಾರ್ಖಾನೆಗಳ ವಿರುದ್ಧ ಜನಾಂದೋಲನ ರೂಪಿತವಾಗುತ್ತಿದೆ. ಜನಪ್ರತಿನಿಧಿಗಳನ್ನು ಅಹ್ವಾನಿಸಿದ್ದು, ಅವರು ಸಹ ಭಾಗವಹಿಸುವರು ಎಂದು ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.