ಸಚಿವ ಸ್ಥಾನಕ್ಕಾಗಿ ದೆಹಲಿಯಲ್ಲಿ ಬೀಡುಬಿಟ್ಟ ಕೊಪ್ಪಳ ಜಿಲ್ಲೆಯ ಶಾಸಕರು

KannadaprabhaNewsNetwork |  
Published : May 30, 2026, 02:00 AM IST
ಸಸಸ | Kannada Prabha

ಸಾರಾಂಶ

ಈಗಾಗಲೇ ಮೂರು ಬಾರಿ ಸಚಿವರಾಗಿರುವ ಶಿವರಾಜ ತಂಗಡಗಿ ಮತ್ತೊಮ್ಮೆ ಸಚಿವರಾಗುವ ಉತ್ಸಾಹದಲ್ಲಿದ್ದಾರೆ. ಇದಕ್ಕಾಗಿ ಅವರು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ.

ಸೋಮರಡ್ಡಿ ಅಳವಂಡಿ ಕೊಪ್ಪಳ

ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಹೊಸ ಸರ್ಕಾರ ರಚನೆಗೆ ಕ್ಷಣಗಣನೆ ನಡೆದಿದ್ದು, ಜಿಲ್ಲೆಯ ಕಾಂಗ್ರೆಸ್ ಶಾಸಕರು ದೆಹಲಿಯಲ್ಲಿಯೇ ಬಿಡಾರ ಹೂಡಿ, ಸಚಿವ ಸ್ಥಾನಕ್ಕಾಗಿ ಶತಪ್ರಯತ್ನ ನಡೆಸಿದ್ದಾರೆ.

ಈಗಾಗಲೇ ಮೂರು ಬಾರಿ ಸಚಿವರಾಗಿರುವ ಶಿವರಾಜ ತಂಗಡಗಿ ಮತ್ತೊಮ್ಮೆ ಸಚಿವರಾಗುವ ಉತ್ಸಾಹದಲ್ಲಿದ್ದಾರೆ. ಇದಕ್ಕಾಗಿ ಅವರು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ.

ಈ ಹಿಂದಿನ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಇರುವಷ್ಟೇ ಅನ್ಯೋನ್ಯವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರೊಂದಿಗೂ ಇದ್ದರು ಎನ್ನುವುದು ಕಾಂಗ್ರೆಸ್ ಪಾಳಯದಲ್ಲಿ ಎಲ್ಲರಿಗೂ ತಿಳಿದಿದೆ. ಅಷ್ಟೇ ಅಲ್ಲ, ಮುಖ್ಯಮಂತ್ರಿ ಬದಲಾವಣೆ ಮೊದಲಾದ ರಾಜಕೀಯ ಬೆಳವಣಿಗೆ ಕುರಿತು ಯಾವುದೇ ಗುಂಪಿನ ಪರವಾಗಿಯೂ ಮಾತನಾಡದೆ, ಹೈಕಮಾಂಡ್ ನಿರ್ಧಾರವೇ ಅಂತಿಮ, ಈ ವಿಷಯ ಮಾತನಾಡುವಷ್ಟು ದೊಡ್ಡವನು ನಾನಲ್ಲ ಎಂದು ಹೇಳಿ ಜಾರಿಕೊಳ್ಳುತ್ತಿದ್ದರು. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮುಂದುವರಿಯುತ್ತಾರೆಯೇ ಅಥವಾ ರಾಜೀನಾಮೆ ನೀಡುತ್ತಾರೆಯೇ ಎನ್ನುವ ಯಾವ ಪ್ರಶ್ನೆಗೂ ಅವರು ನೇರವಾಗಿ ಉತ್ತರ ನೀಡದೆ,ಈ ವಿಷಯವನ್ನು ಹೈಕಮಾಂಡ್ ನೋಡಿಕೊಳ್ಳುತ್ತದೆ, ಹೈಕಮಾಂಡ್ ನಮಗೆ ಮಾತನಾಡದಂತೆ ಹೇಳಿದೆ ಎಂದು ಹೇಳುವ ಮೂಲಕ ಯಾವುದೇ ಗುಂಪಿನ ಪರವಾಗಿ ಮಾತನಾಡದೇ ಪಕ್ಷದ ಶಿಸ್ತಿನ ಸಿಪಾಯಿಯಂತೆ ಇದ್ದರು. ಜತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರೊಂದಿಗೂ ಪಕ್ಷ ಸಂಘಟನೆಯ ವಿಷಯದಲ್ಲಿ ಮುಂಚೂಣಿಯಲ್ಲಿದ್ದರು. ಹೀಗಾಗಿ ಮತ್ತೆ ಸಚಿವ ಸ್ಥಾನ ಸಿಕ್ಕೆ ಸಿಗುತ್ತದೆ ಎನ್ನುವ ವಿಶ್ವಾಸದಲ್ಲಿದ್ದಾರೆ. ಆದರೂ ದೆಹಲಿಯಲ್ಲಿದ್ದುಕೊಂಡು ತಮ್ಮ ಪ್ರಯತ್ನ ಮುಂದುವರಿಸಿದ್ದಾರೆ.

ಇತ್ತ ಮೂರು ಬಾರಿ ಶಾಸಕನಾಗಿರುವ ಶಾಸಕ ರಾಘವೇಂದ್ರ ಹಿಟ್ನಾಳ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಪರಮಾಪ್ತರೆಂದೇ ಗುರುತಿಸಿಕೊಂಡಿದ್ದರು. ಮಾನಸ ಪುತ್ರ ಎಂದೆಲ್ಲ ಕರೆಸಿಕೊಂಡಿದ್ದಾರೆ. ಹಾಗೆಯ ಮುಖ್ಯಮಂತ್ರಿ ಬದಲಾವಣೆ ಇಲ್ಲವೇ ಇಲ್ಲ, ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ. ಮುಂದಿನ ಅವಧಿಗೂ ಅವರೇ ಮುಖ್ಯಮಂತ್ರಿ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಪರವಾಗಿ ಬ್ಯಾಟ್ ಮಾಡಿದ್ದರು.

ಆದರೆ, ಈಗ ಸಚಿವ ಸ್ಥಾನಕ್ಕಾಗಿ ಸತತ ಪ್ರಯತ್ನ ಮಾಡುತ್ತಿದ್ದಾರೆ. ಸಂಸದ ರಾಜಶೇಖರ ಹಿಟ್ನಾಳ ಹಾಗೂ ತಂದೆ ಕೆ. ಬಸವರಾಜ ಹಿಟ್ನಾಳ ಅವರೊಂದಿಗೆ ದೆಹಲಿಯಲ್ಲಿಯೇ ಬೀಡು ಬಿಟ್ಟಿದ್ದಾರೆ. ತಮ್ಮೆಲ್ಲ ಶಕ್ತಿ ಒಗ್ಗೂಡಿಸಿ, ಸಚಿವನಾಗುವ ಯತ್ನ ನಡೆಸಿದ್ದಾರೆ. ಸತತ ಮೂರು ಬಾರಿ ಆಯ್ಕೆಯಾಗಿರುವುದರಿಂದ ಅವರಿಗೆ ಹಿರಿತನವೂ ಇದೆ. ತಮ್ಮ ಬೆಂಬಲಿಗರೊಂದಿಗೆ ಹಲವಾರು ಬಾರಿ ದೆಹಲಿಗೆ ಹೋಗಿಬಂದಿದ್ದಾರೆ.

ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿಯೊಡ್ಡುವ ತಯಾರಿಯಲ್ಲಿದ್ದ ಶಾಸಕ ರಾಘವೇಂದ್ರ ಹಿಟ್ನಾಳ ಅವರಿಗೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದರಿಂದ ಸ್ವಲ್ಪ ಹಿನ್ನಡೆಯಾಗಿದೆ. ಡಿ.ಕೆ. ಶಿವಕುಮಾರ ಅವರ ಸಹೋದರನನ್ನು ಕೆಎಂಎಫ್ ಅಧ್ಯಕ್ಷರನ್ನಾಗಿ ಮಾಡುವ ಪ್ರಯತ್ನ ಇರುವುದರಿಂದ ಶಾಸಕ ರಾಘವೇಂದ್ರ ಹಿಟ್ನಾಳ ಅವರಿಗೆ ಸಚಿವ ಸ್ಥಾನ ಸಿಕ್ಕರೂ ಸಿಗುವ ಸಾಧ್ಯತೆ ಅಲ್ಲಗಳೆಯುವಂತೆಯೇ ಇಲ್ಲ.

ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಅವರು ಈಗ ಇರಸು-ಮುರಸು ಅನುಭವಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಪದೇ ಪದೇ ವಾದ ಮಾಡುತ್ತಲೇ ಬಂದಿದ್ದರು. ಹೈಕಮಾಂಡ್ ಯಾರೂ ಮಾತನಾಡದಂತೆ ಹೇಳಿದ ಮೇಲೆಯೂ ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಹೇಳುತ್ತಲೇ ಬಂದಿದ್ದರು. ಅಷ್ಟೇ ಅಲ್ಲ, ಸಿದ್ದರಾಮಯ್ಯ ಅವರನ್ನು ಬದಲಾಯಿಸುವುದಾದರೆ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಎಂದು ಹೇಳಿದ್ದರು. ಹೀಗಾಗಿ, ಈಗ ಡಿ.ಕೆ. ಶಿವಕುಮಾರ ಮುಖ್ಯಮಂತ್ರಿಯಾಗುವುದರಿಂದ ರಾಯರಡ್ಡಿ ಅವರಿಗೆ ಸಚಿವ ಸ್ಥಾನ ಸಿಗುವುದೇ ಎನ್ನುವ ಕುತೂಹಲ ಮೂಡಿದೆ.

ಆದರೆ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಕೊಪ್ಪಳಕ್ಕೆ ಬಂದಾಗಲೆಲ್ಲ ರಾಯಲ್ ರೆಡ್ಡಿಯನ್ನು ಸಚಿವನನ್ನಾಗಿ ಮಾಡಬೇಕು, ಅದರಲ್ಲೂ ಫೈನಾನ್ಸ್ ಮಿನಿಸ್ಟರ್ ಮಾಡಬೇಕು ಎಂದು ಹೇಳುತ್ತಿದ್ದರು. ಹಾಗೊಂದು ವೇಳೆ ಸಿದ್ದರಾಮಯ್ಯ ಅವರು ಬಸವರಾಜ ರಾಯರಡ್ಡಿ ಅವರನ್ನು ಮಂತ್ರಿ ಮಾಡಲೇಬೇಕು ಎಂದು ಹೈಕಮಾಂಡ್‌ ಮೇಲೆ ಒತ್ತಡ ತಂದರೆ ಮಾತ್ರ ಬಸವರಾಜ ರಾಯರಡ್ಡಿ ಅವರಿಗೆ ಸಚಿವ ಸ್ಥಾನ ಸಿಗಬಹುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆಗಾಲದಲ್ಲಿ ಪ್ರಾಣಹಾನಿ ತಡೆಗೆ ಮುನ್ನಚ್ಚರಿಕೆ ವಹಿಸಿ
ಸಿದ್ದು ರಾಜ್ಯ ರಾಜಕಾರಣ ಡಿಕೆಶಿಗೆ ತೂಗು ಕತ್ತಿ: ಬೊಮ್ಮಾಯಿ