ಈ ವರ್ಷ ಯುದ್ಧದ ಕಾರಣದಿಂದ ರಫ್ತು ಸಹ ಕಡಿಮೆಯಾದ ಕಾರಣ ಮಾವು ಮೇಳದಲ್ಲಿ ಸಾಕಷ್ಟು ರೈತರು ಭಾಗವಹಿಸಿ ತಮ್ಮ ಹಣ್ಣನ್ನು ಮಾರಾಟ ಮಾಡಿದರು
ಕೊಪ್ಪಳ: ಜಿಲ್ಲೆಯ ತೋಟಗಾರಿಕೆ ಇಲಾಖೆಯಿಂದ ಜಿಲ್ಲಾ ಕೇಂದ್ರದಲ್ಲಿ ಆಯೋಜಿಸಲಾಗಿದ್ದ 16 ದಿನಗಳ ಮಾವು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಬುಧವಾರ ತೆರೆ ಬಿದ್ದಿದೆ, ₹ 3.30 ಕೋಟಿಗೂ ಹೆಚ್ಚಿನ ವಹಿವಾಟು ಆಗಿದೆ.
ಜಿಲ್ಲೆಯ ತೋಟಗಾರಿಕೆ ಇಲಾಖೆ ಮಾವು ಬೆಳೆಯುವ ರೈತರಿಗೆ ನೇರ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ 10ನೇ ವರ್ಷದ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ ಮೇ 12 ರಿಂದ ಮೇ 27ರ ವರೆಗೆ 16 ದಿನಗಳ ಕಾಲ ತೋಟಗಾರಿಕೆ ಜಂಟಿ ನಿರ್ದೇಶಕರ ಕಚೇರಿ ಆವರಣದಲ್ಲಿ ಯಶಸ್ವಿಯಾಗಿ ನಡೆದಿದ್ದು, 350 ಟನ್‌ಗೂ ಹೆಚ್ಚಿನ ವಿವಿಧ ತಳಿಯ ಮಾವು ರೈತರು ಮಾರಾಟ ಮಾಡಿದ್ದು, ₹3.30 ಕೋಟಿಗೂ ಹೆಚ್ಚಿನ ವಹಿವಾಟು ಈ ಮೇಳದಲ್ಲಿ ದಾಖಲಾಗಿದೆ.
ಈ ವರ್ಷ ಯುದ್ಧದ ಕಾರಣದಿಂದ ರಫ್ತು ಸಹ ಕಡಿಮೆಯಾದ ಕಾರಣ ಮಾವು ಮೇಳದಲ್ಲಿ ಸಾಕಷ್ಟು ರೈತರು ಭಾಗವಹಿಸಿ ತಮ್ಮ ಹಣ್ಣನ್ನು ಮಾರಾಟ ಮಾಡಿದರು ಹಾಗೂ ತೋಟಗಾರಿಕೆ ಇಲಾಖೆಯಿಂದ ರೈತರಿಗೆ ವಿವಿಧ ರಾಜ್ಯ ಹಾಗೂ ಜಿಲ್ಲೆಗಳ ಮಾರುಕಟ್ಟೆ ಮಾಹಿತಿ ಒದಗಿಸಿ ಮಾವು ಮಾರಾಟಕ್ಕೆ ಅನುಕೂಲ ಕಲ್ಪಿಸಲಾಯಿತು.
ಮಿಯಾಜಾಕಿ ಮಾವಿನ ಹಣ್ಣಿನ ಹವಾ:
ಈ ಭಾರಿ ಮೇಳದಲ್ಲಿ ಕೊಪ್ಪಳದಲ್ಲಿಯೇ ಬೆಳೆದ ಮಿಯಾಜಾಕಿ ಮಾವಿನ ಹಣ್ಣು ತನ್ನದೇ ಆದ ಹವಾ ಸೃಷ್ಟಿಸಿತ್ತು ಹಾಗೂ ಮೊದಲ ಬಾರಿಗೆ ಕೊಪ್ಪಳದಲ್ಲಿ ಕಲ್ಲತಾವರಗೇರೆ ಗ್ರಾಮದ ರೈತ ನಾಗಪ್ಪ ಬಗನಾಳ ಹೊಲದಲ್ಲಿ ಬೆಳೆದ ಮಿಯಾಜಾಕಿ ಮಾವಿನ ಹಣ್ಣನ್ನು ಪ್ರದರ್ಶನಕ್ಕೆ ಹಾಗೂ ಮಾರಾಟ ಮಾಡಲಾಯಿತು. ಈ ರೈತರು ಬೆಳೆದ 20 ಕೆಜಿ ಮಿಯಾಜಾಕಿ ಮಾವನ್ನು ₹3000 ಪ್ರತಿ ಕೆಜಿಯಂತೆ ಮಾರಾಟ ಮಾಡಲಾಯಿತು.
ನೈಸರ್ಗಿಕ ಇಥರೆಲ್ ಪಂಚ್ ಹೋಲ್ ಪಾಕೆಟ್ ಪರಿಚಯ: ರೈತರಿಗಾಗಿ ಮಾವಿನ ಕುರಿತು ವಿವಿಧ ತಾಂತ್ರಿಕ ಮಾಹಿತಿ ನೀಡಲಾಯಿತು. ನೈಸರ್ಗಿಕವಾಗಿ ಮಾವು ಮಾಗಿಸುವ ಕುರಿತು ಎನ್‌ರೈಪ್ (enripe) ಎಂಬ ನೈಸರ್ಗಿಕ ಇಥರೆಲ್ ಪಂಚ್ ಹೋಲ್ ಪಾಕೆಟ್ ಪರಿಚಯಿಸಿ ಹಣ್ಣುಗಳನ್ನು ಮಾಗಿಸುವ ವಿಧಾನ ಸಹ ಇಲಾಖೆಯಿಂದ ರೈತರಿಗೆ ತಿಳಿಸಿಕೊಡಲಾಯಿತು. ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಮಾವಿನ ಹಣ್ಣುಗಳನ್ನು ಮಾಗಿಸುವ ಘಟಕ (Fruit Ripening Chamber) ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ (ಆರ್.ಕೆ.ವಿ.ವೈ) ಸಹಾಯಧನದಲ್ಲಿ ನೀಡುವ ಕುರಿತು ತಿಳಿಸಲಾಯಿತು.
ಮೇಳದಲ್ಲಿ ಕೇಸರ್ ಮತ್ತು ದಶಹರಿ ತಳಿಯ ಮಾವು ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಬಂದಿದ್ದು, ಅದೇ ರೀತಿ ಬೆನೆಶಾನ್, ಕೇಸರ್, ದಶಹರಿ, ರಸಪುರಿ, ಸ್ವರ್ಣರೇಖಾ, ಇಮಾಮ ಪಸಂಧ, ಆಪೋಸು, ಮಲ್ಲಿಕಾ, ತೋತಾಪೂರಿ, ಸಕ್ಕರೆಗುಟ್ಟಿ, ಖಾದರ್, ಪುನಾಸ್ ಮತ್ತು ಉಪ್ಪಿನಕಾಯಿ ತಳಿ ಸೇರಿದಂತೆ ವಿವಿಧ ತಳಿಯ ಮಾವಿನ ಹಣ್ಣುಗಳು ಸೇರಿ 320 ಟನ್‌ಗೂ ಹೆಚ್ಚು ಮಾವು ಮಾರಾಟವಾಗಿದೆ. ಆಮ್ಲೇಟ್ ಮತ್ತು ಪುನಾಸ್ ಉಪ್ಪಿನಕಾಯಿ ಮಾವಿನ ಕಾಯಿಗೆ ಸಾರ್ವಜನಿಕರಿಂದ ಹೆಚ್ಚಿನ ಬೇಡಿಕೆ ಬಂದು ಮಾರಾಟವಾಗಿದೆ. ಈ ಮೇಳದಲ್ಲಿ ಬೆಂಗಳೂರು, ದಾವಣಗೆರೆ, ಹಾವೇರಿ, ತುಮಕೂರು, ಚಿತ್ರದುರ್ಗಾ, ರಾಯಚೂರು, ಬಳ್ಳಾರಿ, ಗದಗ, ಧಾರವಾಡ, ಬಾಗಲಕೋಟೆ, ವಿಜಯಪುರ ಮತ್ತು ವಿಜಯನಗರ ಹಾಗೂ ವಿವಿಧ ಹೊರ ಜಿಲ್ಲೆಯ ಮಾವು ಬೆಳೆಯುವ ರೈತರು ಸಹ ಭಾಗವಹಿಸಿ ಹಣ್ಣು ಮಾರಾಟ ಮಾಡುವ ಬಗ್ಗೆ, ನೈಸರ್ಗಿಕವಾಗಿ ಹಣ್ಣು ಮಾಗಿಸುವ ಬಗ್ಗೆ, ರಫ್ತು ಹಾಗೂ ಮಾರುಕಟ್ಟೆ ಕುರಿತು ಮಾಹಿತಿಯನ್ನು ಪಡೆದಿಕೊಂಡಿರುತ್ತಾರೆ.
ಕೇಸರ್ ಮಾವಿನ ಬ್ರ್ಯಾಂಡ್ ಬಾಕ್ಸ್ ಹಾಗೂ ಬ್ಯಾಗ್ ಗಳಿಗೆ ಬೇಡಿಕೆ: ಕೊಪ್ಪಳ ಕೇಸರ್ ತಳಿಯ ಮಾವಿಗೆ ಹೆಚ್ಚಿನ ಬೇಡಿಕೆ ಬಂದು 2.50 ಕೆಜಿ ತೂಕದ ಕೊಪ್ಪಳ ಕೇಸರ್ ಎಂಬ ಬ್ರ್ಯಾಂಡ್ ಬಾಕ್ಸ್ ಹಾಗೂ ಬ್ಯಾಗ್ ಗಳಿಗೆ ಹೆಚ್ಚಿನ ಬೇಡಿಕೆ ಬಂದು 15,000 ಕ್ಕೂ ಹೆಚ್ಚಿನ ಬಾಕ್ಸ್ ಹಾಗೂ ಬ್ಯಾಗ್ ಬೆಂಗಳೂರು ಮತ್ತು ದೆಹಲಿ, ಹುಬ್ಬಳ್ಳಿ,ಹೈದರಬಾದ್, ಮಂಗಳೂರು ಹಾಗೂ ವಿವಿಧ ನಗರಗಳಿಗೆ ರೈತರು ಪ್ಯಾಕ್ ಮಾಡಿ 60 ಟನ್‌ಗೂ ಹೆಚ್ಚಿನ ಕೇಸರ್ ಮಾವಿನ ಹಣ್ಣುಗಳನ್ನು ಬಾಕ್ಸ್ ಮತ್ತು ಬ್ಯಾಗ್ ಮುಖಾಂತರ ಮಾರಾಟ ಮಾಡಿರುತ್ತಾರೆ. ಈ ಬಾಕ್ಸ್ ಹಾಗೂ ಬ್ಯಾಗ್ ತೋಟಗಾರಿಕೆ ಇಲಾಖೆಯಿಂದ ಆರ್.ಕೆ.ವಿ.ವೈ ಯೋಜನೆಯಡಿ ರೈತರಿಗೆ ಸಹಾಯಧನ ಮುಖಾಂತರ ಪೂರೈಸಲಾಗಿತ್ತು. ಈ ಮೇಳದಲ್ಲಿ ಪರಂಪರಾಗತ ಕೃಷಿ ವಿಕಾಸ ಯೋಜನೆಯಡಿ (ಪಿಕೆವಿವೈ) ನೊಂದಾಯಿಸಿಕೊಂಡ ಮಾವು ಬೆಳೆಗಾರರು ಹಣ್ಣು ಮಾರಾಟ ಮಾಡಿದರು. ಜಗತ್ತಿನ ದುಬಾರಿ ಮಾವು ಮಿಯಾಜಾಕಿ ಮುಂದಿನ ವರ್ಷದ ಕೊಪ್ಪಳ ಮಾವು ಮೇಳದಲ್ಲಿ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರಾಟಕ್ಕೆ ಲಭ್ಯವಾಗುವ ಸಾಧ್ಯತೆ ಇರುತ್ತದೆ ಎಂದು ಕೊಪ್ಪಳ ತೋಟಗಾರಿಕೆ ಜಂಟಿ ನಿರ್ದೇಶಕ ಕೃಷ್ಣ ಸಿ.ಉಕ್ಕುಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.