ಹೂವಿನಹಡಗಲಿ: ಕಲ್ಯಾಣ ಕರ್ನಾಟಕ ಪ್ರದೇಶ ವ್ಯಾಪ್ತಿಯ ಜಿಲ್ಲೆಗಳಲ್ಲಿ ಮೊದಲು ಶಿಕ್ಷಣಕ್ಕೆ ಆದ್ಯತೆಯ ಜತೆಗೆ ಕೈಗಾರಿಕೆ, ಮೂಲಭೂತ ಸೌಕರ್ಯ, ತಾಂತ್ರಿಕ, ಕೌಶಲ್ಯ ಆಧಾರಿತ ಶಿಕ್ಷಣ ನೀಡುವ ಮೂಲಕ ಈ ಭಾಗದ ಅಸಮತೋಲನ ತೊಲಗಿಸಬೇಕಿದೆ ಎಂದು ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಕುಲಪತಿ ಎಂ.ಮುನಿರಾಜು ಹೇಳಿದರು.

ಇಲ್ಲಿನ ಜಿಬಿಆರ್ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ಕರ್ನಾಟಕದಲ್ಲಿ ಪ್ರಾದೇಶಿಕ ಅಸಮತೋಲನೆ ವಿಚಾರ ಸಂಕಿರಣದಲ್ಲಿ ಸ್ಮರಣ ಸಂಚಿಕೆ ಲೋಕಾರ್ಪಣೆ ಮಾಡಿ ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡಿದಾಗ ಈ ಭಾಗದ ಆರ್ಥಿಕ, ಸಾಮಾಜಿಕ ಅಸಮಾನತೆ ದೂರ ಮಾಡಲು ಸಾಧ್ಯವಾಗುತ್ತದೆ. ಒಬ್ಬ ವಿದ್ಯಾವಂತ ಯುವಕನಿಗೆ ಉದ್ಯೋಗ ಸಿಕ್ಕರೆ ಅವರ ಕುಟುಂಬ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಉದ್ಯೋಗ ಸೃಷ್ಟಿಸುವವರ ಸಂಖ್ಯೆ ಹೆಚ್ಚಾಗಬೇಕಿದೆ. ಈ ದಿಸೆಯಲ್ಲಿ ವಿಶ್ವವಿದ್ಯಾಲಯಗಳು ವೃತ್ತಿ ಶಿಕ್ಷಣ, ಕೌಶಲ್ಯ ಬೆಳೆಸುವಂಥ ಶಿಕ್ಷಣ ವ್ಯವಸ್ಥೆ ಅಳವಡಿಸಿಕೊಳ್ಳಬೇಕಿದೆ ಎಂದರು.

ವೀವಿ ಸಂಘದ ಕಾರ್ಯದರ್ಶಿ ಡಾ.ಅರವಿಂದ ಪಾಟೀಲ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಾನವನ ಅಭಿವೃದ್ಧಿ ಸೂಚ್ಯಾಂಕಕ್ಕೆ ಅಕ್ಷರ, ಆರೋಗ್ಯ, ಆಶ್ರಯ ಅಗತ್ಯವಿದೆ. ವೀವಿ ಸಂಘ ಶತಮಾನದಿಂದ ಬಡ ಮಕ್ಕಳಿಗೆ ಅಕ್ಷರ ದಾಸೋಹ ನಿರಂತರ ಮಾಡುತ್ತಿದೆ, ಆ ಮೂಲಕ ತಕ್ಕಟ್ಟಿನ ಪ್ರಾದೇಶಿಕ ಅಸಮತೋಲನೆ ನಿವಾರಣೆಯ ಕೆಲಸ ಮಾಡುತ್ತಿದೆ. ಈ ಭಾಗದ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ಹೊಸದಾಗಿ ವಿವಿಧ ಕೋರ್ಸ್ ಗಳನ್ನು ಆರಂಭಿಸಲಾಗಿದೆ ಎಂದರು.

ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸದಸ್ಯ ಡಾ.ಎಸ್.ಟಿ.ಬಾಗಲಕೋಟೆ, ರಾಜ್ಯ ಯೋಜನಾ ಆಯೋಗದ ಸದಸ್ಯೆ ಡಾ.ಸಂಗೀತಾ ಕಟ್ಟಿಮನಿ, ಪ್ರಾಚಾರ್ಯ ಎಸ್.ಎಸ್.ಪಾಟೀಲ್ ಮಾತನಾಡಿದರು.

ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಿ.ಮೋಹನರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಆಡಳಿತ ಮಂಡಳಿ ಸದಸ್ಯರಾದ ಕೆ.ಎಂ.ಉದಾಸಿ, ಎಂ.ಮಲ್ಲಿಕಾರ್ಜುನ, ಸೊಪ್ಪಿನ ಪ್ರಕಾಶ, ಕೆ.ಪ್ರಕಾಶ, ಕೊಟ್ಟೂರು ಕಾಲೇಜು ಪ್ರಾಚಾರ್ಯ ರವಿಕುಮಾರ್ ಇದ್ದರು.