ರಾಬಕೋ ಅಧ್ಯಕ್ಷ ಸ್ಥಾನಕ್ಕೆ ಕೊಪ್ಪಳ ಶಾಸಕ ರಾಘವೇಂದ್ರ?

KannadaprabhaNewsNetwork |  
Published : Jul 21, 2025, 12:00 AM IST
ಸಸಸಸಸಸಸ | Kannada Prabha

ಸಾರಾಂಶ

ಯಲಬುರ್ಗಾ ತಾಲೂಕಿನ ಹಂಪಯ್ಯಸ್ವಾಮಿ ಹಿರೇಮಠ ನಾಮನಿರ್ದೇಶನ ರದ್ದು ಮಾಡಿ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರನ್ನು ನಾಮನಿರ್ದೇಶನ ಮಾಡಲು ಸರ್ಕಾರ ಮುಂದಾಗಿದೆ

ಸೋಮರಡ್ಡಿ ಅಳವಂಡಿ ಕೊಪ್ಪಳ

ರಾಯಚೂರು, ಬಳ್ಳಾರಿ, ಕೊಪ್ಪಳ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಭಾರಿ ಪೈಪೋಟಿ ನಡೆಯುತ್ತಿದ್ದು, ಈಗಿನ ಬೆಳವಣಿಗೆಯಲ್ಲಿ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಮಾಜಿ ಶಾಸಕ ಭೀಮಾನಾಯ್ಕ ನಡುವಿನ ಪೈಪೋಟಿಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಪರ ಒಲವು ಹೆಚ್ಚಿದೆ.

ರಾಬಕೋ ಹಾಲು ಒಕ್ಕೂಟದ ನಿರ್ದೇಶಕ ಹುದ್ದೆ ಹೊಂದಿರದ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಸರ್ಕಾರದಿಂದ ನಾಮನಿರ್ದೇಶನವಾಗುವುದು ಬಹುತೇಕ ಪಕ್ಕಾ ಆಗಿದೆ.

ಯಲಬುರ್ಗಾ ತಾಲೂಕಿನ ಹಂಪಯ್ಯಸ್ವಾಮಿ ಹಿರೇಮಠ ನಾಮನಿರ್ದೇಶನ ರದ್ದು ಮಾಡಿ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರನ್ನು ನಾಮನಿರ್ದೇಶನ ಮಾಡಲು ಸರ್ಕಾರ ಮುಂದಾಗಿದೆ. ಜು. 21ರಂದು ನಾಮನಿರ್ದೇಶನ ಆದೇಶ ಹೊರ ಬೀಳಲಿದೆ ಎನ್ನುವ ಖಚಿತ ಮಾಹಿತಿ ''''ಕನ್ನಡಪ್ರಭ''''ಕ್ಕೆ ಲಭ್ಯವಾಗಿದೆ.

ಬಲಾಬಲ: ರಾಬಕೊ ಹಾಲು ಒಕ್ಕೂಟದಲ್ಲಿ 12 ನಿರ್ದೇಶಕರು ಚುನಾಯಿತರಿದ್ದಾರೆ ಹಾಗೂ ಓರ್ವ ನಾಮನಿರ್ದೇಶಕರಿದ್ದಾರೆ. ಈಗ ನಾಮ ನಿರ್ದೇಶಕರಾಗಿದ್ದ ಹಂಪಯ್ಯಸ್ವಾಮಿ ನಾಮನಿರ್ದೇಶನ ರದ್ದು ಮಾಡಿ ಆ ಜಾಗಕ್ಕೆ ಶಾಸಕ ರಾಘವೇಂದ್ರ ಹಿಟ್ನಾಳ ಅವರನ್ನು ನೇಮಕ ಮಾಡಲಾಗುತ್ತದೆ. ಇದಲ್ಲದೆ ಪದನಿಮಿತ್ತ ಹಾಲು ಒಕ್ಕೂಟದ ಪದಾಧಿಕಾರಿಗಳಿಗೆ ಮೂವರಿಗೆ ನಿರ್ದೇಶಕ ಹುದ್ದೆ ಸೇರಿದಂತೆ 16 ನಿರ್ದೇಶಕರ ಬಲ ರಾಬಕೊ ಹೊಂದಿದೆ.

ಈಗಿರುವ ಬೆಳವಣಿಗೆಯಲ್ಲಿ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಪರ 7 ನಿರ್ದೇಶಕರು ಹಾಗೂ ಭೀಮಾನಾಯ್ಕ ಪರ ಐವರು ನಿರ್ದೇಶಕರು ಇದ್ದಾರೆ ಎಂದು ಹೇಳಲಾಗುತ್ತದೆ. ಸರ್ಕಾರದ ಸೂಚನೆಯ ಮೇರೆಗೆ ಪದನಿಮಿತ್ತ ನಿರ್ದೇಶಕರು ಮತ ಚಲಾಯಿಸಲಿದ್ದಾರೆ. ಹೀಗಾಗಿ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಪರ 10 ನಿರ್ದೇಶಕರ ಬೆಂಬಲ ದೊರೆಯಲಿದೆ ಎನ್ನುವುದು ಭಾನುವಾರ ತಡರಾತ್ರಿಯಲ್ಲಾಗಿರುವ ಬೆಳವಣಿಗೆಯಿಂದ ಗೊತ್ತಾಗಿರುವ ಸಂಗತಿಯಾಗಿದೆ. ಆದರೆ, ಈಗಾಗಲೇ ಕಳೆದ ಬಾರಿ ಅಧ್ಯಕ್ಷನಾಗಿದ್ದ ಭೀಮಾನಾಯ್ಕ ಪ್ರಯತ್ನ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ಆಪ್ತರಾಗಿರುವ ಭೀಮಾನಾಯ್ಕ ಶಕ್ತಿಮೀರಿ ಮತ್ತೊಮ್ಮೆ ಅಧ್ಯಕ್ಷರಾಗಲೇಬೇಕು ಎಂದು ಪ್ರಯತ್ನ ನಡೆಸಿದ್ದಾರೆ. ಈಗಿರುವ ಬೆಳವಣಿಗೆಯಲ್ಲಿ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅಧ್ಯಕ್ಷರಾಗುತ್ತಾರೆ ಎನ್ನುವುದು ಸಿಎಂ ಆಪ್ತ ವಲಯದಲ್ಲಿರುವ ಮಾತಾಗಿದ್ದು, ಕೊನೆಗಳಿಗೆಯಲ್ಲಾಗುವ ಬದಲಾವಣೆಯಲ್ಲಿ ಏನು ಬೇಕಾದರೂ ಆಗಬಹುದು.

25ರಂದು ಚುನಾವಣೆ: ರಾಬಕೊ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಜು. 25ರಂದು ಬೆಳಗ್ಗೆ 11 ಗಂಟೆಗೆ ಚುನಾವಣೆ ಸಮಯ ನಿಗದಿಯಾಗಿದ್ದು, ನಿರ್ದೇಶಕರಿಗೆ ನೋಟಿಸ್ ಸಹ ಜಾರಿ ಮಾಡಲಾಗಿದೆ. ಅಷ್ಟರೊಳಗಾಗಿ ನಾಮನಿರ್ದೇಶನ ಪ್ರಕ್ರಿಯೆ ಪೂರ್ಣಗೊಳ್ಳಬೇಕಾಗಿದೆ.

ಗಂಭೀರ ಚರ್ಚೆ: ಇಷ್ಟೆಲ್ಲ ಬೆಳವಣಿಗೆಯಾದರೂ ಚೆಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅಂಗಳದಲ್ಲಿಯೇ ಇದೆ. ರಾಬಕೊ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಕೇವಲ ರಾಬಕೊ ಚುನಾವಣೆಗೆ ಮಾತ್ರ ಸಂಬಂಧಿಸಿದ್ದಾಗಿಲ್ಲ. ಇದು ಕೆಎಂಎಫ್ ಚುನಾವಣೆಯ ಮೇಲೆಯೂ ಪರಿಣಾಮ ಬೀರುವುದರಿಂದ ಸರ್ಕಾರದ ಹಂತದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಶಾಸಕ ರಾಘವೇಂದ್ರ ಹಿಟ್ನಾಳ ಅವರನ್ನು ನಾಮನಿರ್ದೇಶನ ಮಾಡುವ ಸಂಬಂಧವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಂತದಲ್ಲಿಯೇ ಹಲವಾರು ಬಾರಿ ಚರ್ಚೆಯಾಗಿದೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ.

ಇದೇ ಪ್ರಥಮ: ಶಾಸಕರೊಬ್ಬರು ನಾಮನಿರ್ದೇಶಿತರಾಗಿ ಬಳ್ಳಾರಿ ಹಾಲು ಒಕ್ಕೂಟಕ್ಕೆ ಅಧ್ಯಕ್ಷರಾಗಿ ಆಯ್ಕೆಯಾದರೆ ಇದೇ ಪ್ರಥಮವಾಗಲಿದೆ. ಈ ಹಿಂದೆ ಎಲ್ಲರೂ ಹಾಲು ಒಕ್ಕೂಟದ ಪ್ರತಿನಿಧಿಯಾಗಿ ಆಯ್ಕೆಯಾಗಿ ಬಂದೇ ಅಧ್ಯಕ್ಷರಾಗಿದ್ದು, ಈ ಬಾರಿ ಹೊಸ ಪರಂಪರೆಗೆ ನಾಂದಿಯಾಗುವ ಸಾಧ್ಯತೆ ಇದೆ.

PREV

Latest Stories

ಧರ್ಮಸ್ಥಳ ಗ್ರಾಮ ಕೇಸ್‌: ಇಬ್ಬರು ಐಪಿಎಸ್‌ಗಳು ಎಸ್‌ಐಟಿಯಿಂದ ಔಟ್‌?
ಡಿಕೆಶಿಗೆ ಅಪಮಾನ ಮಾಡುವುದಕ್ಕೆ ಸಿಎಂ ಸಿದ್ದು ಸಮಾವೇಶ: ಅಶೋಕ
ಸಹನೆ, ತಾಳ್ಮೆ, ನೈತಿಕತೆಯಿಂದ ಯಶಸ್ಸು ಸಾಧ್ಯ