ಲಾರ್ವಾಹಾರಿ ಮೀನುಗಳ ಬಿಡುಗಡೆ ಕಾರ್ಯಕ್ರಮಕ್ಕೆ ಕೊಪ್ಪಳದಲ್ಲಿ ಚಾಲನೆ

KannadaprabhaNewsNetwork |  
Published : Jul 06, 2024, 12:45 AM IST
ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಲಾರ್ವಾಹಾರಿ ಮೀನುಗಳ ಬಿಡುಗಡೆ ಕಾರ್ಯಕ್ರಮಕ್ಕೆ ಸಿಇಒ ಚಾಲನೆ ನೀಡಿದರು. | Kannada Prabha

ಸಾರಾಂಶ

ಈಡಿಸ್ ಲಾರ್ವಾ ಸಮೀಕ್ಷೆ ಮತ್ತು ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆಗಾಗಿ ಪ್ರತಿ ಶುಕ್ರವಾರ ಡೆಂಘೀ ನಿಯಂತ್ರಣ ಅಭಿಯಾನ ನಡೆಸಲಾಗುತ್ತಿದೆ. ಕೊಪ್ಪಳ ಜಿಲ್ಲಾಡಳಿತ ಭವನದ ಆವರಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ನೀರಿನ ತೊಟ್ಟಿಯಲ್ಲಿ ಲಾರ್ವಾಹಾರಿ ಮೀನುಗಳ ಬಿಡುಗಡೆ ಮಾಡಲಾಯಿತು.

ಕೊಪ್ಪಳ: ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮ ನಿಮಿತ್ತ ಸೊಳ್ಳೆಗಳಿಂದ ಹರಡುವ ರೋಗಗಳ ಜೈವಿಕ ನಿಯಂತ್ರಣದ ಅಂಗವಾಗಿ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾದ ಲಾರ್ವಾಹಾರಿ ಮೀನುಗಳ ಬಿಡುಗಡೆ ಕಾರ್ಯಕ್ರಮಕ್ಕೆ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ ಶುಕ್ರವಾರ ಜಿಲ್ಲಾಡಳಿತ ಭವನದಲ್ಲಿ ಚಾಲನೆ ನೀಡಿದರು.

ಈಡಿಸ್ ಲಾರ್ವಾ ಸಮೀಕ್ಷೆ ಮತ್ತು ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆಗಾಗಿ ಪ್ರತಿ ಶುಕ್ರವಾರ ಡೆಂಘೀ ನಿಯಂತ್ರಣ ಅಭಿಯಾನ ನಡೆಸಲಾಗುತ್ತಿದೆ. ಜಿಲ್ಲಾಡಳಿತ ಭವನದ ಆವರಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ನೀರಿನ ತೊಟ್ಟಿಯಲ್ಲಿ ಲಾರ್ವಾಹಾರಿ ಮೀನುಗಳ ಬಿಡುಗಡೆ ಮಾಡಲಾಯಿತು.

ಬಳಿಕ ಮಾತನಾಡಿದ ಅವರು, ಡೆಂಘೀ ಜ್ವರ ನಿಯಂತ್ರಣ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ರಾಜ್ಯ ಸರ್ಕಾರ ಆರೋಗ್ಯ ಇಲಾಖೆ ಮೂಲಕ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಿ, ಡೆಂಘೀ ನಿಯಂತ್ರಣಕ್ಕೆ ಎಲ್ಲರೂ ಕೈಜೋಡಿಸಬೇಕು ಹಾಗೂ ಈ ಬಗ್ಗೆ ಸಾರ್ವಜನಿಕರಿಗೆ ಸೂಕ್ತ ಅರಿವು ಮೂಡಿಸಬೇಕು ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣಾಧಿಕಾರಿ ಡಾ. ಟಿ. ಲಿಂಗರಾಜು ಮಾತನಾಡಿ, ಡೆಂಘೀ ಜ್ವರಕ್ಕೆ ಪ್ರಮುಖ ಕಾರಣವಾದ ಈಡಿಸ್ ಸೊಳ್ಳೆಗಳ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿರುವ ದೊಡ್ಡ ದೋಣಿಗಳು, ಕಲ್ಲು ಕ್ವಾರಿಗಳು, ಹೊಂಡಗಳು ಮತ್ತು ಮಳೆ ನೀರು ಸಂಗ್ರಹವಾಗುವ ಇತರ ಸ್ಥಳಗಳಲ್ಲಿ ಲಾರ್ವಾಹಾರಿ ಮೀನುಗಳನ್ನು ಬಿಡಲಾಗುತ್ತಿದೆ. ಈ ಲಾರ್ವಾಹಾರಿ ಮೀನುಗಳು ಈಡಿಸ್ ಸೊಳ್ಳೆಗಳ ಮೊಟ್ಟೆಗಳನ್ನು ತಿಂದು ಅವುಗಳ ಸಂತಾನೋತ್ಪತ್ತಿಯನ್ನು ನಾಶ ಮಾಡುತ್ತವೆ ಎಂದು ಹೇಳಿದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ವೆಂಕಟೇಶ ಕೆ. ಮಾತನಾಡಿ, ಹಗಲು ಹೊತ್ತಿನಲ್ಲಿ ಕಚ್ಚುವ ಈಡಿಸ್ ಈಜಿಪ್ಟ್ ಸೊಳ್ಳೆಗಳಿಂದ ಡೆಂಘೀ ಹರಡುತ್ತದೆ. ಸಾರ್ವಜನಿಕರು ತಮ್ಮ ಮನೆಯಲ್ಲಿರುವ ಸಿಮೆಂಟ್ ತೊಟ್ಟಿ, ಡ್ರಂ, ಬ್ಯಾರೆಲ್, ಬಕೆಟ್ ಹಾಗೂ ಕೊಡಗಳಲ್ಲಿ ನೀರನ್ನು ಶೇಖರಿಸಿದ್ದಲ್ಲಿ ಅವುಗಳನ್ನು ಮುಚ್ಚಿಡಬೇಕು ಮತ್ತು ವಾರಕ್ಕೊಮ್ಮೆ ಅವುಗಳನ್ನು ಸ್ವಚ್ಛಗೊಳಿಸಬೇಕು ಎಂದು ಹೇಳಿದರು.

ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ. ಪ್ರಕಾಶ ವಿ., ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರವಿಂದ್ರನಾಥ ಎಂ.ಎಚ್., ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಂದಕುಮಾರ, ಕೊಪ್ಪಳ ತಾಲೂಕು ಆರೋಗ್ಯಾಧಿಕಾರಿ ಡಾ. ರಾಮಾಂಜನೇಯ, ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಶಿವಾನಂದ ವಿ. ಪೂಜಾರ, ಜಿಲ್ಲಾ ಎನ್‌ವಿಬಿಡಿಸಿಪಿ ಕಾರ್ಯಕ್ರಮ ಸಲಹೆಗಾರ ರಮೇಶ್ ಇದ್ದರು.

ಡೆಂಘೀ ಪರೀಕ್ಷೆಗಾಗಿ ದರಗಳ ಪರಿಷ್ಕರಣೆ: ಡಾ. ಟಿ. ಲಿಂಗರಾಜು

ಕೊಪ್ಪಳ ಜಿಲ್ಲೆಯಲ್ಲಿ ಡೆಂಘೀ ಜ್ವರ ಪತ್ತೆ ಹಚ್ಚುವ ಪರೀಕ್ಷೆಗಳಾದ ಇಎಲ್‌ಐಎಸ್‌ಎ ಹಾಗೂ ರ‍್ಯಾಪಿಡ್‌ ಟೆಸ್ಟ್‌ಗಳ ದರ ಮರುನಿಗದಿಪಡಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ. ಲಿಂಗರಾಜು ತಿಳಿಸಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಹಾಗೂ ಖಾಸಗಿ ಟೆಸ್ಟಿಂಗ್ ಲ್ಯಾಬ್‌ಗಳಿಗೆ ಡೆಂಘೀ ಜ್ವರ ಪತ್ತೆ ಹಚ್ಚುವ ಇಎಲ್‌ಐಎಸ್‌ಎ ಎನ್‌ಎಸ್1 ಪರೀಕ್ಷೆಗೆ ₹300, ಇಎಲ್‌ಐಎಸ್‌ಎ ಐಜಿಎಂ ಪರೀಕ್ಷೆಗೆ ₹300 ಹಾಗೂ ಸ್ಕ್ರೀನಿಂಗ್ ಟೆಸ್ಟ್: ರ‍್ಯಾಪಿಡ್‌ ಕಾರ್ಡ್ ಟೆಸ್ಟ್ ಫಾರ್ ಎನ್‌ಎಸ್1 ಐಜಿಎಂ ಮತ್ತು ಐಜಿಜಿ ಪರೀಕ್ಷೆಗಳಿಗೆ ₹250 ದರ ಮರುನಿಗದಿಗೊಳಿಸಿದೆ.

ಎಲ್ಲ ಖಾಸಗಿ ಆಸ್ಪತ್ರೆಗಳು, ಖಾಸಗಿ ಪ್ರಯೋಗಶಾಲೆಗಳು, ಡಯಾಗ್ನೋಸ್ಟಿಕ್ ಲ್ಯಾಬ್‌ಗಳು ಡೆಂಘೀ ಪತ್ತೆ ಹಚ್ಚುವ ಪರೀಕ್ಷೆಯ ಪರಿಷ್ಕೃತ ದರಗಳ ಆದೇಶವನ್ನು ಕಡ್ಡಾಯವಾಗಿ ಪಾಲಿಸುವಂತೆ ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಟೋ ಚಾಲಕರಿಗೆ 20000 ಪರಿಹಾರಕ್ಕೆ ಆಗ್ರಹ
ನಿರ್ಲಕ್ಷ್ಯ ಚಾಲನೆಯಿಂದ ಬೈಕ್‌ಗೆಡಿಕ್ಕಿ: ಟೆಕ್ಕಿಗೆ ಹೈಕೋರ್ಟ್‌ ತರಾಟೆ