ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಧಾನಿಯಲ್ಲಿ ಆಟೋ ಗ್ಯಾಸ್‌ ಸಮಸ್ಯೆ ಪರಿಹಾರವಾಗದೇ ಇರುವುದರಿಂದ ಸಂಕಷ್ಟದಲ್ಲಿರುವ ಆಟೋ ಚಾಲಕರಿಗೆ ರಾಜ್ಯಸರ್ಕಾರ 20 ಸಾವಿರ ರು. ಪರಿಹಾರ ನೀಡಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಆದರ್ಶ ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್, ಫೈನಾನ್ಸ್‌ನಲ್ಲಿ ಮಾಡಿರುವ ಸಾಲ, ಸ್ಕೂಲ್ ಫೀಸ್ ಕಟ್ಟಲು ಕಾಲಾವಕಾಶ ನೀಡಬೇಕು. ಆಟೋ ಚಾಲಕರಿಗೆ 20 ಸಾವಿರ ರು. ಪರಿಹಾರ ನೀಡಬೇಕು ಎಂದು ಮನವಿ ಮಾಡಲಾಗುವುದು ಎಂದರು.

ನಗರದಲ್ಲಿ 2.10 ಲಕ್ಷ ಆಟೋಗಳಿದ್ದು 300 ಟನ್ ಎಲ್‌ಪಿಜಿ ಗ್ಯಾಸ್ ಅವಶ್ಯಕತೆ ಇದೆ. ಆದರೆ ಗ್ಯಾಸ್‌ ಸಮರ್ಪಕವಾಗಿ ಸಿಗುತ್ತಿಲ್ಲ.ನಿತ್ಯದ ದುಡಿಮೆ‌ಯನ್ನೇ ನಂಬಿಕೊಂಡಿರುವ ಆಟೋ ಚಾಲಕರ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವರಿಗೆ ಕಪ್ಪು ಬಾವುಟ ಪ್ರದರ್ಶನ: ಏ.10ರೊಳಗೆ ಆಟೋ ಗ್ಯಾಸ್‌ ಸಮಸ್ಯೆ ಪರಿಹರಿಸದಿದ್ದರೆ ಸಚಿವರ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ಪೀಸ್ ಆಟೋ ಸಂಘಟನೆ ಅಧ್ಯಕ್ಷ ರಘು ಎಚ್ಚರಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶುಕ್ರವಾರದೊಳಗೆ ಆಟೋ ಗ್ಯಾಸ್‌ ಸಮಸ್ಯೆ ಪರಿಹರಿಸಬೇಕು. ಇಲ್ಲದಿದ್ದರೆ ಸಚಿವರ ವಿರುದ್ಧ ಕಪ್ಪು ಬಾವುಟ ಪ್ರದರ್ಶನದ ಹೋರಾಟ ಹಮ್ಮಿಕೊಳ್ಳಲಾಗುವುದು. ಗ್ಯಾಸ್ ದರ ಏರಿಕೆ ಆಗಿದೆ, ಆದರೆ ಆಟೋ ದರ ಏರಿಕೆ ಆಗಿಲ್ಲ. ಆದ್ದರಿಂದ ಪ್ರತಿ ಆಟೋ ಪ್ರಯಾಣಕ್ಕೆ 20 ರುಪಾಯಿ ಹೆಚ್ಚುವರಿ ಮಾಡಬೇಕಾಗಿದೆ. ರಾಜ್ಯದ ಸಂಸದರು ಯಾರೂ ಗ್ಯಾಸ್‌ ಸಮಸ್ಯೆ ಬಗ್ಗೆ ಧ್ವನಿ ಎತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಮುಂದುವರಿದ ಸಂಕಷ್ಟ: ನಗರದಲ್ಲಿ ಸೋಮವಾರವೂ ಆಟೋ ಗ್ಯಾಸ್‌ ಸಮಸ್ಯೆ ಮುಂದುವರೆದಿದ್ದು ಚಾಲಕರು ಗ್ಯಾಸ್‌ಗಾಗಿ ಸರದಿ ಸಾಲಿನಲ್ಲಿ ನಿಂತಿರುವುದು ಹಲವೆಡೆ ಕಂಡುಬಂತು. ಚಾಮರಾಜಪೇಟೆ ರಸ್ತೆಯಲ್ಲಿರುವ ಭಾರತ್ ಪೆಟ್ರೋಲಿಯಂ ಬಂಕ್‌ನಲ್ಲಿ ಭಾನುವಾರ ಕೆಲಹೊತ್ತು ಗ್ಯಾಸ್‌ ತುಂಬಿಸಲಾಗಿತ್ತು. ಆದ್ದರಿಂದ ಸೋಮವಾರ ಗ್ಯಾಸ್‌ ತುಂಬಿಸಲು ಬಂದಾಗ ನೋ ಸ್ಟಾಕ್‌ ಬೋರ್ಡ್‌ ನೋಡಿ ಚಾಲಕರು ಹಿಂದಿರುಗಿದರು. ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿಯ ಭಾರತ್ ಪೆಟ್ರೋಲಿಯಂ ಬಂಕ್‌ನಲ್ಲಿ ಪೊಲೀಸ್ ಭದ್ರತೆಯೊಂದಿಗೆ ಗ್ಯಾಸ್ ಫಿಲ್ಲಿಂಗ್ ಮಾಡಲಾಯಿತು. ಬೆಳಗ್ಗೆಯಿಂದಲೇ ನೂರಾರು ಆಟೋಗಳು ಹೊಸಹಳ್ಳಿ ಮೆಟ್ರೋ ಸ್ಟೇಷನ್‌ವರೆಗೂ ಸಾಲುಗಟ್ಟಿ ನಿಂತಿದ್ದು ಪ್ರತಿ ಆಟೋಗೆ 500 ರು. ಮೌಲ್ಯದ ಗ್ಯಾಸ್‌ ತುಂಬಿಸಲಾಯಿತು.

ಸಿಬ್ಬಂದಿಗೆ ರಜೆ: ಜೆ.ಸಿ.ರಸ್ತೆಯಲ್ಲಿರುವ ಟೋಟಲ್‌ ಎನರ್ಜಿಸ್‌ ಬಂಕ್‌ನಲ್ಲಿ ಗ್ಯಾಸ್‌ ಅಭಾವದಿಂದ ಮಾ.30 ರಿಂದಲೇ ಬಂಕ್‌ ಬಂದ್‌ ಮಾಡಿ 10ಕ್ಕೂ ಅಧಿಕ ಸಿಬ್ಬಂದಿಗೆ ರಜೆ ನೀಡಲಾಗಿದೆ.