ಉಡುಪಿ-ಚಿಕ್ಕಮಗಳೂರು: 2.59 ಲಕ್ಷ ಮತಗಳಿಂದ ಗೆದ್ದ ಕೋಟ ಶ್ರೀನಿವಾಸ ಪೂಜಾರಿ

KannadaprabhaNewsNetwork |  
Published : Jun 05, 2024, 12:31 AM ISTUpdated : Jun 05, 2024, 12:32 AM IST
ಕೋಟ | Kannada Prabha

ಸಾರಾಂಶ

ಲೋಕಸಭಾ ಚುನಾವಣೆಯಲ್ಲಿ ಕೋಟ ತಮ್ಮ ನೇರ ಎದುರಾಳಿ ಕಾಂಗ್ರೆಸ್‌ನ ಕೆ. ಜಯಪ್ರಕಾಶ್ ಹೆಗ್ಡೆ ಅವರನ್ನು 2,59,175 ಮತಗಳ ಅಂತರದಿಂದ ಸೋಲಿಸಿ, ಈ ಕ್ಷೇತ್ರದ 5ನೇ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಲೋಕಸಭೆಯಲ್ಲಿ ಮುಂದಿನ 5 ವರ್ಷಗಳ ಕಾಲ ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಅವರು ಪ್ರತಿನಿಧಿಸಲಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಅವರು ತಮ್ಮ ನೇರ ಎದುರಾಳಿ ಕಾಂಗ್ರೆಸ್‌ನ ಕೆ. ಜಯಪ್ರಕಾಶ್ ಹೆಗ್ಡೆ ಅವರನ್ನು 2,59,175 ಮತಗಳ ಅಂತರದಿಂದ ಸೋಲಿಸಿ, ಈ ಕ್ಷೇತ್ರದ 5ನೇ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಅವರು 7,32,234 ಮತಗಳನ್ನು ಗಳಿಸಿದ್ದರೆ, ಸೋತ ಜಯಪ್ರಕಾಶ್ ಹೆಗ್ಡೆ ಅವರು 4,73,059 ಮತಗಳನ್ನು ಗಳಿಸುವುದಷ್ಟೇ ಸಾಧ್ಯವಾಗಿದೆ.

ಸಂಪೂರ್ಣವಾಗಿ ದ್ವಿಪಕ್ಷಿಯಾವಾಗಿದ್ದ ಈ ಕಣದಲ್ಲಿದ್ದ ಇತರ 5 ಪಕ್ಷಗಳ ಮತ್ತು 2 ಪಕ್ಷೇತರ ಅಭ್ಯರ್ಥಿಗಳು ದಯನೀಯವಾಗಿ ಸೋತು ಇಡುಗಂಟನ್ನೂ ಕಳೆದುಕೊಂಡಿದ್ದಾರೆ.

ಇದಕ್ಕೆ ಮೊದಲು 2019ರಲ್ಲಿ ಬಿಜೆಪಿಯ ಶೋಭಾ ಕರಂದ್ಲಾಜೆ ಅವರು 3,74,433 ಮತಗಳ ಅಂತರದಿಂದ ಗೆದ್ದು ದಾಖಲೆ ನಿರ್ಮಿಸಿದ್ದರು. ಆದರೆ ಈ ಬಾರಿ ಬಿಜೆಪಿ ಗೆದ್ದಿದೆಯಾದರೂ ಈ ಅಂತರ ಗಣನೀಯವಾಗಿ ಕಡಿಮೆಯಾಗಿದೆ.

ಪ್ರಸ್ತುತ ವಿಧಾನ ಪರಿಷತ್ತಿನಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಜನಪ್ರತಿನಿಧಿ, ವಿಪಕ್ಷ ನಾಯಕರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರು ಈಗ ಲೋಕಸಭೆಯನ್ನು ಪ್ರವೇಶಿಸುತ್ತಿರುವುದರಿಂದ, ವಿಧಾನ ಪರಿಷತ್ತಿನಲ್ಲಿ ಇನ್ನೊಂದು ಸ್ಥಾನ ಖಾಲಿಯಾಗಲಿದೆ.

* ಆರಂಭದಿಂದಲೂ ಮುನ್ನಡೆ

ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮೊದಲ ಸುತ್ತಿನಲ್ಲಿಯೇ 14,453 ಮತಗಳ ಮುನ್ನಡೆ ಸಿಕ್ಕಿತ್ತು. ನಂತರ ಅವರು ಹಿಂತಿರುಗಿ ನೋಡದೇ ಸತತವಾಗಿ ಮುನ್ನಡೆಯಲ್ಲಿದ್ದರು. 5ನೇ ಸುತ್ತಿನಲ್ಲಿ 16,050 ಮತಗಳು, 10ನೇ ಸುತ್ತಿನಲ್ಲಿ 22,448 ಮತಗಳು, 15ನೇ ಸುತ್ತಿನಲ್ಲಿ 19,008, ಕೊನೆಯ 19ನೇ ಸುತ್ತಿನಲ್ಲಿ 1,725 ಮತಗಳ ಅಂತರವಿದ್ದು, ಅಂತಿಮವಾಗಿ 2,58,903 ಮತಗಳ ಅಂತರದಲ್ಲಿ ಗೆದ್ದರು.

* ಅಂಚೆಮತ - ಕೋಟ ಮುಂದೆ

ಚುನಾವಣಾ ಕಾರ್ಯದಲ್ಲಿ ಕರ್ತವ್ಯ ನಿರತರು ಮತ್ತು ಇತರ ಸೇವಾ ಮತದಾರರು ಸಲ್ಲಿಸಿದ್ದ ಒಟ್ಟು 6479 ಮತಗಳಲ್ಲಿ 4015 ಮಂದಿ ಬಿಜೆಪಿಯ ಕೋಟ ಅವರಿಗೆ ಮತ ಹಾಕಿದ್ದರೆ, 2290 ಮಂದಿ ಜಯಪ್ರಕಾಶ್ ಹೆಗ್ಡೆ ಪರ ಮತ ಚಲಾಯಿಸಿದ್ದಾರೆ. 140 ಮಂದಿ ಇತರ 8 ಅಭ್ಯರ್ಥಿಗಳಿಗೆ ಮತ ಹಾಕಿದ್ದಾರೆ. 34 ಮಂದಿ ನೋಟಾ ಮತ ಚಲಾಯಿಸಿದ್ದಾರೆ.ಠೇವಣಿ ಕಳೆದುಕೊಂಡವರಿವರು..

ಉಡುಪಿ-ಚಿಕಮಗಳೂರು ಕ್ಷೇತ್ರದ ಕಣದಲ್ಲಿದ್ದ ಜನಹಿತ ಪಕ್ಷದ ಅಭ್ಯರ್ಥಿ ಸುಪ್ರೀತ್‌ ಕುಮಾರ್‌ ಪೂಜಾರಿ ಕಟೀಲ್ (690), ಉತ್ತಮ ಪ್ರಜಾಕೀಯ ಪಕ್ಷದ ಸಚಿನ್‌ ಬಿ.ಕೆ. (1333), ಬಹುಜನ ಸಮಾಜ ಪಕ್ಷದ ಕೆ.ಟಿ.ರಾಧಾಕೃಷ್ಣ (5417), ಪ್ರೌಟಿಸ್ಟ್‌ ಸರ್ವ ಸಮಾಜ ಪಕ್ಷದ ಅಭ್ಯರ್ಥಿ ಎಂ.ಕೆ.ದಯಾನಂದ (1069), ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಎಲ್‌.ರಂಗನಾಥ ಗೌಡ (540), ಕರುನಾಡ ಸೇವಕರ ಪಕ್ಷದ ಶಬರೀಶ್‌ (565), ಪಕ್ಷೇತರ ಅಭ್ಯರ್ಥಿಗಳಾದ ಸುಧೀರ್‌ ಕಾಂಚನ್‌ (2286) ಹಾಗೂ ಎಂ.ಜಿ.ವಿಜಯ (956) ಅವರು ಕುಮಾರ್‌ ಠೇವಣಿಯನ್ನೂ ಕಳೆದುಕೊಂಡಿದ್ದಾರೆ. * ಕ್ಷೇತ್ರದಲ್ಲಿ ಕಾಂಗ್ರೆಸ್ ಬಲವರ್ಧನೆ

2019ರಲ್ಲಿ ಬಿಜೆಪಿಯ ಶೋಭಾ ಕರಂದ್ಲಾಜೆ ಶೇ.62.46ರಷ್ಟು ಮತಗಳನ್ನು ಗಳಿಸಿ ಗೆದ್ದಿದ್ದರು. ಅವರ ಎದುರಾಳಿ ಜೆಡಿಎಸ್‌ನ ಪ್ರಮೋದ್ ಮಧ್ವರಾಜ್ ಕೇವಲ 32.09 ಮತಗಳನ್ನು ಗಳಿಸಿದ್ದರು. ಗೆಲುವಿನ ಅಂತರ ಶೇ.30.37 ಇತ್ತು. ಆದರೆ ಈ ಬಾರಿ ಬಿಜೆಪಿ ಗೆದ್ದರೂ ಗಳಿಸಿದ ಮತಗಳು ಶೇ.59.80 ಆಗಿದೆ. ಸೋತ ಕಾಂಗ್ರೆಸ್ ಶೇ.38.63ರಷ್ಟು ಮತಗಳನ್ನು ಗಳಿಸಿದ್ದಾರೆ. ಸೋಲಿನ ಅಂತರ ಶೇ.21.17ಕ್ಕೆ ಇಳಿದಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಬಲ ಹೆಚ್ಚಿಸಿಕೊಂಡಿದೆ. ಕಾಂಗ್ರೆಸ್ ಬಲವರ್ಧನೆಯ ಸಂಪೂರ್ಣ ಶ್ರೇಯಸ್ಸು ಜಯಪ್ರಕಾಶ್ ಹೆಗ್ಡೆ ಅವರಿಗೆ ಸಲ್ಲುತ್ತದೆ.

* ಹೆಗ್ಡೆ ಅವರಿಗೆ ಸೋಲು ಹೊಸತಲ್ಲ..

ಕೋಟ ಶ್ರೀನಿವಾಸ ಪೂಜಾರಿ ಅವರು ಪ್ರಥಮ ಬಾರಿಗೆ ಲೋಕಸಭೆ ಪ್ರವೇಶಿಸುತ್ತಿದ್ದಾರೆ. ಆದರೆ ಜಯಪ್ರಕಾಶ್ ಹೆಗ್ಡೆ ಅವರು ಕಾಂಗ್ರೆಸ್‌ನಿಂದ 2012ರಿಂದ 14ರ ವರೆಗೆ ಅಲ್ಪಾವಧಿಗೆ ಸಂಸದರಾಗಿದ್ದವರು. ಅದಕ್ಕೆ ಮೊದಲು ಅವರು ಲೋಕಸಭೆಗೆ 2009ರಲ್ಲಿ, ನಂತರ 2014ರಲ್ಲಿ ಕಾಂಗ್ರೆಸ್‌ನಿಂದಲೇ ಸ್ಪರ್ಧಿಸಿ ಸೋತಿದ್ದರು. ನಂತರ ಬಿಜೆಪಿ ಸೇರಿದರು. ಬಿಜೆಪಿ ರಾಜ್ಯ ಸರ್ಕಾರದ ಅವಧಿಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದರು.

ಗಮನಾರ್ಹ ಎಂದರೆ ಕಾಂಗ್ರೆಸ್ ಸರ್ಕಾರ ತನ್ನ ಆಡಳಿತ ಅವಧಿಯಲ್ಲಿ ಹೆಗ್ಡೆ ಅವರನ್ನು ಕೆಳಗಿಳಿಸದೇ 2 ಬಾರಿ ಅಧಿಕಾರಾವಧಿಯನ್ನು ಮುಂದುವರಿಸಿದ್ದು ಅವರಿಗೆ ಗಾಳ ಹಾಕಿದ್ದು ಸ್ಪಷ್ಟವಾಗಿತ್ತು. ಅದರಂತೆ ಅವರು ಮತ್ತೆ ಕಾಂಗ್ರೆಸ್ ಸೇರಿ ಸ್ಪರ್ಧಿಸಿ, ವೀರೋಚಿತ ಸೋಲನ್ನನುಭಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''